ಉತ್ತರ ಪ್ರದೇಶದ ಬೆನ್ನಲ್ಲೇ ಇದೀಗ ರಾಜಸ್ಥಾನ ಸರ್ಕಾರವೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳ ಓದನ್ನು ಕಡ್ಡಾಯಗೊಳಿಸಿ ಡಿ.31ರಂದು ಆದೇಶ ಹೊರಡಿಸಿದೆ. ಮಕ್ಕಳಲ್ಲಿ ಸಾಮಾನ್ಯ ಜ್ಞಾನ, ಭಾಷಾ ಸಂಪತ್ತು ಮತ್ತು ಓದಿನ ಹವ್ಯಾಸವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ

ಜೈಪುರ: ಉತ್ತರ ಪ್ರದೇಶದ ಬೆನ್ನಲ್ಲೇ ಇದೀಗ ರಾಜಸ್ಥಾನ ಸರ್ಕಾರವೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳ ಓದನ್ನು ಕಡ್ಡಾಯಗೊಳಿಸಿ ಡಿ.31ರಂದು ಆದೇಶ ಹೊರಡಿಸಿದೆ. ಮಕ್ಕಳಲ್ಲಿ ಸಾಮಾನ್ಯ ಜ್ಞಾನ, ಭಾಷಾ ಸಂಪತ್ತು ಮತ್ತು ಓದಿನ ಹವ್ಯಾಸವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಮಕ್ಕಳು ಬೆಳಿಗ್ಗೆ ಪ್ರಾರ್ಥನೆ ಸಮಯದಲ್ಲಿ ಕನಿಷ್ಠ 10 ನಿಮಿಷ ರಾಷ್ಟ್ರೀಯ ಮಟ್ಟದ ಒಂದು ಇಂಗ್ಲಿಷ್ ಮತ್ತು ಒಂದು ಹಿಂದಿ ಪತ್ರಿಕೆಯನ್ನು ಜೋರಾಗಿ ಓದಬೇಕು. ಶಿಕ್ಷಕರು ಪ್ರತಿದಿನ 5 ಹೊಸ ಪದಗಳನ್ನು ಆಯ್ದು ಅದರ ಅರ್ಥವನ್ನು ವಿವರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಹೊಸ ನಿಯಮವು ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಗಳು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅನ್ವಯವಾಗಲಿದೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶ ಸರ್ಕಾರವೂ ಇಂಥದ್ದೇ ಆದೇಶ ಮಾಡಿತ್ತು.

ತೆಲಂಗಾಣ: ಸ್ಥಳೀಯ ಚುನಾವಣೆ ಸ್ಪರ್ಧೆಗೆ 2 ಮಕ್ಕಳ ನಿಯಮ ರದ್ದು

ಹೈದರಾಬಾದ್: 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹರಾಗುವ 2 ಮಕ್ಕಳ ನಿಯಮವನ್ನು ತೆಗೆದುಹಾಕುವ ಮಸೂದೆಯನ್ನು ತೆಲಂಗಾಣ ವಿಧಾನಸಭೆ ಶನಿವಾರ ಅಂಗೀಕರಿಸಿದೆ. 

1994ರಲ್ಲಿ 2 ಮಕ್ಕಳ ನಿಯಮವನ್ನು ಪರಿಚಯಿಸಲಾಯಿತು.

ತೆಲಂಗಾಣ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ-2026 ಅನ್ನು ಮಂಡಿಸಿದ ಪಂಚಾಯತ್ ರಾಜ್ ಸಚಿವೆ ದಾನಸರಿ ಅನಸೂಯಾ ಸೀತಕ್ಕ, ‘1980 ಮತ್ತು 90ರ ದಶಕದಲ್ಲಿ ಜನಸಂಖ್ಯಾ ಸ್ಫೋಟಕ್ಕೆ ಸಂಬಂಧಿಸಿದ ಆಹಾರ ಭದ್ರತೆ, ನಿರುದ್ಯೋಗ ಮತ್ತು ಬಡತನದ ಸವಾಲುಗಳನ್ನು ನಿವಾರಿಸಲು1994ರಲ್ಲಿ 2 ಮಕ್ಕಳ ನಿಯಮವನ್ನು ಪರಿಚಯಿಸಲಾಯಿತು. ಆದರೆ ಈಗ ಜನಸಂಖ್ಯೆಯಲ್ಲಿ ಗಣನೀಯ ಕುಸಿತ ಉಂಟಾಗುತ್ತಿದೆ. ಹಾಗಾಗಿ ಹಳೆಯ ಕಾನೂನಿಗೆ ತಿದ್ದುಪಡಿ ತರುತ್ತಿದ್ದೇವೆ’ ಎಂದರು.ತೆಲಂಗಾಣದಲ್ಲಿ ಪ್ರಸಕ್ತ ಸಂತಾನೋತ್ಪತ್ತಿ ದರ 1.7 ಇದ್ದು, ಇದು ದೇಶದ ಸರಾಸರಿಗಿಂತ ಕಡಿಮೆ. ಇದೇ ರೀತಿ ಮುಂದುವರಿದರೆ ರಾಜ್ಯದ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ ಎಂದು ಅವರು ಹೇಳಿದರು.