ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಗ್ರಹಿಸಬೇಕು. ಶಾಲೆಯಿಂದ ಮಕ್ಕಳು ಹೊರಗೆ ಉಳಿಯದಂತೆ ಅಗತ್ಯ ಎಚ್ಚರಿಕೆ ವಹಿಸಿ, ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳಾ ದಾವಣಗೆರೆಯಲ್ಲಿ ಎಚ್ಚರಿಸಿದ್ದಾರೆ.

- ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಚ್ಚರಿಕೆ । ಆರ್‌ಟಿಇ ಅನುಷ್ಠಾನ- ಪ್ರಗತಿ ಪರಿಶೀಲನಾ ಸಭೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಗ್ರಹಿಸಬೇಕು. ಶಾಲೆಯಿಂದ ಮಕ್ಕಳು ಹೊರಗೆ ಉಳಿಯದಂತೆ ಅಗತ್ಯ ಎಚ್ಚರಿಕೆ ವಹಿಸಿ, ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳಾ ಎಚ್ಚರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶುಕ್ರವಾರ ನಗರದ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಆರ್.ಟಿ.ಇ. ಅನುಷ್ಠಾನ ಮತ್ತು ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ಮುಕ್ತ ಭಾರತ-2030 ಗುರಿಯ ಸಾಧನೆ ಮುಂದಿಟ್ಟುಕೊಂಡು ಶಾಲಾ ಶಿಕ್ಷಣ ಇಲಾಖೆ ಕಾರ್ಯನಿರ್ವಹಿಸಬೇಕಾಗಿದೆ. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಒಟ್ಟಾರೆ 820 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಪ್ರಾಥಮಿಕ ಶಾಲೆಯಿಂದ ತೇರ್ಗಡೆಯಾಗಿ ಪ್ರೌಢಶಾಲೆಗೆ ಪ್ರವೇಶ ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಶಾಲೆಯಲ್ಲಿ ಪ್ರವೇಶ ಪಡೆಯದೇ ಹೊರಗುಳಿದಿದ್ದಲ್ಲಿ ಸಕಾರಣಗಳನ್ನು ತಿಳಿದು, ಆ ಮಗುವು ಶಾಲೆಗೆ ಪುನಃ ಪ್ರವೇಶ ಪಡೆಯುವಂತೆ ಮಾಡಬೇಕು. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಇರುವ ವಸತಿರಹಿತ ಮತ್ತು ವಸತಿಸಹಿತ ಶಾಲೆಗಳ ಬಗ್ಗೆ ಮಾಹಿತಿಯನ್ನು ಪಡೆಯಬೇಕು. ನವೀಕರಣಗೊಳ್ಳದ ವಸತಿರಹಿತ ಮತ್ತು ವಸತಿಸಹಿತ ಶಾಲೆಗಳ ವಿರುದ್ಧ ಕ್ರಮ ವಹಿಸಬೇಕು ಮತ್ತು ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳ ಮಾಹಿತಿಯನ್ನು ಪಡೆದು ಆಯೋಗಕ್ಕೆ ಮೂರು ದಿನಗಳಲ್ಲಿ ಸಲ್ಲಿಸಬೇಕು. ಅವರು ಕಡ್ಡಾಯವಾಗಿ ಶಿಕ್ಷಣ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರಬೇಕು. ನವೋದಯ, ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ಮತ್ತು ಅಬ್ದುಲ್ ಕಲಾಂ ವಸತಿ ಶಾಲೆಗಳಿಗೆ ಪ್ರವೇಶ ಪಡೆಯುವಂತಹ ಮಕ್ಕಳಿಗೆ ಪ್ರವೇಶ ಪರೀಕ್ಷೆಗೆ ಹಾಜರಾಗಲು ವಿಶೇಷ ತರಗತಿಗಳನ್ನು ಆಯೋಜಿಸಿ ತರಬೇತಿ ನೀಡಬೇಕು ಎಂದರು.

1ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಕಲೆಹಾಕಿ ಅವರ ವ್ಯಾಸಂಗದ ಬಗ್ಗೆ ಅರಿತು ಅವರಿಗೆ ವಿಶೇಷ ತರಗತಿಗಳನ್ನು ಏರ್ಪಡಿಸಬೇಕು. ಜಿಲ್ಲೆಯಲ್ಲಿರುವ ಎಲ್ಲ ಮಕ್ಕಳ ಆಧಾರ್ ಸಿಡಿಂಗ್ ಮಾಡಿಸಿ, ಅಪಾರ್ ತಂತ್ರಾಂಶದಲ್ಲಿ ನೋಂದಾಯಿಸಲು ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಇನ್ನು 58,000 ಮಕ್ಕಳ ಆಧಾರ್ ಲಿಂಕ್ ಆಗಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಕೂಡಲೇ ಅಗತ್ಯ ಕ್ರಮ ವಹಿಸಬೇಕು ಎಂದರು.

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೊಟ್ರೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ , ಬಿಇಒಗಳು ಹಾಗೂ ಇತರರು ಉಪಸ್ಥಿತರಿದ್ದರು.

- - -

(ಬಾಕ್ಸ್‌) *

ಎಲ್ಲ ಶಾಲೆಗಳಲ್ಲಿ ಶೌಚಾಲಯಗಳಿದ್ದು, ಬಹುತೇಕ ಶಾಲೆಗಳಲ್ಲಿ ಬಳಕೆ ಆಗುತ್ತಿಲ್ಲ. ಕೆಲವು ಶಾಲೆಗಳಲ್ಲಿ ಇರುವ ಶೌಚಾಲಯಗಳು ದುರಸ್ತಿಗೆ ಬಂದಿದ್ದು, ತ್ವರಿತವಾಗಿ ದುರಸ್ತಿಪಡಿಸಿ ಬಳಕೆಗೆ ನೀಡುವಂತೆ ಅಪರ್ಣಾ ಎಂ. ತಾಕೀತು ಮಾಡಿದರು.

ಶೌಚಾಲಯಗಳ ನಿರ್ವಹಣೆ ಮಾಡದೇ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಾಗುವುದು. ಹತ್ತನೇ ತರಗತಿಯಲ್ಲಿ ಕಳೆದ ಬಾರಿ ಶೇ.80.55ರಷ್ಟು ಮಕ್ಕಳು ತೇರ್ಗಡೆಹೊಂದಿದ್ದು, ಫಲಿತಾಂಶದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಿ, ದಾವಣಗೆರೆ ಜಿಲ್ಲೆ ಪ್ರಥಮ ಸ್ಥಾನದಲ್ಲಿರುವಂತಾಗಲು ಅಧಿಕಾರಿಗಳು ಮತ್ತು ಶಿಕ್ಷಕರು ಕ್ರಮವಹಿಸಬೇಕು ಎಂದು ತಿಳಿಸಿದರು.

- - -

-2ಕೆಡಿವಿಜಿ38:

ದಾವಣಗೆರೆಯಲ್ಲಿ ನಡೆದ ಆರ್.ಟಿ.ಇ. ಅನುಷ್ಠಾನ ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನು ಅಪರ್ಣಾ ಎಂ. ಕೊಳ್ಳಾ ಉದ್ಘಾಟಿಸಿ ಮಾತನಾಡಿದರು.