ಸಾರಾಂಶ
ಪಿಟಿಐ ಅಯೋಧ್ಯೆ: ಜ.22ರಂದು ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗಲಿರುವ ಭವ್ಯ ಶ್ರೀರಾಮಮಂದಿರ ಆತ್ಮನಿರ್ಭರ ದೇಗುಲ ಸಂಕೀರ್ಣವಾಗಿದೆ. ಒಳಚರಂಡಿ ಹಾಗೂ ನೀರು ಶುದ್ಧೀಕರಣ ಘಟಕಗಳನ್ನು ಹೊಂದಿದೆ. ಅಲ್ಲದೆ ವೃದ್ಧರು ಹಾಗೂ ಅಂಗವಿಕಲರ ಸುಗಮ ಓಡಾಟಕ್ಕೂ ಇಲ್ಲಿ ಅವಕಾಶವಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೇಗುಲ ಸಮುಚ್ಚಯ ನಿರ್ಮಾಣವಾಗುತ್ತಿರುವ 70 ಎಕರೆ ಪ್ರದೇಶದ ಪೈಕಿ ಶೇ.70ರಷ್ಟು ಭೂಭಾಗ ಹಸಿರಿನಿಂದ ಆವೃತ್ತವಾಗಿರುತ್ತದೆ. 2 ಎಸ್‌ಟಿಪಿ (ಒಳಚರಂಡಿ ನೀರು ಶುದ್ಧೀಕರಣ ಘಟಕ), ಒಂದು ಡಬ್ಲ್ಯುಟಿಪಿ (ನೀರು ಶುದ್ಧೀಕರಣ ಘಟಕ)ಯನ್ನು ಹೊಂದಿರುತ್ತದೆ. ವಿದ್ಯುತ್ ಘಟಕದಿಂದ ಪ್ರತ್ಯೇಕವಾದ ಮಾರ್ಗ ದೇಗುಲಕ್ಕೆ ಇರುತ್ತದೆ. ಅಗ್ನಿ ಅನಾಹುತಗಳನ್ನು ಎದುರಿಸಲು ಅಗ್ನಿಶಾಮಕ ವಿಭಾಗವನ್ನೂ ದೇಗುಲ ಹೊಂದಿರುತ್ತದೆ. ಅದಕ್ಕೆ ನೀರು ಒದಗಿಸಲು ಭೂಗತ ಜಲಾಶಯ ನಿರ್ಮಿಸಲಾಗುತ್ತದೆ ಎಂದು ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ರಾಮಮಂದಿರದಲ್ಲಿ ವೃದ್ಧರು, ಅಂಗವಿಕಲರಿಗಾಗಿ ಲಿಫ್ಟ್ ಹಾಗೂ ರ್‍ಯಾಂಪ್ ಸೌಕರ್ಯ ಇರುತ್ತದೆ ಎಂದಿದ್ದಾರೆ.ಜಟಾಯು ಪ್ರತಿಮೆ ಸ್ಥಾಪನೆಅಯೋಧ್ಯೆಯ ಕುಬೇರ್ ತಿಲಾದಲ್ಲಿ ಜಟಾಯು ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಚಂಪತ್ ರಾಯ್ ಅವರು ಮಾಹಿತಿ ನೀಡಿದ್ದಾರೆ.ಅಯೋಧ್ಯೆಗೆ ಉ.ಪ್ರ. ಡಿಸಿಎಂ ಭೇಟಿ: ಪರಿಶೀಲನೆ
ಅಯೋಧ್ಯೆ: ಜ.22ರಂದು ರಾಮಮಂದಿರ ಉದ್ಘಾಟನೆಗಾಗಿ ಹಾಗೂ ಡಿ.30ರಂದು ಏರ್‌ಪೋರ್ಟ್ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಅವರು ಮಂಗಳವಾರ ಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.