ರಾಮ ಮಂದಿರ ಆಂದೋಲನದಲ್ಲಿಕೆಲವರ ಜಾತ್ಯಾತೀತೆ ಮುಖವಾಡಕಳಚಿ ಬಿತ್ತು: ಎಲ್‌.ಕೆ ಅಡ್ವಾಣಿ

| Published : Jan 14 2024, 01:33 AM IST / Updated: Jan 14 2024, 02:34 PM IST

ರಾಮ ಮಂದಿರ ಆಂದೋಲನದಲ್ಲಿಕೆಲವರ ಜಾತ್ಯಾತೀತೆ ಮುಖವಾಡಕಳಚಿ ಬಿತ್ತು: ಎಲ್‌.ಕೆ ಅಡ್ವಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಮರ ವೋಟಿಗಾಗಿ ಅವರನ್ನು ಓಲೈಸಲು ರಾಮ ಮಂದಿರದ ಆಂದೋಲನದ ವೇಳೆ ಕೆಲ ರಾಜಕೀಯ ಪಕ್ಷಗಳು ನಮ್ಮ ಹೋರಾಟವನ್ನು ವಿರೋಧಿಸಿದವು. ಆಗ ನಿಜವಾದ ಜಾತ್ಯಾತೀತೆಯ ಪ್ರತಿಪಾದಿಸುವವರು ಯಾರು ಮತ್ತು ಜಾತ್ಯಾತೀತತೆಯ ಮುಖವಾಡ ಧರಿಸಿದವರು ಯಾರು ಎಂಬುದು ಗೊತ್ತಾಯಿತು.

ಪಿಟಿಐ ನವದೆಹಲಿ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಡೆದ ಹೋರಾಟವು ಕೇವಲ ಮಂದಿರ ನಿರ್ಮಾಣಕ್ಕೆ ಸೀಮಿತವಾಗದೆ, ‘ಹುಸಿ ಜಾತ್ಯತೀತತೆ’ ಯಾವುದು ಹಾಗೂ ‘ನೈಜ ಜಾತ್ಯತೀತತೆ’ ಯಾವುದು ಎಂಬುದನ್ನು ಬಯಲು ಮಾಡಿತು ಎಂದು ಬಿಜೆಪಿ ಹಿರಿಯ ನಾಯಕ ಹಾಗೂ 90ರ ದಶಕದಲ್ಲಿ ರಾಮರಥ ಯಾತ್ರೆ ಮೂಲಕ ಬಿಜೆಪಿಯನ್ನು ಜನಮಾನಸದಲ್ಲಿ ಬೇರೂರುವಂತೆ ಮಾಡಿದ ಎಲ್‌.ಕೆ. ಅಡ್ವಾಣಿ ಹೇಳಿದ್ದಾರೆ.

ಜ.22ರಂದು ನಡೆಯಲಿರುವ ರಾಮ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಡ್ವಾಣಿ ಬರೆದಿರುವ ‘ಶ್ರೀರಾಮ ಮಂದಿರ: ಈಡೇರಿದ ದೈವಿಕ ಕನಸು'''' ಲೇಖನವನ್ನು ಅವರ ಕಚೇರಿಯು ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ. 

ಇದರಲ್ಲಿ ಮಂದಿರ ನಿರ್ಮಾಣಕ್ಕೆ ನಡೆದ ಹೋರಾಟ, ಕನಸು ನನಸಾಗಿರುವುದು. ತಮ್ಮ ಹಾಗೂ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸ್ನೇಹ, ತಮ್ಮ ಜೀವನದುದ್ದಕ್ಕೂ ಪತ್ನಿ ನೀಡಿದ ಪ್ರೇರಣೆ- ಹೀಗೆ ತರಹೇವಾರಿ ವಿಷಯಗಳನ್ನು ಅಡ್ವಾಣಿ ಹಂಚಿಕೊಂಡಿದ್ದಾರೆ.

ಕಳಚಿದ ‘ಹುಸಿ ಜಾತ್ಯತೀತತೆ’ ಮುಖವಾಡ:1990ರಲ್ಲಿ ನಾನು ಆರಂಭಿಸಿದ ರಾಮರಥಯಾತ್ರೆಯು ‘ನಿಜವಾದ ಜಾತ್ಯತೀತತೆ’ ಮತ್ತು ‘ಹುಸಿ ಜಾತ್ಯತೀತತೆ’ ಚರ್ಚೆಗೆ ನಾಂದಿ ಹಾಡಿತು ಎಂದಿದ್ದಾರೆ.‘ಒಂದೆಡೆ ನನ್ನ ರಾಮರಥಯಾತ್ರೆ ಆಂದೋಲನಕ್ಕೆ ಜನಬೆಂಬಲವಿತ್ತು, 

ಮತ್ತೊಂದೆಡೆ ಹೆಚ್ಚಿನ ರಾಜಕೀಯ ಪಕ್ಷಗಳು ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಅದನ್ನು ಬೆಂಬಲಿಸಲು ಹಿಂಜರಿದವು. ಅವರು (ಬಿಜೆಪಿಯೇತರ ಹಲವು ಪಕ್ಷಗಳು) ಈ ಮತ-ಬ್ಯಾಂಕ್ ರಾಜಕಾರಣದ ಆಮಿಷಕ್ಕೆ ಬಲಿಯಾದರು ಮತ್ತು ಜಾತ್ಯತೀತತೆಯ ಹೆಸರಿನಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡವು. ಅಯೋಧ್ಯೆ ವಿವಾದದ ಮೂಲ ಉದ್ದೇಶವು ರಾಮ ಮಂದಿರ ನಿರ್ಮಾಣವಾಗಿತ್ತು. 

ಆದರೆ ಈ ಮೂಲ ಉದ್ದೇಶದ ಜತೆಗೆ ಈ ಹೋರಾಟವು, ಹುಸಿ ಜಾತ್ಯತೀತತೆ ಯಾವುದು ಹಾಗೂ ನಿಜವಾದ ಜಾತ್ಯತೀತತೆ ಯಾವುದು ಎಂಬುದರ ಬಣ್ಣ ಬಯಲು ಮಾಡಿತು. ಜಾತ್ಯತೀತತೆಗೆ ಆಗ ನಿಜವಾದ ಅರ್ಥ ಮರುಕಳಿಸಿತು’ ಎಂದಿದ್ದಾರೆ.1947ರ ನಂತರದ ಪ್ರಮುಖ ಹೋರಾಟ:

ರಾಮಜನ್ಮಭೂಮಿ ಆಂದೋಲನವು 1947 ರ ಸ್ವಾತಂತ್ರ್ಯ ಸಂಗ್ರಾಮದ ನಂತರ ದೇಶ ಕಂಡ ಇತಿಹಾಸದ ಪ್ರಮುಖ ಘಟನಾವಳಿಯಾಗಿದೆ ಎಂದು ಪ್ರತಿಪಾದಿಸಿದ ಅಡ್ವಾಣಿ, 1990ರಲ್ಲಿ ದೇವರೇ ನನಗೆ ರಥಯಾತ್ರೆ ನಡೆಸುವಂತೆ ಪ್ರೇರಣೆ ನಿಡದ ಹಾಗೂ ರಾಜಕೀಯ ಕರ್ತವ್ಯ ಪಾಲಿಸುವ ಸೂಚನೆ ನೀಡಿದ. 

ಅದಕ್ಕಾಗಿ ನನ್ನಲ್ಲಿ ಕೃತಜ್ಞತಾ ಭಾವ ಆವರಿಸಿದೆ. ಅಂದು ಒಂದಲ್ಲ ಒಂದು ದಿನ ರಾಮಮಂದಿರ ನಿರ್ಮಾಣ ಸಾಕಾರವಾಗುತ್ತದೆ ಎಂದು ನನ್ನ ಆತ್ಮಸಾಕ್ಷಿ ಹೇಳಿತ್ತು’ ಎಂದಿದ್ದಾರೆ.‘ಆ ಪ್ರಕಾರ, 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ನಿರ್ಣಾಯಕ ತೀರ್ಪಿನಿಂದಾಗಿ, ಶ್ರೀರಾಮ ಮಂದಿರದ ಪುನರ್ನಿರ್ಮಾಣವು ಶಾಂತಿಯ ವಾತಾವರಣದಲ್ಲಿ ನಡೆದಿದೆ ಎಂಬುದು ನನಗೆ ಸಂತೋಷ ತರಿಸಿದೆ.

ಈಗ ಭವ್ಯವಾದ ದೇವಾಲಯವು ಅಂತಿಮ ಹಂತದಲ್ಲಿದ್ದು, ಇದಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ವಿಶ್ವ ಹಿಂದೂ ಪರಿಷತ್, ಆರ್‌ಎಸ್‌ಎಸ್, ಬಿಜೆಪಿ ಮತ್ತು ತಮ್ಮ ಯಾತ್ರೆಗೆ ಸಂಬಂಧಿಸಿದ ಅಸಂಖ್ಯಾತ ಜನರು, ಸಂತರ ಬಗ್ಗೆ ನನ್ನಲ್ಲಿ ಆಳವಾದ ಕೃತಜ್ಞತಾ ಭಾವ ತುಂಬಿದೆ’ ಎಂದಿದ್ದಾರೆ.

ಇಡೀ ದೇಶ ರಾಮಮಯ:ಅಯೋಧ್ಯೆಯ ರಾಮಮಂದಿರದಲ್ಲಿ ಜ.22ರಂದು ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಇಡೀ ದೇಶದ ವಾತಾವರಣವು ನಿಜವಾಗಿಯೂ ‘ರಾಮ-ಮಯ’ ವಾಗಿ ಮಾರ್ಪಟ್ಟಿದೆ ಎಂದು ಅಡ್ವಾಣಿ ಹರ್ಷಿಸಿದ್ದಾರೆ.

ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹೆಮ್ಮೆಯ ಸದಸ್ಯನಾಗಿ ಮಾತ್ರವಲ್ಲದೆ ಭಾರತದ ಹೆಮ್ಮೆಯ ಪ್ರಜೆಯಾಗಿಯೂ ಇದು ನನಗೆ ಕನಸು ನನಸಾದ ಕ್ಷಣವಾಗಿದೆ. ನನ್ನ ಜೀವಿತಾವಧಿಯಲ್ಲಿ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಲಿರುವುದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ’ ಎಂದಿದ್ದಾರೆ.

ಮೋದಿ ಪ್ರತಿ ಭಾರತೀಯನ ಪ್ರತಿನಿಧಿ:ಪ್ರಧಾನಿ ನರೇಂದ್ರ ಮೋದಿ ಅವರು ಜ. 22 ರಂದು ಅಯೋಧ್ಯೆಯಲ್ಲಿ ರಾಮನ ವಿಗ್ರಹದ ''''ಪ್ರಾಣ ಪ್ರತಿಷ್ಠಾ''''ವನ್ನು ಮಾಡಿದಾಗ ಅವರು ಭಾರತದ ಪ್ರತಿಯೊಬ್ಬ ನಾಗರಿಕರನ್ನು ಪ್ರತಿನಿಧಿಸುತ್ತಾರೆ ಎಂದು ಅಡ್ವಾಣಿ ಹೇಳಿದ್ದಾರೆ.‘

ಈ ದೇವಾಲಯವು ಎಲ್ಲಾ ಭಾರತೀಯರಿಗೆ ಶ್ರೀರಾಮನ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂಬುದು ನನ್ನ ನಂಬಿಕೆ ಮತ್ತು ನನ್ನ ಆಶಯವಾಗಿದೆ. ನಮ್ಮ ಮಹಾನ್ ದೇಶವು ಜಾಗತಿಕ ಶಕ್ತಿಯಾಗಲಿದೆ ಹಾಗೂ ಹೇಗೆ ಜೀವನದಲ್ಲಿ ಘನತೆ-ಗೌರವ ಹೊಂದಬೇಕು ಎಂಬುದರ ಉದಾಹರಣೆಯಾಗಲಿದೆ’ ಎಂದಿದ್ದಾರೆ.

ಪತ್ನಿ ಕಮಲಾ, ಅಟಲ್‌ ಸ್ಮರಣೆ:ಇದೇ ವೇಳೆ, ತಮ್ಮ ಪತ್ನಿ ಕಮಲಾ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರಿಬ್ಬರು ನನ್ನ ಜತೆ ಇಂದು ಇಲ್ಲ. ಅವರನ್ನು ನಾನು ತುಂಬಾ ಕಳೆದುಕೊಳ್ಳುತ್ತಿದ್ದೇನೆ ಎಂದು ಅಡ್ವಾಣಿ ಬೇಸರಿಸಿದ್ದಾರೆ.

‘ಮೊದಲನೆಯದಾಗಿ, ವಾಜಪೇಯಿ ಅವರು ನನ್ನ ರಾಜಕೀಯ ಮತ್ತು ವೈಯಕ್ತಿಕ ಎರಡೂ ಜೀವನದ ಅವಿಭಾಜ್ಯ ಅಂಗವಾಗಿದ್ದರು ಮತ್ತು ನಮ್ಮ ನಡುವೆ ಪರಸ್ಪರ ನಂಬಿಕೆ, ಪ್ರೀತಿ ಮತ್ತು ಗೌರವ, ಮುರಿಯಲು ಸಾಧ್ಯವಾಗದ ಮತ್ತು ಶಾಶ್ವತವಾದ ಬಂಧ ನಮ್ಮಲ್ಲಿತ್ತು’ ಎಂದು ಸ್ಮರಿಸಿದ್ದಾರೆ.

‘ಇನ್ನು ಎರಡನೆಯ ವ್ಯಕ್ತಿ ನನ್ನ ದಿವಂಗತ ಪತ್ನಿ ಕಮಲಾ. ಅವರು ಶ್ರೀರಾಮ ರಥ ಯಾತ್ರೆ ವೇಳೆ ಮಾತ್ರವಲ್ಲದೆ, ಸಾರ್ವಜನಿಕ ಜೀವನದಲ್ಲಿ ನನ್ನ ಸುದೀರ್ಘ ಅವಧಿಯುದ್ದಕ್ಕೂ ನನಗೆ ಮೂಲಾಧಾರವಾಗಿದ್ದರು ಹಾಗೂ ಅಪ್ರತಿಮ ಶಕ್ತಿಯ ಮೂಲವಾಗಿದ್ದರು’ ಎಂದಿದ್ದಾರೆ.