ಹಿಂದು ನಾಯಕರಿಗೆ ಬಾಂಬಿಡಲು ಬೆಂಗಳೂರಿನಲ್ಲಿ ಸಂಭವಿಸಿದ ಕೆಫೆ ಬಾಂಬ್‌ ಸ್ಫೋಟದ ರೂವಾರಿ ಫರ್ಮಾನು

| Published : Aug 29 2024, 12:49 AM IST / Updated: Aug 29 2024, 04:58 AM IST

ಸಾರಾಂಶ

ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಂಭವಿಸಿದ ಕೆಫೆ ಬಾಂಬ್‌ ಸ್ಫೋಟದ ರೂವಾರಿಯು ಈಗ ಭಾರತದ ರೈಲ್ವೆ ಸಂಪರ್ಕ ಜಾಲಗಳು ಮತ್ತು ಹಿಂದೂ ನಾಯಕರ ಮೇಲೆ ಬಾಂಬ್‌ ದಾಳಿ ನಡೆಸುವಂತೆ ತನ್ನ ಸ್ಲೀಪರ್‌ ಸೆಲ್‌ಗಳಿಗೆ ಸೂಚನೆ ನೀಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ನವದೆಹಲಿ: ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಂಭವಿಸಿದ ಕೆಫೆ ಬಾಂಬ್‌ ಸ್ಫೋಟದ ರೂವಾರಿಯು ಈಗ ಭಾರತದ ರೈಲ್ವೆ ಸಂಪರ್ಕ ಜಾಲಗಳು ಮತ್ತು ಹಿಂದೂ ನಾಯಕರ ಮೇಲೆ ಬಾಂಬ್‌ ದಾಳಿ ನಡೆಸುವಂತೆ ತನ್ನ ಸ್ಲೀಪರ್‌ ಸೆಲ್‌ಗಳಿಗೆ ಸೂಚನೆ ನೀಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. 

ಅದರ ಬೆನ್ನಲ್ಲೇ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಪಾಕ್‌ನಲ್ಲಿ ನೆಲೆಸಿರುವ ಫರ್ಹತ್ತುಲ್ಲಾ ಘೋರಿ ಮಾರ್ಚ್‌ 1ರಂದು ಸಂಭವಿಸಿದ ಬೆಂಗಳೂರಿನ ಕೆಫೆ ಬಾಂಬ್‌ ಸ್ಫೋಟದ ಮಾಸ್ಟರ್‌ ಮೈಂಡ್‌ ಆಗಿದ್ದಾನೆ. ಈತ ಟೆಲಿಗ್ರಾಂ ಆ್ಯಪ್‌ ಮೂಲಕ ಮೂರು ವಾರಗಳ ಹಿಂದೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾನೆ. ಅದರಲ್ಲಿ, ‘ಭಾರತದಲ್ಲಿರುವ ಉಗ್ರರ ಸ್ಲೀಪರ್‌ ಸೆಲ್‌ಗಳನ್ನು ಭಾರತ ಸರ್ಕಾರ ನಿಷ್ಕ್ರಿಯಗೊಳಿಸಲು ಯತ್ನಿಸುತ್ತಿದೆ. ಅದಕ್ಕೆ ಅಂಜದೆ ಸ್ಲೀಪರ್‌ ಸೆಲ್‌ಗಳು ದೇಶಾದ್ಯಂತ ರೈಲ್ವೆ ಸಂಪರ್ಕ ಜಾಲಗಳ ಮೇಲೆ ದಾಳಿ ನಡೆಸುವ ಮೂಲಕ ಸರ್ಕಾರವನ್ನು ಅಲುಗಾಡಿಸಬೇಕು. ಇದಕ್ಕೆ ಪಾಕಿಸ್ತಾನದ ಗುಪ್ತಚರ ದಳ (ಐಎಸ್‌ಐ) ಸಹಾಯ ಮಾಡಲಿದೆ’ ಎಂದು ಹೇಳಿದ್ದಾನೆ.

ಫರ್ಹತ್ತುಲ್ಲಾ ಘೋರಿ ಅನೇಕ ವರ್ಷಗಳಿಂದ ಭಾರತಕ್ಕೆ ಬೇಕಾದ ಉಗ್ರನಾಗಿದ್ದಾನೆ. ಈತ ಇದೀಗ ಪ್ರೆಷರ್‌ ಕುಕ್ಕರ್‌ ಸೇರಿದಂತೆ ನಾನಾ ರೀತಿಯ ವಿಧಾನಗಳನ್ನು ಬಳಸಿ ಭಾರತದ ರೈಲ್ವೆ ಹಳಿಗಳನ್ನು ಸ್ಫೋಟಿಸಲು ಕರೆ ನೀಡಿರುವುದು ಭದ್ರತಾ ಪಡೆಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬಂಧಿತ ತಾಹಾ, ಮುಜಾಬಿರ್‌ ಜತೆ ಸಂಪರ್ಕ:ಫರ್ಹತ್ತುಲ್ಲಾ ಘೋರಿ ಹಾಗೂ ಆತನ ಅಳಿಯ ಶಾಹಿದ್ ಫೈಜಲ್‌ ದಕ್ಷಿಣ ಭಾರತದಲ್ಲಿ ಸ್ಲೀಪರ್‌ ಸೆಲ್‌ಗಳ ಜಾಲವನ್ನು ಹೊಂದಿದ್ದಾರೆ. ಬೆಂಗಳೂರಿನ ಕೆಫೆ ಬಾಂಬ್‌ ಸ್ಫೋಟದ ಇಬ್ಬರು ಉಗ್ರರಾದ (ಈಗ ಬಂಧಿತರು) ಅಬ್ದುಲ್‌ ಮತೀನ್‌ ತಾಹಾ ಮತ್ತು ಮುಜಾಬಿರ್‌ ಹುಸೇನ್‌ ಜೊತೆ ಇವರಿಬ್ಬರೂ ಸಂಪರ್ಕದಲ್ಲಿದ್ದರು. ಆ ಸ್ಫೋಟವನ್ನು ಪಾಕ್‌ನಲ್ಲಿ ಕುಳಿತು ಇವರಿಬ್ಬರೇ ಪ್ಲಾನ್‌ ಮಾಡಿದ್ದರು ಎಂದು ಹೇಳಲಾಗಿದೆ.

ಪೆಟ್ರೋಲ್‌ ಪೈಪ್‌ಲೈನ್‌ ಸ್ಫೋಟಿಸಿ:

ಇದೇ ವಿಡಿಯೋದಲ್ಲಿ ಘೋರಿಯು ಭಾರತದ ಪೆಟ್ರೋಲಿಯಂ ಪೈಪ್‌ಲೈನ್‌ಗಳನ್ನು ಸ್ಫೋಟಿಸಲು ಹಾಗೂ ಹಿಂದೂ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸುವುದಕ್ಕೂ ಕರೆ ನೀಡಿದ್ದಾನೆ. ಭಾರತ ಸರ್ಕಾರ ಇ.ಡಿ. ಮತ್ತು ಎನ್‌ಐಎ ಬಳಸಿ ನಮ್ಮ ಸ್ಲೀಪರ್‌ ಸೆಲ್‌ಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಆದರೆ ಅದಕ್ಕೆ ಪ್ರತಿಯಾಗಿ ನಾವು ಸರ್ಕಾರವನ್ನೇ ಅಲುಗಾಡಿಸುವ ಮೂಲಕ ಉತ್ತರ ನೀಡಬೇಕು ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಗುಪ್ತಚರ ಮೂಲಗಳ ಪ್ರಕಾರ ಮೂರು ವಾರಗಳ ಹಿಂದೆ ಟೆಲಿಗ್ರಾಂ ಆ್ಯಪ್‌ನಲ್ಲಿ ಈ ವಿಡಿಯೋ ಬಿಡುಗಡೆಯಾಗಿದೆ.

ಆನ್‌ಲೈನಲ್ಲಿ ಜಿಹಾದಿಗಳ ನೇಮಕ:

ಫರ್ಹತ್ತುಲ್ಲಾ ಘೋರಿಗೆ ಅಬು ಸೂಫಿಯಾನ್‌, ಸರ್ದಾರ್‌ ಸಾಹಬ್‌, ಫಾರು ಮುಂತಾದ ಹೆಸರುಗಳಿವೆ. 2002ರಲ್ಲಿ ಗುಜರಾತ್‌ನ ಅಕ್ಷರಧಾಮ ದೇಗುಲದಲ್ಲಿ 30 ಜನರನ್ನು ಬಲಿ ಪಡೆದ ದಾಳಿಯ ರೂವಾರಿ ಕೂಡ ಈತನೇ ಎನ್ನಲಾಗಿದೆ. ಈತ ಆನ್‌ಲೈನ್‌ನಲ್ಲಿ ಜಿಹಾದಿಗಳನ್ನು ನೇಮಕ ಮಾಡಿಕೊಳ್ಳುತ್ತಾನೆ. ನಂತರ ಆನ್‌ಲೈನ್‌ನಲ್ಲೇ ಸೂಚನೆಗಳನ್ನು ನೀಡಿ ದಾಳಿಗಳನ್ನು ಸಂಘಟಿಸುತ್ತಾನೆ ಎಂದು ದೆಹಲಿ ಪೊಲೀಸರು ಇತ್ತೀಚೆಗಷ್ಟೇ ತಿಳಿಸಿದ್ದರು.