ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ವಿಫಲವಾದ ವ್ಯಕ್ತಿಯೊಬ್ಬ ಆಕೆಯ ಖಾಸಗಿ ಅಂಗದೊಳಗೆ ಕಬ್ಬಿಣದ ರಾಡ್‌ ತುರುಕಿಸಿದ ರಾಕ್ಷಸೀಯ ಕೃತ್ಯ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.

- 7ರ ಬಾಲಕಿ ಮೇಲೆ ಅತ್ಯಾಚಾರ ಯತ್ನ

- ಬಳಿಕ ಗುಪ್ತಾಂಗಕ್ಕೆ ರಾಡ್‌ ಹಾಕಿ ವಿಕೃತಿ

- ಆರೋಪಿ ಸೆರೆ, ಬಾಲಕಿ ಆರೋಗ್ಯ ಸ್ಥಿರ

ರಾಜ್‌ಕೋಟ್‌: ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ವಿಫಲವಾದ ವ್ಯಕ್ತಿಯೊಬ್ಬ ಆಕೆಯ ಖಾಸಗಿ ಅಂಗದೊಳಗೆ ಕಬ್ಬಿಣದ ರಾಡ್‌ ತುರುಕಿಸಿದ ರಾಕ್ಷಸೀಯ ಕೃತ್ಯ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ತೀವ್ರ ಅಸ್ವಸ್ಥಳಾಗಿದ್ದ ಬಾಲಕಿಯನ್ನು ರಾಜ್‌ಕೋಟ್‌ನ ಮಕ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿತಿ ಇದೀಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮಧ್ಯಪ್ರದೇಶ ಮೂಲದ, ಮೂವರು ಮಕ್ಕಳ ತಂದೆ ರಾಮ್‌ಸಿಂಗ್‌(35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ದೊಹಾದ್‌ ಮೂಲದ ಬಾಲಕಿ ಕುಟುಂಬಸ್ಥರು ಕೃಷಿ ಕಾರ್ಮಿಕರಾಗಿ ರಾಜ್‌ಕೋಟ್‌ನ ಅಟ್‌ಕೋಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ರಾಮ್‌ ಸಿಂಗ್‌ ಕೂಡ 2 ವರ್ಷಗಳಿಂದ ಈ ಭಾಗದಲ್ಲೇ ಕೃಷಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಡಿ.4ರಂದು ಜಮೀನಿನಲ್ಲಿ ಪೋಷಕರು ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾಗ ಆರೋಪಿ ರಾಮ್‌ ಸಿಂಗ್‌ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅದು ಸಾಧ್ಯವಾಗದಿದ್ದಾಗ ಹತಾಶೆಯಿಂದ ಆಕೆಯ ಖಾಸಗಿ ಅಂಗದೊಳಗೆ ಒಂದು ಅಡಿಯ ಕಬ್ಬಿಣದ ರಾಡ್‌ ಅನ್ನು ತುರುಕಿಸಿದ್ದಾನೆ. ಮಗಳು ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಡಿದಾಗ ಜಮೀನು ಪಕ್ಕದ ನೀರಿನ ಟ್ಯಾಂಕ್‌ ಬಳಿ ತೀವ್ರ ರಕ್ತಸ್ರಾವಕ್ಕೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ರಾಜ್‌ಕೋಟ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 10 ಮಂದಿ ಶಂಕಿತರ ಫೋಟೋ ಬಾಲಕಿಗೆ ತೋರಿಸಿದಾಗ ಆಕೆ ಆರೋಪಿಯ ಗುರುತು ಹಿಡಿದಿದ್ದಾಳೆ. ಅದರಂತೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.

==

ಇಂಡಿಗೋಳಿಗೆ ಕಾರಣವೇನು?: ಕೇಂದ್ರಕ್ಕೆ ದೆಹಲಿ ಹೈ ಪ್ರಶ್ನೆ

ವಿಮಾನ ರದ್ದತಿಗೆ ಕಾರಣವೇನು? ನಷ್ಟವೆಷ್ಟು?: ಕೋರ್ಟ್‌

ಪೂರ್ಣ ರಿಪೋರ್ಟ್‌ ಜತೆ ಹಾಜರಾಗಿ: ಸಿಇಒಗೆ ಡಿಜಿಸಿಎ

ಅಗತ್ಯ ಬಿದ್ರೆ ಸಿಇಒ ವಜಾ: ಸಚಿವ ನಾಯ್ಡು ಗುಡುಗು

ನವದೆಹಲಿ: ಇದ್ದಕ್ಕಿದ್ದಂತೆ ಸಾವಿರಾರು ವಿಮಾನ ಸಂಚಾರ ರದ್ದಾಗಿ, ದೇಶದ ವಾಯುಯಾನ ಕ್ಷೇತ್ರದ ಜತೆಗೆ ಲಕ್ಷಾಂತರ ಪ್ರಯಾಣಿಕರ ಜೀವನದ ಜೊತೆ ಆಟವಾಡಿದ ಇಂಡಿಗೋ ಸಂಸ್ಥೆಯ ಈ ದುಃಸ್ಥಿತಿಗೆ ಕಾರಣವೇನು ಎಂದು ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.ವಿಮಾನ ರದ್ದತಿಯ ಸಂತ್ರಸ್ತರಿಗೆ ಟಿಕೆಟ್‌ ಹಣ ಮರುಪಾವತಿಸುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ, ಪರಿಸ್ಥಿತಿಯನ್ನು ಬಿಕ್ಕಟ್ಟು ಎಂದು ಕರೆದಿದೆ. ಜತೆಗೆ, ‘ಒಮ್ಮೆಲೆ ಇಂಡಿಗೋದ ಅನೇಕ ವಿಮಾನ ರದ್ದಾಗಲು ಕಾರಣವೇನು? ಇದರಿಂದ ಆರ್ಥಿಕತೆಗೆ ಆದ ನಷ್ಟವೇನು? ಪರಿಸ್ಥಿತಿಯ ಲಾಭ ಪಡೆದು ಅನ್ಯ ವಿಮಾನಯಾನ ಸಂಸ್ಥೆಗಳು ಟಿಕೆಟ್‌ ದರವನ್ನು ಹೇಗೆ ಹೆಚ್ಚಿಸಬಹುದು?’ ಎಂದು ಸರಣಿ ಪ್ರಶ್ನೆ ಕೇಳಿದೆ.

ಸರ್ಕಾರದ ಉತ್ತರ:ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯದ(ಡಿಜಿಸಿಎ) ವಕೀಲರು ಉತ್ತರಿಸಿದ್ದು, ‘ಪೈಲಟ್‌ಗಳ ಹಾರಾಟದ ಅವಧಿ ಸೇರಿದಂತೆ ಅಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಕಾಲಕಾಲಕ್ಕೆ ಪಾಲಿಸದೇ ಇದ್ದದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಂಡಿಗೋಗೆ ಶೋಕಾಸ್‌ ನೋಟಿಸ್‌ ಕೂಡ ನೀಡಲಾಗಿದೆ. ಕಾನೂನುಬದ್ಧ ಕಾರ್ಯವಿಧಾನಗಳು ಜಾರಿಯಲ್ಲಿವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ವರದಿ ಸಲ್ಲಿಸಿ:ಇಂಡಿಗೋ ಹಾರಾಟದಲ್ಲಾದ ಅಡಚಣೆಗಳಿಗೆ ಸಂಬಂಧಿಸಿದ ವರದಿ, ರದ್ದಾದ ವಿಮಾನಗಳ ಸಂಖ್ಯೆ, ಅವುಗಳ ಪುನಃಸ್ಥಾಪನೆ, ಟಿಕೆಟ್‌ ಹಣ ಮರುಪಾವತಿ, ಪೈಲಟ್‌ ಹಾಗೂ ಸಿಬ್ಬಂದಿ ನೇಮಕಾತಿ ಸೇರಿದಂತೆ ಸಮಗ್ರ ದತ್ತಾಂಶದೊಂದಿಗೆ ಗುರುವಾರ ಮಧ್ಯಾಹ್ನ 3 ಗಂಟೆಗೆ ತನ್ನೆದುರು ಹಾಜರಾಗುವಂತೆ ಇಂಡಿಗೋದ ಸಿಇಒ ಪೀಟರ್‌ ಎಲ್ಬರ್ಸ್‌ಗೆ ಡಿಜಿಸಿಎ ಆದೇಶಿಸಿದೆ.

ಅತ್ತ ವಿಮಾನಯಾನ ಸಚಿವ ರಾಮ್‌ಮೋಹನ್‌ ನಾಯ್ಡು ಮಾತನಾಡಿ, ‘ಇಂಡಿಗೋದ ಆಂತರಿಕ ಅವ್ಯವಸ್ಥೆ ಮತ್ತು ಅಸಮರ್ಥ ಸಿಬ್ಬಂದಿ ನಿರ್ವಹಣೆಯಿಂದ ಪರಿಸ್ಥಿತಿ ಹೀಗಾಗಿದೆ. ಅಗತ್ಯ ಬಿದ್ದರೆ ಸಿಇಒ, ಸಿಒಒ ಸೇರಿದಂತೆ ಇಂಡಿಗೋದ ಉನ್ನದ ಸುದ್ದೆಗಳಲ್ಲಿರುವವರನ್ನೂ ತೆಗೆದುಹಾಕುತ್ತೇನೆ. ಇದು ಅನ್ಯ ಸಂಸ್ಥೆಗಳಿಗೆ ಉದಾಹರಣೆಯಾಗಬೇಕು’ ಎಂದು ಅಸಮಾಧಾನ ಹೊರಹಾಕಿದ್ದಾರೆ.ತನಿಖಾ ಸಮಿತಿ ರಚನೆ:

ವಿಮಾನಗಳ ಹಾರಾಟದಲ್ಲಾದ ಅಡಚಣೆಯ ತನಿಖೆ ನಡೆಸಲು ಡಿಜಿಸಿಎ 4 ಸದಸ್ಯರ ಸಮಿತಿ ರಚಿಸಿದೆ. ಇದು, ಸಿಬ್ಬಂದಿಗೆ ಸಂಬಂಧಿಸಿದಂತೆ ಇಂಡಿಗೋ ಸಂಸ್ಥೆಯ ಯೋಜನೆ, ಪೈಲಟ್‌ಗಳ ಶೆಡ್ಯೂಲ್‌ನಲ್ಲಿ ಬದಲಾವಣೆ, ಇತ್ತೀಚಿನ ಕರ್ತವ್ಯ ಅವಧಿ ಮತ್ತು ವಿಶ್ರಾಂತಿ ಮಾನದಂಡಗಳನ್ನು ಜಾರಿಗೆ ತರಲು ನಡೆಸಲಾಗುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲಿದೆ.11 ಏರ್ಪೋರ್ಟ್‌ ತಪಾಸಣೆ:

ದೇಶದ 11 ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನ ರದ್ದತಿಯಿಂದಾಗಿ ಉಂಟಾದ ಅಡಚಣೆಯ ಪರಿಶೀಲನೆ ನಡೆಸುವಂತೆಯೂ ಡಿಜಿಸಿಎ ಆದೇಶಿಸಿದೆ. ಇದರ ಅನ್ವಯ ಅಧಿಕಾತಿಗಳು 2-3 ದಿನಗಳಲ್ಲಿ ಏರ್ಪೋರ್ಟ್‌ಗಳಿಗೆ ಹೋಗಿ ಪರಿಶೀಲನೆ ನಡೆಸಿ, ಬಳಿಕ 24 ತಾಸಿನೊಳಗೆ ವರದಿ ಸಲ್ಲಿಸಬೇಕಿದೆ. ಜತೆಗೆ, ಒಂದು ತಂಡವನ್ನು ಗುರುಗ್ರಾಮದಲ್ಲಿರುವ ಇಂಡಿಗೋ ಕಚೇರಿಗೆ ಕಳಿಸಿ, ದಾಖಲೆ ಪರಿಶೀಲನೆಗೂ ಮುಂದಾಗಿದೆ.