ಸಾರಾಂಶ
ಕಳೆದ ಜೂ.12ಕ್ಕೆ ಪತನಗೊಂಡು 260 ಜನರು ಸಾವಿಗೀಡಾದ ಅಹಮದಾಬಾದ್-ಲಂಡನ್ ಏರ್ ಇಂಡಿಯಾ ಬೋಯಿಂಗ್ ವಿಮಾನದ ರೀತಿಯಲ್ಲೇ, ಇದೀಗ ಅಮೃತಸರದಿಂದ ಬರ್ಮಿಂಗ್‌ಹ್ಯಾಂಗ್‌ಗೆ ತೆರಳುತ್ತಿದ್ದ ವಿಮಾನದಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಶನಿವಾರ ನಡೆದಿದೆ.
ಮುಂಬೈ : ಕಳೆದ ಜೂ.12ಕ್ಕೆ ಪತನಗೊಂಡು 260 ಜನರು ಸಾವಿಗೀಡಾದ ಅಹಮದಾಬಾದ್-ಲಂಡನ್ ಏರ್ ಇಂಡಿಯಾ ಬೋಯಿಂಗ್ ವಿಮಾನದ ರೀತಿಯಲ್ಲೇ, ಇದೀಗ ಅಮೃತಸರದಿಂದ ಬರ್ಮಿಂಗ್‌ಹ್ಯಾಂಗ್‌ಗೆ ತೆರಳುತ್ತಿದ್ದ ವಿಮಾನದಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಶನಿವಾರ ನಡೆದಿದೆ. ಈ ಬಗ್ಗೆ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ.
ಅ.4ರಂದು ಏರ್‌ಇಂಡಿಯಾದ ವಿಮಾನ ಸಂಖ್ಯೆ ‘ಎಐ117’ ಅಮೃತಸರದಿಂದ ಬರ್ಮಿಂಗ್‌ಹ್ಯಾಂಗೆ ತೆರಳುತ್ತಿತ್ತು. ಇದು ಕೂಡ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಆಗಿತ್ತು. ಆಗ ತುರ್ತು ಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಎಮರ್ಜೆನ್ಸಿ ಸಾಧನ ‘ರ್‍ಯಾಮ್ ಏರ್ ಟರ್ಬೈನ್’(ಆರ್‌ಎಟಿ ಅಥವಾ ರ್‍ಯಾಟ್) ದಿಢೀರ್ ಆಗಿ ಆನ್ ಆಗಿದೆ. ವಿಮಾನವು ಬರ್ಮಿಂಗ್‌ಹ್ಯಾಂನಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಅದರ ಎಲ್ಲ ಎಲೆಕ್ಟ್ರಿಕ್ ಹಾಗೂ ಹೈಡ್ರಾಲಿಕ್ ವಿಭಾಗಗಳು ಸಹಜಸ್ಥಿತಿ ಕಾರ್ಯಾಚರಿಸುತ್ತಿವೆ ಎಂದು ಏರ್‌ಇಂಡಿಯಾ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಆದರೆ, ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರು, ಯಾವ ಕಾರಣಕ್ಕೆ ಆರ್‌ಎಟಿ ಚಾಲೂ ಆಯಿತು ಎಂಬುದನ್ನು ಏರ್‌ಇಂಡಿಯಾ ಅಧಿಕಾರಿಗಳು ಈವರೆಗೆ ಖಚಿತಪಡಿಸಿಲ್ಲ.
ಈ ನಡುವೆ, ಡ್ರೀಮ್‌ಲೈನರ್ ವಿಮಾನಗಳ ಸಮಗ್ರ ತಪಾಸಣೆಗೆ ಪೈಲಟ್‌ಗಳ ಸಂಘ ಆಗ್ರಹಿಸದೆ.
ರ್‍ಯಾಟ್ ಏಕೆ ಆನ್ ಆಯಿತು? ನಿಗೂಢ:
ಸಾಮಾನ್ಯವಾಗಿ ವಿಮಾನದ ಎರಡೂ ಇಂಜಿನ್‌ಗಳು, ಎಲೆಕ್ಟ್ರಾನಿಕ್ ಅಥವಾ ಹೈಡ್ರಾಲಿಕ್ ವಿಭಾಗ ಕೈಕೊಟ್ಟಾಗ ಆರ್‌ಎಟಿ (ರ್‍ಯಾಟ್) ಸ್ವಯಂಚಾಲಿತವಾಗಿ ಚಾಲೂ ಆಗುತ್ತದೆ. ತುರ್ತು ಸಂದರ್ಭದಲ್ಲಿ ಗಾಳಿಯ ವೇಗ ಬಳಸಿಕೊಂಡು ವಿಮಾನಕ್ಕೆ ಶಕ್ತಿ ನೀಡಲು ಈ ಕಿರು ಎಂಜಿನ್ ನೆರವಿಗೆ ಬರುತ್ತದೆ. ಆದರೆ ಈಗ ಏಕೆ ರ್‍ಯಾಟ್ ಆನ್ ಆಯಿತು ಎಂಬುದು ನಿಗೂಢವಾಗಿದೆ. ಏಕೆಂದರೆ ವಿಮಾನದ ಎಲ್ಲ ವಿಭಾಗಗಳು ಸೂಕ್ತವಾಗಿ ಕೆಲಸ ಮಾಡುತ್ತಿದ್ದವು ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಏರ್ ಇಂಡಿಯಾವು ಬರ್ಮಿಂಗ್‌ಹ್ಯಾಂ-ದೆಹಲಿ ನಡುವಿನ ವಿಮಾನವನ್ನು ರದ್ದು ಮಾಡಿದ್ದು, ಎಐ117 ವಿಮಾನದ ಪೂರ್ಣ ಪರಿಶೀಲನೆಗೆ ಮುಂದಾಗಿದೆ.
ಜೂ.12ರಂದು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾದ ಇದೇ ಮಾದರಿಯ ಬೋಯಿಂಗ್ 787-8 ವಿಮಾನವು ಗುಜರಾತ್ ಏರ್ಪೋರ್ಟಿಂದ ಆಗಸಕ್ಕೇರಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ 260 ಮಂದಿ ಮೃತಪಟ್ಟಿದ್ದರು. ಆಗ ವಿಮಾನದ ಎರಡೂ ಎಂಜಿನ್‌ಗಳು ವಿಫಲಗೊಂಡು ಈ ವಿಮಾನದಲ್ಲೂ ಆರ್‌ಎಟಿ ಚಾಲೂ ಆಗಿತ್ತು. ಆದಾಗ್ಯೂ ವಿಮಾನ ದುರಂತ ಸಂಭವಿಸಿತ್ತು.
ಏನಿದು ಆರ್‌ಎಟಿ? ಆರ್‌ಎಟಿ (ರ್‍ಯಾಟ್) ಎಂದರೆ ರ್‍ಯಾಮ್ ಏರ್ ಟರ್ಬೈನ್ ವ್ಯವಸ್ಥೆ. ಇದೊಂದು ಸಣ್ಣ ಫ್ಯಾನಿನಂಥ ಸಾಧನವಾಗಿದ್ದು, ಎಮರ್ಜೆನ್ಸಿ ಎಂಜಿನ್ ಎಂದೂ ಕರೆಯಲಾಗುತ್ತದೆ. ವಿಮಾನವು ತನ್ನ ಶಕ್ತಿಕಳೆದುಕೊಂಡಾಗ ಈ ಸಾಧನ ಚಾಲೂ ಆಗುತ್ತದೆ. ಮುಖ್ಯವಾಗಿ ವಿಮಾನದ ಎರಡೂ ಎಂಜಿನ್ ಕೈಕೊಟ್ಟಾಗ ಇದು ಪೈಲಟ್‌ನ ನೆರವಿಗೆ ಬರುತ್ತದೆ. ಈ ಫ್ಯಾನ್ ತನ್ನೊಳಗೆ ಬರುವ ಗಾಳಿಯನ್ನು ಶಕ್ತಿಯಾಗಿ ಪರಿವರ್ತಿಸಿ ವಿಮಾನದ ರಕ್ಷಣೆಗೆ ಧಾವಿಸುತ್ತದೆ.
- ಡ್ರೀಮ್‌ಲೈನರ್ ವಿಮಾನದಲ್ಲಿ ಮತ್ತೆ ಸಮಸ್ಯೆ ಪತ್ತೆ
- ವಿಮಾನದಲ್ಲಿ ತುರ್ತು ಎಂಜಿನ್ ‘ರ್‍ಯಾಟ್’ ಆನ್
- 2 ಎಂಜಿನ್ ಕೈಗೊಟ್ಟಾಗ ಕಾರ್‍ಯನಿರ್ವಹಿಸುವ ‘ರ್‍ಯಾಟ್’
- ಆದರೆ ಈ ಸಲ ಇದೇಕೆ ಆನ್ ಆಯಿತು ಎಂಬುದು ನಿಗೂಢ
- ಬರ್ಮಿಂಗ್‌ಹ್ಯಾಂನಲ್ಲಿ ಸುರಕ್ಷಿತವಾಗಿ ವಿಮಾನ ಲ್ಯಾಂಡ್
- ಘಟನೆಯ ತನಿಖೆಗೆ ಏರ್ ಇಂಡಿಯಾ ನಿರ್ಧಾರ