ಹೇಮೆ ಲಿಂಕ್‌ ಕೆನಾಲ್‌ ತಾಂತ್ರಿಕ ದೋಷ ಪತ್ತೆ ಹೊಣೆ ಡಿಸಿಎಂಗೆ

| N/A | Published : Jul 05 2025, 11:25 AM IST

DK Shivakumar

ಸಾರಾಂಶ

  ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್‌ ಯೋಜನೆ ಅನುಷ್ಠಾನದಲ್ಲಿನ ತಾಂತ್ರಿಕ ದೋಷಗಳ ಕುರಿತು ಮೊದಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪರಿಶೀಲನೆ ನಡೆಸಬೇಕು. ನಂತರ ಅಗತ್ಯವಿದ್ದರೆ ಐಐಎಸ್ಸಿ, ಐಐಟಿ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

 ಬೆಂಗಳೂರು :  ಕುಣಿಗಲ್‌ ಮತ್ತು ಮಾಗಡಿಗೆ ಕುಡಿಯುವ ನೀರು ಪೂರೈಸಲು ಅನುಷ್ಠಾನಗೊಳಿಸಲಾಗುತ್ತಿರುವ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್‌ ಯೋಜನೆ ಅನುಷ್ಠಾನದಲ್ಲಿನ ತಾಂತ್ರಿಕ ದೋಷಗಳ ಕುರಿತು ಮೊದಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪರಿಶೀಲನೆ ನಡೆಸಬೇಕು. ನಂತರ ಅಗತ್ಯವಿದ್ದರೆ ಐಐಎಸ್ಸಿ, ಐಐಟಿ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಸದರಿ ಯೋಜನೆಗೆ ತುಮಕೂರು ಭಾಗದ ರೈತರಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ಯೋಜನೆ ವ್ಯಾಪ್ತಿಯ ವಿಧಾನಸಭೆ ಮತ್ತು ಲೋಕಸಭೆ ಸದಸ್ಯರೊಂದಿಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಭೆ ನಡೆಸಿದರು.

ಸಭೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕರಾದ ಸುರೇಶ್‌ ಗೌಡ, ಎಂ.ಟಿ. ಕೃಷ್ಣಪ್ಪ ಸೇರಿ ಇತರರು ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್‌ಗೆ ವಿರೋಧಕ್ಕೆ ಕಾರಣಗಳನ್ನು ವಿವರಿಸಿದರು. ಪ್ರಮುಖವಾಗಿ ತುಮಕೂರಿಗೆ ನೀರು ಪೂರೈಸುವ ಹೇಮಾವತಿ ಕೆನಾಲ್‌ನಿಂದ ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗಲು ಲಿಂಕ್‌ ಕೆನಾಲ್‌ ನಿರ್ಮಿಸಲಾಗುತ್ತಿದೆ. ಆದರೆ, ಹಾಲಿ ಇರುವ ಕೆನಾಲ್‌ಗಿಂತ ಕೆಳಭಾಗದಲ್ಲಿ (ಭೂಮಿ ಮೇಲ್ಮೈನ 10 ಅಡಿ ಆಳದಲ್ಲಿ) ನಿರ್ಮಿಸಲಾಗುತ್ತಿದೆ. ಇದರಿಂದಾಗಿ ನೀರು ಕುಣಿಗಲ್‌ಗೆ ಹೆಚ್ಚಾಗಿ ನೀರು ಹರಿಯಲಿದ್ದು, ಲಿಂಕ್‌ ಕೆನಾಲ್‌ಗಿಂತ ಮುಂದಿನ ಪ್ರದೇಶಗಳಿಗೆ ಕಡಿಮೆ ನೀರು ಪೂರೈಕೆಯಾಗಲಿದೆ ಎಂದರು.

ತಜ್ಞರ ಸಮಿತಿ ರಚನೆಗೆ ಒತ್ತಾಯ: ಅಧ್ಯಯನ ನಡೆಸಲು ಐಐಎಸ್ಸಿ, ಐಐಟಿಯ ತಜ್ಞರ ಸಮಿತಿ ರಚಿಸಬೇಕು. ಸಮಿತಿ ನೀಡುವ ವರದಿ ಆಧರಿಸಿ ಲಿಂಕ್‌ ಕೆನಾಲ್‌ ನಿರ್ಮಾಣ ಕೈಗೊಳ್ಳುವಂತೆ ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳು ಒತ್ತಾಯಿಸಿದರು.

ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಿ.ಕೆ.ಶಿವಕುಮಾರ್‌, ಮೊದಲಿಗೆ ನಾನು ಕಾಮಗಾರಿ ಸ್ಥಳ ಪರಿಶೀಲಿಸುತ್ತೇನೆ. ಆ ವೇಳೆ ಯಾರನ್ನೂ ಕರೆದುಕೊಂಡು ಹೋಗುವುದಿಲ್ಲ. ಕಾಮಗಾರಿ ಸರಿಯಾದ ರೀತಿ ನಡೆಯದಿದ್ದರೆ, ತುಮಕೂರು ಜಿಲ್ಲೆಗೆ ಅನ್ಯಾಯವಾಗುವಂತಿದ್ದರೆ ಐಐಎಸ್ಸಿ, ಐಐಟಿ ತಜ್ಞರ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಿದರು. ಅದಕ್ಕೆ ಎಲ್ಲ ಜನಪ್ರತಿನಿಧಿಗಳು ಸಮ್ಮತಿಸಿದರು.

Read more Articles on