ಸಾರಾಂಶ
ಮುಂಬೈ: ಆನ್‌ಲೈನ್ ವಿಧಾನದಲ್ಲಿ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಹಾಗೂ ಹೊಸ ಕ್ರೆಡಿಟ್ ಕಾರ್ಡ್ ವಿತರಣೆ ಮಾಡದಂತೆ ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ನಿರ್ಬಂಧಿಸಿ ರಿಸರ್ವ್ ಬ್ಯಾಂಕ್ ಬುಧವಾರ ಆದೇಶಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಆರ್‌ಬಿಐ, ‘ಐಟಿ ರಿಸ್ಕ್ ಮ್ಯಾನೇಜ್‌ಮೆಂಟ್‌ನಲ್ಲಿ ಸತತ ಎರಡು ವರ್ಷಗಳಿಂದ ಕೋಟಕ್ ಮಹೀಂದ್ರಾ ಬ್ಯಾಂಕ್ ಆರ್‌ಬಿಐ ನಿರ್ದೇಶನಗಳನ್ನು ಪಾಲಿಸಲು ವಿಫಲವಾಗಿದೆ. ಜೊತೆಗೆ ಈ ಕುರಿತು ನೀಡಿರುವ ನೋಟಿಸ್‌ಗೆ ಸಮರ್ಪಕ ಸ್ಪಷ್ಟೀಕರಣವನ್ನು ನೀಡಲೂ ಬ್ಯಾಂಕ್ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕೋಟಕ್ ಮಹೀಂದ್ರಾ ಬ್ಯಾಂಕ್ ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ವಿಧಾನದ ಮೂಲಕ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಬಾರದು. ಜೊತೆಗೆ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ಸಹ ವಿಕ್ರಯ ಮಾಡಬಾರದು ಎಂಬುದಾಗಿ ಆದೇಶಿಸಲಾಗಿದೆ’ ಎಂದು ತಿಳಿಸಿದೆ.
ಆದಾಗ್ಯೂ ಕೋಟಕ್ ಬ್ಯಾಂಕ್ ತನ್ನ ಹಾಲಿ ಗ್ರಾಹಕರು ಹಾಗೂ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸೇವೆ ಮುಂದುವರಿಸಲು ಅವಕಾಶ ನೀಡಿದೆ. ಇತ್ತೀಚೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೂ ಸಹ ಆರ್‌ಬಿಐ ತನ್ನ ನಿರ್ದೇಶನಗಳನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಜರುಗಿಸಿತ್ತು.
ಏಕೆ ಬ್ಯಾಂಕ್ ಮೇಲೆ ಕ್ರಮ?:
ಕೋಟಕ್ ಮಹೀಂದ್ರಾ ಬ್ಯಾಂಕ್ 2022 ಮತ್ತು 2023ನೇ ಸಾಲಿನಲ್ಲಿ ಆರ್‌ಬಿಐ ನಿರ್ದೇಶನಗಳ ಅನುಸಾರ ಐಟಿ ರಿಸ್ಕ್ ಮ್ಯಾನೇಜ್‌ಮೆಂಟ್ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ. ಇದರಿಂದ ಗ್ರಾಹಕರ ಖಾಸಗಿ ಮಾಹಿತಿ ಸೋರಿಕೆಯಾಗುವ ಅಪಾಯ ಇರುತ್ತದೆ. ಈ ಕುರಿತು ಆರ್‌ಬಿಐ ಕಳುಹಿಸಿದ ನೋಟಿಸ್‌ಗೂ ಸಹ ಬ್ಯಾಂಕ್ ಸಮರ್ಪಕ ಸ್ಪಷ್ಟೀಕರಣ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ.