ಸಾರಾಂಶ
ವಾಷಿಂಗ್ಟನ್: ವಿಚಿತ್ರ ಆದೇಶ ಮತ್ತು ಕ್ರಮಗಳಿಗೇ ಹೆಸರಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಇದೀಗ ವಲಸಿಗರಿಗೆ ಅಮೆರಿಕದ ಪೌರತ್ವ ನೀಡಲು ರಿಯಾಲಿಟಿ ಶೋ ನಡೆಸಲಿದೆ ಎಂದು ವರದಿಯಾಗಿದೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ‘ಅಮೆರಿಕನ್’ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ವಲಸಿಗ ಸ್ಪರ್ಧಿಗಳಿಗೆ ಪೌರತ್ವ ನೀಡುವ ಬಗ್ಗೆ ಗೃಹ ಸಚಿವಾಲಯ ಚಿಂತನೆ ನಡೆಸಿದ್ದು, ಈ ಯೋಜನೆ ಪರಿಶೀಲನೆಗೆ ಒಳಪಡುತ್ತಿದೆ ಎನ್ನಲಾಗಿದೆ.
ಈ ಪರಿಕಲ್ಪನೆಯನ್ನು ಲೇಖಕ ಹಾಗೂ ನಿರ್ಮಾಪಕ ರಾಬ್ ವೋರ್ಸಾಫ್ ಪ್ರಸ್ತಾಪಿಸಿದ್ದಾರೆ. ಇದರ ಪ್ರಕಾರ, ಒಟ್ಟು 12 ವಲಸಿಗರನ್ನು ಆಯ್ಕೆ ಮಾಡಲಾಗುವುದು. ಅವರು ಅಮೆರಿಕದಾದ್ಯಂತ ಪ್ರಯಾಣಿಸಿ ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ಎದುರಿಸುತ್ತಾರೆ. ಈ ಯಾತ್ರೆ ಎಲ್ಲಿಸ್ ದ್ವೀಪದಿಂದ ಆರಂಭವಾಗಲಿದೆ. ಈ ಮೂಲಕ, ಅವರು ಎಷ್ಟರ ಮಟ್ಟಿಗೆ ಅಮೆರಿಕನ್ನರ ಗುಣವನ್ನು ಅಳವಡಿಸಿಕೊಂಡಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು. ಅಂತೆಯೇ ಅಮೆರಿಕ ಇತಿಹಾಸ ಮತ್ತು ವಿಜ್ಞಾನದ ರಸಪ್ರಶ್ನೆಗಳೂ ಇರಲಿದ್ದು, ಇದರಲ್ಲಿ ಸೋತರೆ ಗಡೀಪಾರು ಮಾಡಲಾಗುವುದಿಲ್ಲ ಎಂದು ವೋರ್ಸಾಫ್ ಸ್ಪಷ್ಟಪಡಿಸಿದ್ದಾರೆ.
ವಿಜೇತರಿಗೆ ಕ್ಯಾಪಿಟಲ್ ಕಟ್ಟಡದ ಮೆಟ್ಟಿಲುಗಳ ಮೇಲೆ, ಉನ್ನತ ರಾಜಕಾರಣಿ ಅಥವಾ ನ್ಯಾಯಾಧೀಶರಿಂದ ಅಮೆರಿಕ ನಾಗರಿಕತ್ವ ನೀಡಲಾಗುವುದು. ಉಳಿದ ಸ್ಪರ್ಧಿಗಳಿಗೂ ನಗದು ಸೇರಿದಂತೆ ಅನೇಕ ಬಹುಮಾನಗಳನ್ನು ನೀಡಲಾಗುವುದು. ಆದರೆ ಶೋ ಯೋಜನಾ ಹಂತದಲ್ಲಿರುವುದರಿಂದ, ಎಂದಿನಿಂದ ಆರಂಭವಾಗಲಿದೆ ಎಂಬ ಬಗ್ಗೆ ಮಾಹಿತಿಯಿಲ್ಲ.