ಭಾರತ- ಪಾಕ್‌ ಯುದ್ಧನಿಲ್ಲಿಸಲು ಮಧ್ಯಸ್ಥಿಕೆ ವಹಿಸೇ ಇಲ್ಲ : ಟ್ರಂಪ್‌

| N/A | Published : May 16 2025, 01:59 AM IST / Updated: May 16 2025, 06:01 AM IST

ಸಾರಾಂಶ

: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ನೇರವಾಗಿ ಮಧ್ಯಸ್ಥಿಕೆ ವಹಿಸಿದ್ದಾಗಿ ಹಲವು ಬಾರಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇದೀಗ ಉಲ್ಟಾ ಹೊಡೆದಿದ್ದಾರೆ.

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ನೇರವಾಗಿ ಮಧ್ಯಸ್ಥಿಕೆ ವಹಿಸಿದ್ದಾಗಿ ಹಲವು ಬಾರಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇದೀಗ ಉಲ್ಟಾ ಹೊಡೆದಿದ್ದಾರೆ. ‘ನಾನು ಮಧ್ಯಸ್ಥಿಕೆ ವಹಿಸಿಲ್ಲ. ಆದರೆ ಕದನ ವಿರಾಮಕ್ಕೆ ಸಹಾಯ ಮಾಡಿದ್ದೆ’ ಎಂದು ಹೇಳಿದ್ದಾರೆ.

 ಭಾರತ - ಪಾಕ್ ಕದನ ವಿರಾಮದಲ್ಲಿ ಯಾವುದೇ ಮೂರನೇ ದೇಶ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಭಾರತ ಮೇಲಿಂದ ಮೇಲೆ ಸ್ಪಷ್ಟೀಕರಣ ಕೊಟ್ಟ ಬೆನ್ನಲ್ಲೆ ಟ್ರಂಪ್‌ರಿಂದ ಈ ಹೇಳಿಕೆ ಬಂದಿದೆ.‘ನಾನು ಹಾಗೆ ಮಾಡಿದೆ ಎಂದು (ನೇರ ಮಧ್ಯಸ್ಥಿಕೆ ವಹಿಸಿದ್ದೇನೆಂದು) ಹೇಳಲು ಬಯಸುವುದಿಲ್ಲ. ಆದರೆ ಕಳೆದ ವಾರ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಮಸ್ಯೆಯನ್ನು ಪರಿಹರಿಸಲು ನಾನು ಖಂಡಿತವಾಗಿಯೂ ಸಹಾಯ ಮಾಡಿದೆ. 

ಇಲ್ಲದಿದ್ದರೆ ಅದು ಹೆಚ್ಚು ಹೆಚ್ಚು ಪ್ರತಿಕೂಲವಾಗುತ್ತಿತ್ತು. ಯುದ್ಧದ ಬದಲಿಗೆ ವ್ಯಾಪಾರ ಮಾಡೋಣ ಎಂದೆ. ಅದರಿಂದ ಎರಡೂ ದೇಶಗಳು ತುಂಬ ಸಂತೋಷಪಟ್ಟವು. ಅವರು ಆ ದಾರಿಯಲ್ಲಿದ್ದಾರೆ ಎಂದು ಭಾವಿಸುತ್ತೇನೆ’ ಎಂದರು.

ಕಾಶ್ಮೀರ ವಿಷಯದಲ್ಲಿ ಮೂರನೇ ದೇಶದ ಪ್ರವೇಶಕ್ಕೆ ಅವಕಾಶ ಇಲ್ಲ ಎಂಬುದು ಭಾರತದ ನಿಲುವು. ಆದರೂ ಟ್ರಂಪ್‌ ತಾವೇ ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿದ್ದಾರೆ. ಹಾಗಿದ್ದರೆ ಭಾರತ ತನ್ನ ವಿದೇಶಾಂಗ ನೀತಿಯನ್ನು ಅಮೆರಿಕಕ್ಕೆ ಒತ್ತೆ ಇಟ್ಟಿದೆಯೇ ಎಂದು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಅದರ ಬೆನ್ನಲ್ಲೇ ಟ್ರಂಪ್‌ ಇಂಥದ್ದೊಂದು ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ.