ಸಾರಾಂಶ
ನವದೆಹಲಿ: ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಭಾನುವಾರ ನಡೆಸಲಾದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಮಾಹಿತಿ ಆಧಾರರಹಿತ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸ್ಪಷ್ಟಪಡಿಸಿದೆ.
ಸೋಮವಾರ ಹೇಳೀಕೆ ನೀಡಿದ ಎನ್‌ಟಿಎ ಹಿರಿಯ ನಿರ್ದೇಶಕರಾದ ಸಾಧನಾ ಪರಾಶರ್, ‘ನೀಟ್ ಪರೀಕ್ಷೆ ಪ್ರಾರಂಭವಾದ ಬಳಿಕ ಯಾರೊಬ್ಬರಿಗೂ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡುವುದಿಲ್ಲ. ಅಲ್ಲದೆ ಪ್ರತಿಯೊಂದು ಪ್ರಶ್ನೆಪತ್ರಿಕೆಯನ್ನು ವಿಶಿಷ್ಟ ಸಂಖ್ಯೆಯೊಂದಿಗೆ ಲೆಕ್ಕ ಇಟ್ಟುಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾದ ಪ್ರಶ್ನೆಪತ್ರಿಕೆಗೂ ನೈಜ ಪ್ರಶ್ನೆಪತ್ರಿಕೆಗೂ ಯಾವುದೇ ಸಾಮ್ಯತೆ ಇಲ್ಲ’ ಎಂದು ತಿಳಿಸಿದ್ದಾರೆ.
ಭಾನುವಾರ ವಿಶ್ವದಾದ್ಯಂತ 571 ನಗರಗಳ 4,750 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆದಿತ್ತು.
‘ನೀಟ್ ಪರೀಕ್ಷೆ ನಡೆಯುವಾಗ ರಾಜಸ್ಥಾನದ ಪರೀಕ್ಷಾ ಕೇಂದ್ರವೊಂದರ ಹಾಲ್‌ನಲ್ಲಿ 120 ವಿದ್ಯಾರ್ಥಿಗಳಿಗೆ ಬೇರೆ ವಿಷಯದ ಪ್ರಶ್ನೆಪತ್ರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಪ್ರಶ್ನೆ ಪತ್ರಿಕೆ ಜತೆ ಹೊರಬಂದಿದ್ದರು. ಬಳಿಕ ಎಲ್ಲ 120 ಅಭ್ಯರ್ಥಿಗಳಿಗೆ ನೈಜ ಪ್ರಶ್ನೆಪತ್ರಿಕೆಯೊಂದಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗಿದೆ. ಈ ಘಟನೆಗೂ ಸೋರಿಕೆಗೂ ಸಂಬಂಧವಿಲ್ಲ’ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.