ನಾಳೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ವಿತ್ತ ನೀತಿ ಪ್ರಕಟ : ಶೇ. 0.25 ಬಡ್ಡಿ ಕಡಿತ ?

| N/A | Published : Apr 08 2025, 05:52 AM IST

repo rate

ಸಾರಾಂಶ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ತ್ರೈಮಾಸಿಕ  ವಿತ್ತ ನೀತಿ ಏ.9ರಂದು ಪ್ರಕಟವಾಗಲಿದ್ದು, ಈ ಬಾರಿಯೂ ಆರ್‌ಬಿಐ 25 ಬಿಪಿಎಸ್‌ ಅಂಕ (ಶೇ.0.25ರಷ್ಟು) ಬಡ್ಡಿ ದರವನ್ನು ಕಡಿತ ಮಾಡಬಹುದು ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

 ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ತ್ರೈಮಾಸಿಕ  ವಿತ್ತ ನೀತಿ ಏ.9ರಂದು ಪ್ರಕಟವಾಗಲಿದ್ದು, ಈ ಬಾರಿಯೂ ಆರ್‌ಬಿಐ 25 ಬಿಪಿಎಸ್‌ ಅಂಕ (ಶೇ.0.25ರಷ್ಟು) ಬಡ್ಡಿ ದರವನ್ನು ಕಡಿತ ಮಾಡಬಹುದು ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಪ್ರತಿ ತೆರಿಗೆಯಿಂದ ಜಾಗತಿಕ ಮಾರುಕಟ್ಟೆ ನೆಲಕಚ್ಚಿರುವ ನಡುವೆಯೂ ಬಡ್ಡಿದರ ಕಡಿತ ಮಾಡಬಹುದು ಎಂದು ಹೇಳಲಾಗಿದೆ. ಜೊತೆಗೆ ಆರ್‌ಬಿಐನ ನಿಗದಿತ ಮಟ್ಟಕ್ಕಿಂತ (ಶೇ.4ಕ್ಕಿಂತ) ಹಣದುಬ್ಬರ ಇಳಿಕೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯು ಬಡ್ಡಿದರ ಕಡಿತಗೊಳಿಸಲು ಆರ್‌ಬಿಐಗೆ ಹೆಚ್ಚಿನ ಅವಕಾಶ ಕೊಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

 ಗಡೀಪಾರಿಗೆ ತಡೆ ಕೋರಿದ್ದ 26/11 ಉಗ್ರ ರಾಣಾ ಅರ್ಜಿ ವಜಾ

26/11 ಮುಂಬೈ ದಾಳಿ ಆರೋಪಿ ತಹಾವುರ್ ರಾಣಾ, ತನ್ನನ್ನು ಭಾರತಕ್ಕೆ ಗಡೀಪಾರು ಮಾಡುವುದರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.

ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಡೇವಿಡ್ ಹೆಡ್ಲಿಯೊಂದಿಗೆ ಸಂಬಂಧ ಹೊಂದಿದ್ದದ4 ವರ್ಷದ ರಾಣಾ ಪ್ರಸ್ತುತ ಲಾಸ್ ಏಂಜಲೀಸ್ ಜೈಲಿನಲ್ಲಿದ್ದಾನೆ. ಈತನ ಗಡೀಪಾರಿಗೆ ಇತ್ತೀಚೆಗೆ ಸುಪ್ರೀಂ ಕೋರ್ಟೇ ಆದೇಶ ನೀಡದ್ದರೂ, ‘ನಾನು ಪಾಕಿಸ್ತಾನೀಯನಾಗಿರುವ ಕಾರಣ ಭಾರತದ ಜೈಲಲ್ಲಿ ಪ್ರಾಣಭೀತಿ ಇದೆ’ ಎಂದು ನೆಪ ಹೇಳಿ ಗಡೀಪಾರಿಗೆ ತಡೆ ಕೋರಿದ್ದ. ಆದರೆ ಅದನ್ನು ಕೋರ್ಟ್‌ ತಿರಸ್ಕರಿಸಿದೆ. ರಾಣಾ ಗಡೀಪಾರು ಮಾಡುತ್ತೇವೆ ಎಂದು ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕೂಡ ಹೇಳಿದ್ದರು.

 ಮ.ಪ್ರ.ದಲ್ಲಿ 7 ಹೃದ್ರೋಗಿಗಳ ಸಾವಿಗೆ ಕಾರಣನಾಗಿದ್ದ ನಕಲಿ ಸರ್ಜನ್‌ ಬಂಧನ

ಭೋಪಾಲ್‌: ಮಧ್ಯಪ್ರದೇಶದ ದಾಮೋಹ್‌ ಮಿಷನರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತ 7 ಹೃದ್ರೋಗಿಗಳ ಸಾವಿಗೆ ಕಾರಣನಾಗಿದ್ದ ನಕಲಿ ವೈದ್ಯ ನರೇಂದ್ರ ಜಾನ್‌ ಕ್ಯಾಮ್‌ನನ್ನ ಪೊಲೀಸರು ಪ್ರಯಾಗರಾಜ್‌ನಲ್ಲಿ ಬಂಧಿಸಿದ್ದಾರೆ. ಈತ ಸೂಕ್ತ ಪ್ರಮಾಣಪತ್ರ ಇಲ್ಲದಿದ್ದರೂ ಕೆಲವು ಅದಕ್ಕೆ ಸರಿಹೊಂದುವ ದಾಖಲೆ ನೀಡಿ ತಾನು ಹೃದಯ ತಜ್ಞ ಎಂದು ಹೇಳಿಕೊಂಡಿದ್ದ ಹಾಗೂ ಕೆಲಸಕ್ಕೆ ಸೇರಿಕೊಂಡಿದ್ದ. ತನ್ನ ಕೃತ್ಯ ಬೆಳಕಿಗೆ ಬಂದ ಬಳಿಕ ಪರಾರಿ ಆಗಿದ್ದ. 2006ರಲ್ಲಿ ಸಾವಿಗೀಡಾದ ಛತ್ತೀಸ್‌ಗಢ ಸ್ಪೀಕರ್‌ ರಾಜೇಂದ್ರ ಶುಕ್ಲಾ ಅವರ ಸರ್ಜರಿ ಮಾಡಿದ್ದೂ ಈತನೇ ಎನ್ನಲಾಗಿದೆ.

ಕಾರುಗಳ ಆಮದು ಸುಂಕ ಶೂನ್ಯ ಮಾಡಿ: ಭಾರತಕ್ಕೆ ಇಯು ಒತ್ತಾಯ

ನವದೆಹಲಿ: ಯೂರೋಪ್‌ನಿಂದ ಭಾರತಕ್ಕೆ ರಫ್ತಾಗುವ ಕಾರುಗಳ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಕೋರಿ ಐರೋಪ್ಯ ಒಕ್ಕೂಟವು (ಇಯು) ಭಾರತ ಸರ್ಕಾರಕ್ಕೆ ಮನವಿ ಮಾಡಿದೆ. ಇದಕ್ಕೆ ಪೂರಕವೆಂಬಂತೆ ಒಪ್ಪಂದ ಅಂತಿಮಗೊಳಿಸಲು ಭಾರತ ಸರ್ಕಾರವು ಆಫರ್‌ಗಳನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿ ತೆರಿಗೆ ಹೊಡೆತದಿಂದ ತಪ್ಪಿಸಿಕೊಳ್ಳಲು ಭಾರತ ಸರ್ಕಾರವು ವಿದೇಶಿ ಕಾರುಗಳ ಆಮದಿನ ಮೇಲಿನ ಸುಂಕವನ್ನು ಶೇ.100ರಿಂದ ಶೇ.10ಕ್ಕೆ ಇಳಿಸಲು ಮುಕ್ತ ಮನಸ್ಸು ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತೆರಿಗೆ ಪ್ರಮಾಣವನ್ನು ಕೇಂದ್ರ ಸರ್ಕಾರವು ಶೇ.30ಕ್ಕಿಂತ ಕಮ್ಮಿ ಮಾಡಬಾರದು ಎಂಬ ದೇಶೀಯ ಕಾರು ತಯಾರಕರ ಬೇಡಿಕೆ ಮಧ್ಯೆಯೂ ಈ ವಿದ್ಯಮಾನ ನಡೆದಿದೆ.

 ಸಾಯುವವರೆಗೆ ಶಿಕ್ಷಕರ ಪರ ಹೋರಾಟ: ದೀದಿ 

ಕೋಲ್ಕತಾ: ಸುಪ್ರೀಂ ಕೋರ್ಟ್‌ ಆದೇಶದಿಂದ ಪಶ್ಚಿಮ ಬಂಗಾಳದಲ್ಲಿ ಕೆಲಸ ಕಳೆದುಕೊಂಡಿದ್ದ 25753 ಶಿಕ್ಷಕರ ಬೆಂಬಲಕ್ಕೆ ಸಿಎಂ ಮಮತಾ ಬ್ಯಾನರ್ಜಿ ನಿಂತಿದ್ದು, ‘ಕೆಲಸ ಕಳೆದುಕೊಂಡ ಶಿಕ್ಷಕರಿಗಾಗಿ ಜೈಲಿಗೆ ಹೋಗುವುದಕ್ಕೂ ಸಿದ್ಧನಿದ್ದೇನೆ. ಕೊನೆಯ ಉಸಿರು ಇರುವವರೆಗೆ ಅವರ ಪರ ಹೋರಾಡುನೆ. ಸಂಕಷ್ಟದಲ್ಲಿರುವ ಶಿಕ್ಷಕರಿಗೆ 2 ತಿಂಗಳೊಳಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇನೆ. ಸುಪ್ರೀಂ ಕೋರ್ಟಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.

ನೇಮಕಾತಿ ಅಕ್ರಮವಾಗಿದೆ ಎಂಬ ತೀರ್ಪಿನ ಕಾರಣ ಕೆಲಸ ಕಳೆದುಕೊಂಡ ಶಿಕ್ಷಕರ ಜೊತೆ ಸೋಮವಾರ ಸಭೆ ನಡೆಸಿದ ಟಿಎಂಸಿ ನಾಯಕಿ, ‘ಅನ್ಯಾಯದ ರೀತಿಯಲ್ಲಿ ಕೆಲಸ ಕಳೆದುಕೊಂಡವರ ಪರವಾಗಿ ನಾನು ನಿಲ್ಲುತ್ತೇನೆ. ಬೇರೆಯವರು ಏನು ಯೋಚಿಸುತ್ತಾರೆ ಎನ್ನುವುದು ನನಗೆ ಬೇಕಾಗಿಲ್ಲ. ಶಿಕ್ಷಕರ ಗೌರವವನ್ನು ಮರುಸ್ಥಾಪಿಸಲು ನಾನು ಎಲ್ಲವನ್ನೂ ಮಾಡುತ್ತೇನೆ’ ಎಂದರು.

‘ವಜಾ ಆದವರನ್ನು ನಿರುದ್ಯೋಗಿಗಳಾಗಿ ಉಳಿಯಲು ಬಿಡುವುದಿಲ್ಲ. 2 ತಿಂಗಳೊಳಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತೇನೆ. ಸ್ವಯಂಪ್ರೇರಿತರಾಗಿ ನೀವು ಶಾಲೆಗಳಿಗೆ ಹಿಂದಿರುಗಿ ಬೋಧನೆಯನ್ನು ಪುನಾರಂಭಿಸಬಹುದು. ಇನ್ನೂ ಯಾವುದೇ ವಜಾ ಪತ್ರವನ್ನು ನೀಡದ ಕಾರಣ ನೀವು ಇನ್ನೂ ಸೇವೆಯಲ್ಲಿದ್ದೀರಿ. ಯಾವುದೇ ಅರ್ಹ ಅಭ್ಯರ್ಥಿ ಕೆಲಸ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಕರ್ತವ್ಯ’ ಎಂದರು.

* ₹6 ಸಾವಿರ ಕೋಟಿ ಬದಲು ₹14 ಸಾವಿರ ಕೋಟಿ ವಸೂಲಿ: ಮಲ್ಯ ಕಿಡಿ

ನವದೆಹಲಿ: ಭಾರತೀಯ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ತಾವು ಮಾಡಿದ ಸಾಲಕ್ಕಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕ್‌ಗಳು ಜಪ್ತಿ ಮಾಡಿವೆ ಎಂದು ಕಿಡಿಕಾರಿದ್ದಾರೆ.

‘ನಾನು ಬ್ಯಾಂಕ್‌ಗಳಿಗೆ ಪಾವತಿ ಮಾಡಬೇಕಿದ್ದ ಮೊತ್ತ 6,203 ಕೋಟಿ ರು. ಆದರೆ ಬ್ಯಾಂಕುಗಳು ದುಪಟ್ಟಿಗಿಂತ ಹೆಚ್ಚು 14,131.8 ಕೋಟಿ ರು.ಗಳನ್ನು ವಸೂಲಿ ಮಾಡಿವೆ. ಈ ದಾಖಲೆಗಳನ್ನು ನಾನು ಬ್ರಿಟನ್‌ ಕೋರ್ಟ್‌ನಲ್ಲಿ ಪ್ರಶ್ನಿಸುವೆ. ಜತೆಗೆ ಇದಕ್ಕೆ ಬ್ಯಾಂಕುಗಳು ಏನೆಂದು ವಾದ ಮಾಡಲಿವೆ ಎಂದು ನಾನು ನೋಡುತ್ತೇನೆ’ ಎಂದು ದಾಖಲೆಯೊಂದನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದಾರೆ.

ತಮ್ಮ ಕಿಂಗ್‌ಫಿಷರ್‌ ಏರ್‌ಲೈನ್ಸ್‌ಗೆಂದು ಸಾಲ ಪಡೆದಿದ್ದ ಮಲ್ಯ ಅದನ್ನು ಕಟ್ಟದೇ 2016ರಲ್ಲಿ ಭಾರತದಿಂದ ಕಾಲ್ಕಿತ್ತಿದ್ದರು.

* ವಿಮಾನದಲ್ಲೇ ವೃದ್ಧೆ ಸಾವು: ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಮುಂಬೈ: ಮುಂಬೈನಿಂದ ವಾರಾಣಸಿಗೆ ತೆರಳುತ್ತಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಪರಿಣಾಮ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮಿರ್ಜಾಪುರದ ಸುಶೀಲಾ ದೇವಿ (89) ಮುಂಬೈನಿಂದ ವಾರಾಣಸಿಗೆ ತೆರಳುತ್ತಿದ್ದರು. ಮಾರ್ಗಮಧ್ಯದಲ್ಲೇ ಅನಾರೋಗ್ಯ ಕಾಣಿಸಿಕೊಂಡಿದೆ. ರಾತ್ರಿ 10 ಗಂಟೆ ಸುಮಾರಿಗೆ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ವಿಮಾನವು ಚಿಕಲಥಾನಾ ನಿಲ್ದಾಣದಲ್ಲಿ ಇಳಿಯಿತು. ವೈದ್ಯಕೀಯ ತಂಡ ಅವರನ್ನು ಪರೀಕ್ಷಿಸುವ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ವೃದ್ಧೆಯ ಶವವನ್ನು ಛತ್ರಪತಿ ಸಂಭಾಜಿನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಏರ್‌ಲೈನ್ಸ್ ಮಾಹಿತಿ ನೀಡಿದೆ.