ಸಾರಾಂಶ
ಖಾಸಗಿ ಆಸ್ತಿಗಳ ಕುರಿತ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದಿ.ವಿ.ಆರ್. ಕೃಷ್ಣ ಅಯ್ಯರ್ ಅವರ ಕುರಿತು ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಟೀಕೆ ಮಾಡಿದ್ದಾರೆ.
ನವದೆಹಲಿ: ಖಾಸಗಿ ಆಸ್ತಿಗಳ ಕುರಿತ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದಿ.ವಿ.ಆರ್. ಕೃಷ್ಣ ಅಯ್ಯರ್ ಅವರ ಕುರಿತು ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಟೀಕೆ ಮಾಡಿದ್ದಾರೆ. ಇದಕ್ಕೆ ನ್ಯಾ. ನಾಗರತ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
1978ರ ಕರ್ನಾಟಕ ರಾಜ್ಯ ವರ್ಸಸ್ ರಂಗನಾಥ ರೆಡ್ಡಿ ಪ್ರಕರಣದಲ್ಲಿ ನ್ಯಾ। ಅಯ್ಯರ್ ಕೆಲವು ಅಭಿಪ್ರಾಯ ವ್ಯಕ್ತಪಡಿಸಿ ರಾಜ್ಯಗಳು ಖಾಸಗಿ ಆಸ್ತಿ ಮೇಲೆ ನಿಯಂತ್ರಣ ಹೊಂದಿವೆ ಎಂದಿದ್ದರು. ಆದರೆ ಇದು ಸೈದ್ಧಾಂತಿಕವಾಗಿ ತಪ್ಪು ಎಂದು ನ್ಯಾ। ಚಂದ್ರಚೂಡ್ ತಮ್ಮ ತೀರ್ಪಿನಲ್ಲಿ ಟೀಕಿಸಿದರು.ಇದಕ್ಕೆ ತಮ್ಮ ಭಿನ್ನ ತೀರ್ಪಿನಲ್ಲಿ ಆಕ್ಷೇಪಿಸಿದ ನ್ಯಾ.ನಾಗರತ್ನ, ‘ಒಬ್ಬ ನ್ಯಾಯಾಧೀಶರಿಗಿಂತ ಸುಪ್ರೀಂಕೋರ್ಟ್ ಎಂಬ ಸಾಂವಿಧಾನಿಕ ಸಂಸ್ಥೆ ದೊಡ್ಡದು. ನ್ಯಾಯಾಧೀಶರು ಒಂದೊಂದು ಕಾಲ ಘಟ್ಟದಲ್ಲಿ ನ್ಯಾಯಾಲಯದ ಭಾಗವಾಗಿರುತ್ತಾರೆ ಅಷ್ಟೇ. ಹೀಗಾಗಿ ಖಾಸಗಿ ಆಸ್ತಿಗಳ ಕುರಿತ ನ್ಯಾ.ವಿ.ಆರ್.ಕೃಷ್ಣ ಅಯ್ಯರ್ ಅವರು ಸೈದ್ಧಾಂತಿಕವಾಗಿ ತಪ್ಪು ಎಸಗಿದ್ದಾರೆ ಎಂಬ ಮುಖ್ಯ ನ್ಯಾಯಮೂರ್ತಿಗಳ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ತೀರ್ಪಿನಲ್ಲಿ ಇಂಥ ವಿಷಯಗಳ ಪ್ರಸ್ತಾಪದ ಅಗತ್ಯವೂ ಇರಲಿಲ್ಲ ಮತ್ತು ಅದನ್ನು ಸಮರ್ಥಿಗಲೂ ಆಗದು’ ಎಂದಿದ್ದಾರೆ.
‘ಅಂದಿನ ಕಾಲಘಟಕ್ಕೆ ಯಾವುದು ಸೂಕ್ತವೋ ಅದನ್ನು ಪರಿಗಣಿಸಿ ನ್ಯಾಯಮೂರ್ತಿಗಳು ತೀರ್ಪು ನೀಡಿರುತ್ತಾರೆ. ಅಂದಿಗೂ ಇಂದಿಗೂ ನಮ್ಮ ದೃಷ್ಟಿಕೋನದಲ್ಲಿ ಅಜಗಜಾಂತರ ಇದೆ ಎನ್ನುವ ಕಾರಣಕ್ಕೆ ನಿವೃತ್ತ ನ್ಯಾಯಾಧೀಶರನ್ನು ಕಟುನುಡಿಗಳಲ್ಲಿ ಖಂಡಿಸುವುದು ಮತ್ತು ಅವರು ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂಬಂತೆ ದೂರುವುದು ತರವಲ್ಲ. ಮುಂದಿನ ದಿನಗಳಲ್ಲಿ ಯಾರೂ ಕೂಡಾ ಹೀಗೆ ನಿವೃತ್ತ ನ್ಯಾಯಮೂರ್ತಿಗಳನ್ನು ಖಂಡಿಸುವ ಸಂಪ್ರದಾಯ ಯಾರೂ ಪಾಲಿಸಬಾರದು’ ಎಂದು ಹೇಳಿದ್ದಾರೆ.ನ್ಯಾ. ಧುಲಿಯಾ ಕೂಡಾ ನ್ಯಾ.ವಿ.ಆರ್.ಕೃಷ್ಣ ಅಯ್ಯರ್ ಕುರಿತ, ಸಿಜೆಐ ಚಂದ್ರಚೂಡ್ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.