ಸಾರಾಂಶ
ನವದೆಹಲಿ: ಚುನಾವಣಾ ಬಾಂಡ್‌ಗಳ ಕುರಿತು ಭಾರತೀಯ ಸ್ಟೇಟ್ ಬ್ಯಾಂಕ್ ಪೂರ್ಣ ಮಾಹಿತಿ ನೀಡುವವರೆಗೂ ಲೋಕಸಭಾ ಚುನಾವಣೆ ದಿನಾಂಕ ಘೋಷಿಸಬೇಡಿ ಎಂದು ನಾಗರಿಕ ಸೇವೆಯ ನಿವೃತ್ತ ಅಧಿಕಾರಿಗಳ ತಂಡವೊಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
48 ಕೋಟಿಗೂ ಹೆಚ್ಚು ಖಾತೆ ಹೊಂದಿರುವ ದೇಶದ ಅತಿದೊಡ್ಡ ಬ್ಯಾಂಕ್ ಆದ ಎಸ್‌ಬಿಐ, ಸುಪ್ರೀಂಕೋರ್ಟ್ ಸೂಚಿಸಿದಂತೆ ಮಾಹಿತಿ ನೀಡಲು 17 ದಿನಗಳ ಅವಕಾಶ ನೀಡಿದರೂ ವಿಫಲವಾಗಿದೆ.
ಎಲ್ಲಾ ದಾಖಲೆಗಳನ್ನು ಕೈಬರದ ರೂಪದಲ್ಲಿ ಇಟ್ಟಿರುವ ಕಾರಣ ಇನ್ನಷ್ಟು ಸಮಯ ಬೇಕು ಎಂಬ ಅತ್ಯಂತ ಪೇಲವ ಕಾರಣ ನೀಡಿದೆ. ಹಣಕಾಸು ಇಲಾಖೆಯ ನಿವೃತ್ತ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹಿಂದೊಮ್ಮೆ ನೀಡಿದ ಸಂದರ್ಶನದಲ್ಲಿ ಬಾಂಡ್ ಕುರಿತ ಯಾವುದೇ ಮಾಹಿತಿ ಪಡೆಯಲು 10 ನಿಮಿಷಕ್ಕಿಂತ ಹೆಚ್ಚಿನ ಸಮಯ ಬೇಡ ಎಂದಿದ್ದರು.
ಇದನ್ನೆಲ್ಲಾ ನೋಡಿದರೆ ಬ್ಯಾಂಕ್, ಅಧಿಕಾರದಲ್ಲಿ ಇರುವವರನ್ನು ಟೀಕೆಯಿಂದ ರಕ್ಷಣೆಗೆ ಮುಂದಾದಂತಿದೆ ಹೀಗಾಗಿ ಆಯೋಗಕ್ಕೆ ಎಸ್‌ಬಿಐ ಉತ್ತರ ನೀಡುವವರೆಗೂ ಚುನಾವಣಾ ದಿನಾಂಕ ಘೋಷಣೆ ಮಾಡಬಾರದು ಎಂದು ಕಾನ್‌ಸ್ಟಿಟ್ಯೂಷನ್ ಕಂಡಕ್ಟ್ ಗ್ರೂಪ್ ಹೆಸರಿನ ನಿವೃತ್ತ ಅಧಿಕಾರಿಗಳ ತಂಡ ಪತ್ರ ಬರೆದಿದೆ.ಅಲ್ಲದೆ ಯಾವುದೇ ರಾಜಕೀಯ ಪಕ್ಷ, ಸಂಘಟನೆ ಜೊತೆ ನಂಟು ಹೊಂದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.