2023-24ನೇ ಸಾಲಿನಲ್ಲಿ₹10 ಲಕ್ಷ ಕೋಟಿ ಆದಾಯ ದಾಟಿದ ರಿಲಯನ್ಸ್‌ ಇಂಡಸ್ಟ್ರೀಸ್‌ : ಭಾರತದ ಮೊದಲ ಕಂಪನಿ

| Published : Aug 30 2024, 01:01 AM IST / Updated: Aug 30 2024, 05:55 AM IST

ಸಾರಾಂಶ

ರಿಲಯನ್ಸ್‌ ಇಂಡಸ್ಟ್ರೀಸ್‌ 2023-24ನೇ ಸಾಲಿನಲ್ಲಿ ₹10 ಲಕ್ಷ ಕೋಟಿ ಆದಾಯ ದಾಟಿದ ಭಾರತದ ಮೊದಲ ಕಂಪನಿ ಎನಿಸಿದೆ. ಷೇರುದಾರರಿಗೆ 1:1 ಬೋನಸ್‌ ಷೇರು ನೀಡುವ ಸಾಧ್ಯತೆ ಇದೆ. ಜಿಯೋ ಜಗತ್ತಿನ ನಂ.1 ಮೊಬೈಲ್‌ ಡೇಟಾ ಕಂಪನಿಯಾಗಿ ಹೊರಹೊಮ್ಮಿದೆ.

ಮುಂಬೈ: ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ 2023-24ನೇ ಸಾಲಿನಲ್ಲಿ 10,00,112 ಲಕ್ಷ ಕೋಟಿ ರು. ಅದಾಯ ಸಂಗ್ರಹಿಸಿದೆ. ಈ ಮೂಲಕ ವಾರ್ಷಿಕ 10 ಲಕ್ಷ ಕೋಟಿ ರು. ಆದಾಯದ ಗಡಿ ದಾಟಿದ ಭಾರತದ ಮೊದಲ ಕಂಪನಿ ಎಂಬ ಹಿರಿಮೆಗೆ ಪಾತ್ರವಾಗಿದೆ. ಗುರುವಾರ ಇಲ್ಲಿ ನಡೆದ ಕಂಪನಿಯ ವಾರ್ಷಿಕ ಸಭೆಯಲ್ಲಿ ಮುಕೇಶ್‌ ಅಂಬಾನಿ ಈ ಮಾಹಿತಿ ನೀಡಿದರು. ಇದೆ ಅವಧಿಯಲ್ಲಿ ಕಂಪನಿ 2.99 ಲಕ್ಷ ಕೋಟಿ ರು. ಮೌಲ್ಯದ ಉತ್ಪನ್ನ ರಫ್ತು ಮಾಡಿದೆ. ಒಟ್ಟಾರೆ 79020 ಕೋಟಿ ರು. ಲಾಭ ಮಾಡಿದೆ. ಸರ್ಕಾರಕ್ಕೆ 1.86 ಲಕ್ಷ ಕೋಟಿ ರು. ತೆರಿಗೆ ಪಾವತಿ ಮಾಡಿದೆ. ಸಾಮಾಜಿಕ ಹೊಣೆಗಾರಿಕಾ ನಿಧಿಯಡಿ 1592 ಕೋಟಿ ರು. ವಿನಿಯೋಗಿಸಿದೆ. ಜೊತೆಗೆ ಕಳೆದ ಮೂರು ವರ್ಷಗಳಲ್ಲಿ 5.28 ಲಕ್ಷ ಕೋಟಿ ರು. ಹೂಡಿಕೆ ಮಾಡಿದೆ ಎಂದು ಅಂಬಾನಿ ಮಾಹಿತಿ ನೀಡಿದ್ದಾರೆ.

==

ಆರ್‌ಐಎಲ್‌ ಗ್ರಾಹಕರಿಗೆ 1:1 ಬೋನಸ್‌ ಷೇರು?

ನವದೆಹಲಿ : ಭಾರತದ ಅತಿದೊಡ್ಡ ಕಂಪನಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ತನ್ನ ಷೇರುದಾರರಿಗೆ ಭರ್ಜರಿ ಬೋನಸ್‌ ನೀಡಲು ಮುಂದಾಗಿದ್ದು, 1:1 ಬೋನಸ್‌ ಷೇರು ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಸೆ.5ರಂದು ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಿದೆ.ಆರ್‌ಐಎಲ್‌ ಪ್ರತಿ ಷೇರಿಗೆ ಸದ್ಯ 3042 ರು. ಬೆಲೆಯಿದೆ. 1:1 ಬೋನಸ್‌ ಷೇರು ಪ್ರಕಟಿಸಿದರೆ ಆರ್‌ಐಎಲ್‌ ಗ್ರಾಹಕರು ತಾವು ಹೊಂದಿರುವ ಪ್ರತಿ 1 ಷೇರಿಗೆ 1 ಷೇರನ್ನು ಉಚಿತವಾಗಿ ಪಡೆಯಲಿದ್ದಾರೆ.

2017 ಹಾಗೂ 2009ರಲ್ಲಿ ಆರ್‌ಐಎಲ್‌ 1:1 ಬೋನಸ್‌ ಷೇರು ನೀಡಿತ್ತು.

==

ಜಿಯೋ ಈಗ ಜಗತ್ತಿನ ನಂ.1 ಡೇಟಾ ಕಂಪನಿ!

ನವದೆಹಲಿ : ಎಂಟು ವರ್ಷಗಳ ಹಿಂದೆ ಪ್ರಾರಂಭವಾದ ಜಿಯೋ ಕಂಪನಿ ಇದೀಗ ಜಗತ್ತಿನ ನಂ.1 ಮೊಬೈಲ್‌ ಡೇಟಾ ಕಂಪನಿಯಾಗಿ ಹೊರಹೊಮ್ಮಿದೆ. ಜಿಯೋ ಬಳಿ ಈಗ 49 ಕೋಟಿ ಗ್ರಾಹಕರಿದ್ದು, ಇವರು ಮಾಸಿಕ ಸರಾಸರಿ 30 ಜಿ.ಬಿ. ಡೇಟಾ ಬಳಕೆ ಮಾಡುತ್ತಿದ್ದಾರೆ.ಗುರುವಾರ ನಡೆದ ರಿಲಯನ್ಸ್‌ ಇಂಡಸ್ಟ್ರೀಸ್‌ನ 47ನೇ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಈ ವಿಷಯ ತಿಳಿಸಿದರು. ಭಾರತವೀಗ ಜಗತ್ತಿನ ಅತಿದೊಡ್ಡ ಮೊಬೈಲ್‌ ಡೇಟಾ ಮಾರುಕಟ್ಟೆಯಾಗಿದ್ದು, ಜಿಯೋ ಕಂಪನಿಯು ಜಗತ್ತಿನ ಮೊಬೈಲ್‌ ಟ್ರಾಫಿಕ್‌ನಲ್ಲಿ ಶೇ.8ರಷ್ಟು ಪಾಲು ಹೊಂದಿದೆ. ಜಗತ್ತಿನ ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳನ್ನು ಜಿಯೋ ಹಿಂದಿಕ್ಕಿದೆ ಎಂದು ಹೇಳಿದರು.

ಜಿಯೋ ಗ್ರಾಹಕರು ತಿಂಗಳಿಗೆ ಸರಾಸರಿ 30 ಜಿ.ಬಿ. ಡೇಟಾ ಬಳಕೆ ಮಾಡುತ್ತಾರೆ. 5ಜಿ ಹಾಗೂ 6ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಿಯೋ 350 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಿದೆ ಎಂದೂ ತಿಳಿಸಿದರು.

==

ಜಿಯೋ ಗ್ರಾಹಕರಿಗೆ 100 ಜಿಬಿ ಉಚಿತ ಎಐ ಕ್ಲೌಡ್‌ ಸ್ಪೇಸ್‌

ನವದೆಹಲಿ :ಕೃತಕ ಬುದ್ಧಿಮತ್ತೆ (ಎಐ) ಹಾಗೂ ಕ್ಲೌಡ್‌ ಸೇವೆಗಳು ಜನಸಾಮಾನ್ಯರಿಗೂ ಲಭಿಸುವಂತೆ ಮಾಡಲು ರಿಲಯನ್ಸ್‌ ಸಮೂಹದ ಜಿಯೋ ಕಂಪನಿ ತನ್ನ ಎಲ್ಲ ಗ್ರಾಹಕರಿಗೆ 100 ಜಿ.ಬಿ.ವರೆಗಿನ ಎಐ-ಕ್ಲೌಡ್‌ ಸ್ಟೋರೇಜನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ.

ಗುರುವಾರ ನಡೆದ ರಿಲಯನ್ಸ್‌ ಇಂಡಸ್ಟ್ರೀಸ್‌ನ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಈ ವಿಷಯ ಪ್ರಕಟಿಸಿದರು. ಜಿಯೋ ಎಐ-ಕ್ಲೌಡ್‌ ಸೇವೆಯನ್ನು ಬಳಸಿಕೊಂಡು ಜಿಯೋ ಗ್ರಾಹಕರು 100 ಜಿ.ಬಿ.ಯಷ್ಟು ಫೋಟೋಗಳು, ವಿಡಿಯೋಗಳು, ದಾಖಲೆಗಳು ಹಾಗೂ ಡಿಜಿಟಲ್‌ ಕಂಟೆಂಟ್‌ಗಳನ್ನು ಉಚಿತವಾಗಿ ತಮ್ಮ ಮೊಬೈಲ್‌, ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ನ ಹೊರಗೆ ಇಂಟರ್ನೆಟ್‌ನಲ್ಲೇ ಸೇವ್‌ ಮಾಡಿ ಇರಿಸಿಕೊಂಡು, ಬೇಕೆಂದಾಗ ಬಳಸಿಕೊಳ್ಳಬಹುದು. ದೀಪಾವಳಿಯಿಂದ ಈ ಸೇವೆ ಎಲ್ಲಾ ಜಿಯೋ ಗ್ರಾಹಕರಿಗೂ ಲಭ್ಯವಾಗಲಿದೆ ಎಂದು ತಿಳಿಸಿದರು.ಎಐ ತಂತ್ರಜ್ಞಾನ ಬಳಸಲು ಹೆಚ್ಚು ಸ್ಪೇಸ್ ಬೇಕಾಗುತ್ತದೆ. ಇದನ್ನು ಜಿಯೋ ಕ್ಲೌಡ್‌ ನೀಡಲಿದೆ. ಅಲ್ಲಿಂದ ಸಾಮಾನ್ಯ ಜಿಯೋ ಗ್ರಾಹಕರೂ ಎಐ ತಂತ್ರಜ್ಞಾನದ ಲಾಭ ಪಡೆಯಬಹುದು ಎಂದು ಹೇಳಿದರು.