ಸಾರಾಂಶ
ರೂಲ್ ಫ್ರಂ ಜೈಲ್ (ಜೈಲಿನಿಂದಲೇ ಆಡಳಿತ) ನಡೆಸುವ ಅಧಿಕಾರ ಯಾರಿಗೂ ಇಲ್ಲ. ಕ್ರಿಮಿನಲ್‌ಗಳು ಜೈಲಲ್ಲಿರಬೇಕೇ ವಿನಾ ಅಧಿಕಾರದಲ್ಲಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಗಯಾಜಿ (ಬಿಹಾರ) : ‘ವಿರೋಧ ಪಕ್ಷದ ಬಹುತೇಕ ನಾಯಕರು ಜೈಲಿನಲ್ಲಿರುವ ಅಥವಾ ಜಾಮೀನಿನ ಮೇಲೆ ಹೊರಗಿರುವ ಕಾರಣದಿಂದಲೇ, ಸತತ 30 ದಿನ ಜೈಲಿನಲ್ಲಿರುವ ಪ್ರಧಾನಮಂತ್ರಿ, ಸಿಎಂಗಳು ಹಾಗೂ ಮಂತ್ರಿಗಳ ವಜಾಕ್ಕೆ ಅವಕಾಶ ಕಲ್ಪಿಸುವ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರೂಲ್ ಫ್ರಂ ಜೈಲ್ (ಜೈಲಿನಿಂದಲೇ ಆಡಳಿತ) ನಡೆಸುವ ಅಧಿಕಾರ ಯಾರಿಗೂ ಇಲ್ಲ. ಕ್ರಿಮಿನಲ್‌ಗಳು ಜೈಲಲ್ಲಿರಬೇಕೇ ವಿನಾ ಅಧಿಕಾರದಲ್ಲಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
5 ವರ್ಷಕ್ಕಿಂತ ಹೆಚ್ಚಿನ ಜೈಲುಶಿಕ್ಷೆಗೆ ಗುರಿಯಾಗುವ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಹುದ್ದೆಯಿಂದ ವಜಾಗೊಳಿಸುವ ಮಹತ್ವದ ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಗೃಹಮಂತ್ರಿ ಅಮಿತ್ ಶಾ ಮಂಡಿಸಿದ್ದರು. ಇದಕ್ಕೆ ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಶುಕ್ರವಾರ ಗಯಾಜಿಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಬಳಿಕ, ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಜೈಲುಪಾಲಾದ ಅಧಿಕಾರಿಗಳನ್ನು ವಜಾ ಮಾಡಲಾಗುತ್ತದೆ. ಆದರೆ ರಾಜಕಾರಣಿಗಳಿಗೆ ಈ ನಿಯಮ ಏಕೆ ಅನ್ವಯಿಸಬಾರದು?’ ಎಂದು ಮೋದಿ ಪ್ರಶ್ನಿದರು.
‘ವಿಪಕ್ಷಗಳ ಬಹುತೇಕ ನಾಯಕರು ಜೈಲಿನಲ್ಲಿದ್ದಾರೆ ಅಥವಾ ಜಾಮೀನಿನ ಮೇಲೆ ಹೊರಗಿದ್ದಾರೆ. ಹಾಗಾಗಿಯೇ ಹೊಸ ಮಸೂದೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಅನೇಕರು ಜೈಲಲ್ಲೇ ಸಂಪುಟ ಸಭೆ ನಡೆಸಿ ಕಡತಕ್ಕೆ ಸಹಿ ಹಾಕಿದ್ದಾರೆ. ಆರ್‌ಜೆಡಿ ಹಾಗೂ ಅದರ ಮಿತ್ರಪಕ್ಷಗಳು ಬಿಹಾರದ ಜನರನ್ನು ಕೇವಲ ಮತಬ್ಯಾಂಕ್ ಆಗಿ ಪರಿಗಣಿಸುತ್ತವೆ. ಆರ್‌ಜೆಡಿ ನಾಯಕರು ಭ್ರಷ್ಟ ಕೆಲಸದಲ್ಲಿ ತೊಡಗಿರುವುದು ರಾಜ್ಯದ ಪ್ರತಿಯೊಬ್ಬರಿಗೂ ಗೊತ್ತು. ಆರ್‌ಜೆಡಿ ಮತ್ತು ಕಾಂಗ್ರೆಸ್ ಅವಧಿಯಲ್ಲಿ, ಬಿಹಾರದಲ್ಲಿ ಯಾವುದೇ ಪ್ರಮುಖ ಯೋಜನೆ ಪೂರ್ಣಗೊಂಡಿಲ್ಲ. ಅವರು ಯಾವತ್ತೂ ಜನರ ಉನ್ನತಿ ಬಗ್ಗೆ ಯೋಚಿಸಿಲ್ಲ. ತಮ್ಮ ಜೇಬು ತುಂಬಿಸಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದರು’ ಎಂದು ಕಿಡಿ ಕಾರಿದರು. ‘ನುಸುಳುಕೋರರು ಬಿಹಾರದ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ಆರ್‌ಜೆಡಿ ಮತ್ತು ಕಾಂಗ್ರೆಸ್ ಈ ನುಸುಳುಕೋರರನ್ನು ಬೆಂಬಲಿಸುತ್ತಿವೆ. ಅವರು ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದ್ದಾರೆ. ಬಿಹಾರದ ಜನರು ಅಂತಹ ಪಕ್ಷಗಳು ಮತ್ತು ಅವರ ನಾಯಕರ ಬಗ್ಗೆ ಜಾಗರೂಕರಾಗಿರಬೇಕು’ ಎಂದರು.
ಕೇಜ್ರಿ ರಾಜೀನಾಮೆ ನೀಡಿದ್ದರೆ ಕ್ರಿಮಿನಲ್ ನೇತಾ ಕಾಯ್ದೆ ಬರ್ತಿರಲಿಲ್ಲ: ಶಾ
ಪಿಟಿಐ ತಿರುನೆಲ್ವೇಲಿ/ಕೊಚ್ಚಿಮಂತ್ರಿಗಳು 30 ದಿನ ಜೈಲಿನಲ್ಲಿದ್ದರೆ ಅವರನ್ನು ವಜಾಗೊಳಿಸುವ ಕಾನೂನಿಗೆ (ಕ್ರಿಮಿನಲ್ ನೇತಾ ಕಾಯ್ದೆ) ವಿಪಕ್ಷಗಳ ವಿರೋಧ ಬೆನ್ನಲ್ಲೇ ‘ದೆಹಲಿ ಸಿಎಂ ಆಗಿದ್ದ ಅರವಿಂದ ಕೇಜ್ರಿವಾಲ್ ಜೈಲಿಗೆ ಹೋದಾಗ ರಾಜೀನಾಮೆ ನೀಡಿದ್ದರೆ ಈ ಕಾನೂನನ್ನೇ ಜಾರಿಗೆ ತರುತ್ತಿರಲಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟಾಂಗ್ ನೀಡಿದ್ದಾರೆ.
ಕೇರಳ ಹಾಗೂ ತಮಿಳುನಾಡಲ್ಲಿ ಮಾತನಾಡಿದ ಅವರು, ‘ದೇಶದ ಜನರು ಜೈಲಿನಲ್ಲಿದ್ದು ಅಧಿಕಾರ ನಡೆಸಬೇಕು ಎಂದು ಬಯಸುತ್ತಾರೆಯೇ? ಇದು ಯಾವ ರೀತಿಯ ಚರ್ಚೆ ನನಗೆ ಅರ್ಥವಾಗುತ್ತಿಲ್ಲ. ಸಂವಿಧಾನದಲ್ಲಿ ಏಕೆ ಸೇರಿಸಿಲ್ಲ ಎಂದು ಕೇಳುತ್ತಿದ್ದಾರೆ. ಆದರೆ ಜೈಲಿಗೆ ಹೋದವರು ಚುನಾಯಿತ ಹುದ್ದೆಯಲ್ಲಿ ಮುಂದುವರೆಯುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ’ ಎಂದರು.‘ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಇತ್ತೀಚೆಗೆ ಈ ಮಸೂದೆಯನ್ನು ಕರಾಳ ಮಸೂದೆ ಎಂದಿದ್ದಾರೆ. ಅವರಿಗೆ ಇದನ್ನು ಟೀಕಿಸುವ ಹಕ್ಕಿಲ್ಲ. ಅವರದ್ದೇ ಸಂಪುಟದ ಪೊನ್ಮುಡಿ ಹಾಗೂ ಸೇಂಥಿಲ್ ಬಾಲಾಜಿ ಜೈಲಲ್ಲಿದ್ದರೂ ಮಂತ್ರಿಯಾಗಿದ್ದರು’ ಎಂದರು.
ಅಲ್ಲದೆ, ‘ಸ್ಟಾಲಿನ್ ಹಾಗೂ ಸೋನಿಯಾಗೆ ಒಂದೇ ಅಜೆಂಡಾ. ಅದು ಪುತ್ರರನ್ನು ಸಿಎಂ ಹಾಗೂ ಪಿಎಂ ಮಾಡುವುದು’ ಎಂದರು.