ರಾಮ ಮಂದಿರ ಉದ್ಘಾಟನೆ: ಅಯೋಧ್ಯೆಯಲ್ಲಿ ಹೋಟೆಲ್‌ ಬಾಡಿಗೆ ಐದು ಪಟ್ಟು ಹೆಚ್ಚಳ

| Published : Dec 18 2023, 02:00 AM IST

ರಾಮ ಮಂದಿರ ಉದ್ಘಾಟನೆ: ಅಯೋಧ್ಯೆಯಲ್ಲಿ ಹೋಟೆಲ್‌ ಬಾಡಿಗೆ ಐದು ಪಟ್ಟು ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಲ್ಲಿನ ಹೋಟೆಲುಗಳು, ಲಾಡ್ಜ್‌ಗಳಿಗೆ ಬೇಡಿಕೆ ಏರಿಕೆಯಾಗಿದೆ. ಇದರಿಂದಾಗಿ ನಗರದ ಎಲ್ಲ ಹೋಟೆಲುಗಳ ಬೆಲೆ ಐದು ಪಟ್ಟು ಏರಿಕೆಯಾಗಿದೆ. 2000 ರು. ಇದ್ದ ಬೆಲೆ 10,000 ರು.ಗೆ ಏರಿಕೆಯಾಗಿದೆ.

ಅಯೋಧ್ಯೆ: 2024ರ ಜ.22ರಂದು ನಡೆಯಲಿರುವ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ದಿನ ಸನ್ನಿಹಿತವಾಗುತ್ತಿದ್ದಂತೆ ಅಯೋಧ್ಯೆಯ ಹೋಟೆಲ್‌ ಬಾಡಿಗೆ ದರ 4-5 ಪಟ್ಟು ಹೆಚ್ಚಳವಾಗಿ ಗಗನಕ್ಕೇರಿ ಕುಳಿತಿದೆ. ಆದರೂ ಜ.15ರಿಂದ ಜ.30ರವರೆಗೆ ನಗರದ ಬಹುತೇಕ ಹೋಟೆಲ್‌ಗಳ ರೂಂಗಳು ಈಗಲೇ ಬುಕ್‌ ಆಗಿಬಿಟ್ಟಿವೆ.

ಸಾಮಾನ್ಯ ದಿನಗಳಲ್ಲಿ 1700 ರು.ಗೆ ಸಿಗುವ ಕೊಠಡಿಗೆ ಜ.15ರಿಂದ 30ರವರೆಗಿನ ಅವಧಿಯಲ್ಲಿ 10 ಸಾವಿರ ರು.ಗೆ ಹೆಚ್ಚಳ ಮಾಡಲಾಗಿದೆ. ಅಯೋಧ್ಯೆ ಪ್ಯಾಲೇಸ್‌ ಹೋಟೆಲ್‌ನ 3000 ರು. ದರದ ರೂಂಗೆ 16 ಸಾವಿರ ರು. ದರ ನಿಗದಿ ಮಾಡಲಾಗಿದೆ. ಎಸಿ ಸೌಲಭ್ಯ ಉಳ್ಳ 3000- 3500 ರು.ನ ರೂಂನ ಶುಲ್ಕ 25 ಸಾವಿರ ರು.ವರೆಗೂ ತಲುಪಿದೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವ ಐಷಾರಾಮಿ ‘ರಾಮಾಯಣ ಹೋಟೆಲ್‌’ನಲ್ಲಿ ಹಾಲಿ 7726 ರು. ಇರುವ ಕೊಠಡಿ ಶುಲ್ಕ ಜನವರಿಯಲ್ಲಿ 40 ಸಾವಿರ ರು. ತೋರಿಸುತ್ತಿದೆ. ಇದೇ ಹೋಟೆಲ್‌ ಲಕ್ಷುರಿ ಕೊಠಡಿ ಶುಲ್ಕ 23,600 ರು.ನಿಂದ 76 ಸಾವಿರ ರು.ವರೆಗೂ ಹೆಚ್ಚಳಗೊಂಡಿದೆ.ಕೆಲ ಹೋಟೆಲ್‌ಗಳು ಬೇಡಿಕೆ ಇನ್ನೂ ಹೆಚ್ಚಾಗಬಹುದು. ಆಗ ಜನರಿಂದ ಹೆಚ್ಚಿಗೆ ಹಣ ‘ವಸೂಲಿ’ ಮಾಡಬಹುದು ಎನ್ನುವ ಕಾರಣಕ್ಕಾಗಿ ಈಗಲೇ ಮುಂಗಡ ಬುಕ್ಕಿಂಗ್‌ ಅನ್ನೇ ನೀಡುತ್ತಿಲ್ಲ ಎನ್ನಲಾಗಿದೆ.ಅಯೋಧ್ಯೆಯಲ್ಲಿ 175 ಹೋಟೆಲ್‌ಗಳು, 72 ಗೆಸ್ಟ್‌ಹೌಸ್‌, 50 ಧರ್ಮಶಾಲೆ, 400ಕ್ಕಿಂತ ಹೆಚ್ಚು ಪೇಯಿಂಗ್‌ ಗೆಸ್ಟ್‌ ಲಭ್ಯತೆ ಇದೆ. ಆದರೆ ಏಕಕಾಲಕ್ಕೆ ಲಕ್ಷಾಂತರ ಜನ ಅಯೋಧ್ಯೆಗೆ ಕಡೆಗೆ ಮುಖ ಮಾಡಿರುವ ಹಿನ್ನೆಲೆಯಲ್ಲಿ ಎಷ್ಟು ಕೊಠಡಿಗಳಿದ್ದರೂ ಸಾಲದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.