ಸಾರಾಂಶ
- ಸರ್ವಶಸ್ತ್ರಸಜ್ಜಿತ ಬ್ರಿಗೇಡ್, ಬೆಟಾಲಿಯನ್ ಸ್ಥಾಪನೆ
----- ರುದ್ರ ಬ್ರಿಗೇಡಲ್ಲಿ ಶಸ್ತ್ರಸಜ್ಜಿತ ಪದಾತಿದಳ, ಫಿರಂಗಿ ಘಟಕ, ಡ್ರೋನ್, ಶಸ್ತ್ರಾಸ್ತ್ರ ಸಾಗಣೆ ವ್ಯವಸ್ಥೆ. 1200 ಯೋಧರ ಪಡೆ
- ಭೈರವ ಬ್ರಿಗೇಡ್ ಗಡೀಲಿ ನಿಯೋಜನೆ. ನಿಖರ ದಾಳಿಯ ಡ್ರೋನ್, ಆಧುನಿಕ ಫಿರಂಗಿ ಹಂಚಿಕೆ. 4000 ಯೋಧರ ಪಡೆ==
ನವದೆಹಲಿ: ಪಾಕಿಸ್ತಾನ, ಚೀನಾಗಳಂತಹ ನೆರೆದೇಶಗಳ ಉಪಟಳ ಹೆಚ್ಚುತ್ತಿರುವ ಮತ್ತು ಆಧುನಿಕ ಯುದ್ಧವು ಹೊಸ ಹೊಸ ರೂಪ ಪಡೆಯುತ್ತಿರುವ ಹೊತ್ತಿನಲ್ಲೇ, ಭಾರತೀಯ ಸೇನೆಯಲ್ಲಿ ‘ರುದ್ರ’ ಎಂಬ ಹೊಸ ಬ್ರಿಗೇಡ್ ಮತ್ತು ‘ಭೈರವ’ ಎಂಬ ಹೊಸ ಬೆಟಾಲಿಯನ್ ಸ್ಥಾಪನೆ ಘೋಷಣೆಯನ್ನು ಸೇನಾ ಮುಖ್ಯಸ್ಥ ಜ। ಉಪೇಂದ್ರ ದ್ವಿವೇದಿ ಮಾಡಿದ್ದಾರೆ.ಕಾರ್ಗಿಲ್ ವಿಜಯ ದಿನವಾದ ಶನಿವಾರ ಇಲ್ಲಿ ಮಾತನಾಡಿದ ಅವರು ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ವ ಶಸ್ತ್ರ ದಳ ಮತ್ತು ವಿಶೇಷ ಪಡೆಗಳ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ‘ಭಾರತೀಯ ಸೇನೆಯು ಪ್ರಸ್ತುತವಿರುವ ಸವಾಲುಗಳನ್ನು ಎದುರಿಸಲು ಸಮರ್ಥವಾಗಿರುವುದಷ್ಟೇ ಅಲ್ಲ, ಆಧುನೀಕರಣಗೊಂಡು, ಭವಿಷ್ಯದಲ್ಲಿ ಬೇಕಾಗುವಂತೆ ರೂಪಗೊಳ್ಳುತ್ತಿದೆ. ಇದರಡಿಯಲ್ಲಿ ರಚನೆಯಾಗಿರುವ ರುದ್ರ ದಳದಲ್ಲಿ ಶಸ್ತ್ರಸಜ್ಜಿತ ಪದಾತಿದಳ, ಫಿರಂಗಿ ಘಟಕಗಳು, ವಿಶೇಷ ಪಡೆಗಳು, ಮಾನವರಹಿತ ವೈಮಾನಿಕ ವ್ಯವಸ್ಥೆಗಳು, ಶಸ್ತ್ರಾಸ್ತ್ರ ಸಾಗಣೆ ವ್ಯವಸ್ಥೆಗಳು ಇರಲಿವೆ’ ಎಂದು ಅವರು ಹೇಳಿದ್ದಾರೆ.ಈಗಾಗಲೇ 2 ಪದಾತಿದಳಗಳನ್ನು ರುದ್ರ ಪಡೆಗಳಾಗಿ ಮಾರ್ಪಡಿಸಲಾಗಿದ್ದು, ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನು ಹೊಂದಿರುವುದೇ ಇದರ ವಿಶೇಷತೆ.
ಗಡಿ ಕಾಯಲೂ ಹೊಸ ಪಡೆ:ಗಡಿಭಾಗಗಳಲ್ಲಿ ಶತ್ರುಗಳಿಗೆ ಮಾರಕವಾಗಿ ಪರಿಣಮಿಸಬಹುದಾದ ‘ಭೈರವ’ ಎಂಬ ವಿಶೇಷ ಬೆಟಾಲಿಯನ್ ರಚಿಸಲಾಗುವುದು. ಪ್ರತಿ ಪದಾತಿದಳ ಬಳಿಯೂ ಡ್ರೋನ್ ಸಮೂಹ ಇರಲಿದೆ. ಜತೆಗೆ ಫಿರಂಗಿಗಳ ದಾಳಿ ಸಾಮರ್ಥ್ಯ ವೃದ್ಧಿಗೆ ‘ದಿವ್ಯಾಸ್ತ್ರ’ ಮತ್ತು ನಿಖರ ದಾಳಿ ಮಾಡಬಲ್ಲ ಬ್ಯಾಟರಿಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.ಬ್ರಿಗೇಡ್ ಅಥವಾ ದಳ ಎಂಬುದು 400-1200 ಸೈನಿಕರ ಒಂದು ಗುಂಪಾಗಿದ್ದರೆ, ಬೆಟಾಲಿಯನ್ 3000-4000 ಯೋಧರನ್ನು ಒಳಗೊಂಡಿರುತ್ತದೆ.