ಸಾಮೂಹಿಕ ಮದುವೆ ಮಾಡಿಸುವುದಾಗಿ ನಂಬಿಸಿ 50ಕ್ಕೂ ಅಧಿಕ ವಧು-ವರರಿಂದ ಹಣ ಪಡೆದ ಆಯೋಜಕರ ವಂಚನೆ

| N/A | Published : Feb 23 2025, 12:33 AM IST / Updated: Feb 23 2025, 04:54 AM IST

ಸಾರಾಂಶ

ಸಾಮೂಹಿಕ ಮದುವೆ ಮಾಡಿಸುವುದಾಗಿ ನಂಬಿಸಿ 50ಕ್ಕೂ ಅಧಿಕ ವಧು-ವರರಿಂದ ಹಣ ಪಡೆದ ಆಯೋಜಕರು ವಿವಾಹದ ದಿನದಂದು ಪರಾರಿಯಾಗಿ, ಅವರೆಲ್ಲರ ಆಸೆಗೆ ಕಲ್ಲು ಹಾಕಿದ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.

ರಾಜ್‌ಕೋಟ್‌: ಸಾಮೂಹಿಕ ಮದುವೆ ಮಾಡಿಸುವುದಾಗಿ ನಂಬಿಸಿ 50ಕ್ಕೂ ಅಧಿಕ ವಧು-ವರರಿಂದ ಹಣ ಪಡೆದ ಆಯೋಜಕರು ವಿವಾಹದ ದಿನದಂದು ಪರಾರಿಯಾಗಿ, ಅವರೆಲ್ಲರ ಆಸೆಗೆ ಕಲ್ಲು ಹಾಕಿದ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.

ಈ ಹಿನ್ನೆಲೆಯಲ್ಲಿ ಹಸೆಮಣೆ ಏರಬೇಕಿದ್ದವರು ಪೊಲೀಸ್‌ ಠಾಣೆಯ ಮೆಟ್ಟಿಲು ಏರುವಂತಾಗಿದೆ. 

ಆಗಿದ್ದೇನು?:

ವಧು-ವರರಿಗೆ ಉಡುಗೊರೆ, ವರದಕ್ಷಿಣೆ ಸೇರಿದಂತೆ ಮದುವೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ಭರವಸೆ ನೀಡಿದ್ದ ಆಯೋಜಕರು, ಪ್ರತಿಯೊಬ್ಬರಿಂದ 15 ಸಾವಿರ ರು. ಪಡೆದಿದ್ದರು. ಮೊದಲೇ ನಿಗದಿಯಾದಂತೆ ರಾಜ್‌ಕೋಟ್‌ ಹಾಗೂ ಸುತ್ತಲಿನ ಜಿಲ್ಲೆಗಳ 28 ಜೋಡಿಗಳು ಹಾಗೂ ಅವರ ಕಡೆಯವರು ಮದುವೆ ನಡೆಯಬೇಕಿದ್ದ ಸ್ಥಳಕ್ಕೆ ಬಂದಾಗ ಅಲ್ಲಿ ಯಾವುದೇ ವ್ಯವಸ್ಥೆಗಳನ್ನು ಮಾಡಿರಲಿಲ್ಲ. ಆಯೋಜಕರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಆಗ ಅಲ್ಲಿ ಗದ್ದಲ ಸೃಷ್ಟಿಯಾಗಿದ್ದು, ಅದನ್ನು ತಡೆಯಲು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಅಷ್ಟರಲ್ಲಾಗಲೇ ಹಲವರು ಸಮೀಪದ ದೇವಸ್ಥಾನಗಳಲ್ಲಿ ಮದುವೆ ಮಾಡಿಕೊಂಡಿದ್ದರಿಂದ, ಉಳಿದ 6 ಜೋಡಿಗಳ ಮದುವೆಯನ್ನೂ ಪೊಲೀಸರೇ ಮಾಡಿಸಿದರು.

ಈ ಸಂಬಂಧ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸಹಾಯಕ ಪೊಲೀಸ್ ಆಯುಕ್ತೆ ರಾಧಿಕಾ ಭರೈ ತಿಳಿಸಿದ್ದಾರೆ.