ರಷ್ಯಾ-ಉಕ್ರೇನ್‌ ನಡುವೆ ಯುದ್ಧ ಸಂಧಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸಂಧಾನ ಪ್ರಕ್ರಿಯೆ ನಡೆಸಿರುವ ನಡುವೆಯೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನವ್ಗೊರೊಡ್ ಪ್ರದೇಶದಲ್ಲಿರುವ ನಿವಾಸದ ಮೇಲೆ ಉಕ್ರೇನ್‌ ದಾಳಿ ಮಾಡಲು ಪ್ರಯತ್ನಿಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಸೋಮವಾರ ಆರೋಪಿಸಿದ್ದಾರೆ.

- 91 ಡ್ರೋನ್‌ ಬಳಸಿ ದಾಳಿ ಯತ್ನ, ಎಲ್ಲ ಡ್ರೋನ್ ನಾಶ

- ಇನ್ನು ನಾವು ಸುಮ್ಮನಿರಲ್ಲ: ರಷ್ಯಾ ವಿದೇಶಾಂಗ ಸಚಿವಮಾಸ್ಕೋ: ರಷ್ಯಾ-ಉಕ್ರೇನ್‌ ನಡುವೆ ಯುದ್ಧ ಸಂಧಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸಂಧಾನ ಪ್ರಕ್ರಿಯೆ ನಡೆಸಿರುವ ನಡುವೆಯೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನವ್ಗೊರೊಡ್ ಪ್ರದೇಶದಲ್ಲಿರುವ ನಿವಾಸದ ಮೇಲೆ ಉಕ್ರೇನ್‌ ದಾಳಿ ಮಾಡಲು ಪ್ರಯತ್ನಿಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಸೋಮವಾರ ಆರೋಪಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಲಾವ್ರೋವ್‌, ‘ಡಿಸೆಂಬರ್ 28-29ರ ನಡುವಿನ ರಾತ್ರಿ ಉಕ್ರೇನ್, 91 ದೀರ್ಘ-ಶ್ರೇಣಿಯ ಡ್ರೋನ್‌ ಬಳಸಿ ನವ್ಗೊರೊಡ್‌ ಪ್ರದೇಶದಲ್ಲಿರುವ ರಷ್ಯಾದ ಅಧ್ಯಕ್ಷರ ಸರ್ಕಾರಿ ನಿವಾಸದ ಮೇಲೆ ದಾಳಿ ಮಾಡಲು ಯತ್ನಿಸಿದೆ. ಆದರೆ ಎಲ್ಲ ಡ್ರೋನ್‌ಗಳನ್ನು ನಾವು ಹಿಮ್ಮೆಟ್ಟಿಸಿದ್ದೇವೆ’ ಎಂದರು.

‘ಉಕ್ರೇನ್ ನಡೆ ಖಂಡನಾರ್ಹ. ಹೀಗಾಗಿ ಇನ್ನು ಮಾಸ್ಕೋದ ಮಾತುಕತೆಯ ನಿಲುವು ಬದಲಾಗುತ್ತದೆ. ಇಂತಹ ಅಜಾಗರೂಕ ಕ್ರಮಗಳಿಗೆ ಉತ್ತರ ನೀಡದೇ ನಾವು ಸುಮ್ಮನಿರಲ್ಲ’ ಎಂದು ಗುಡುಗಿದ್ದಾರೆ.

ಆದರೆ, ದಾಳಿ ವೇಳೆ ಪುಟಿನ್, ತಮ್ಮ ನಿವಾಸದಲ್ಲಿ ಇದ್ದರೋ ಇಲ್ಲವೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

--

ರಷ್ಯಾ ಹೇಳಿಕೆ ಕಟ್ಟುಕತೆ: ಜೆಲೆನ್ಸ್ಕಿ

ಕೀವ್: ‘ರಷ್ಯಾ ಆರೋಪಿಸಿದಂತೆ ಪುಟಿನ್‌ ಮನೆ ಮೇಲೆ ನಾವು ದಾಳಿ ಮಾಡಿಲ್ಲ. ಅದು ಪೂರ್ಣ ಕಟ್ಟುಕತೆ. ಯುದ್ಧವನ್ನು ಕೊನೆಗೊಳಿಸಲು ಅಗತ್ಯ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ’ ಎಂದಿದ್ದಾರೆ.

===

ಯುದ್ಧ ತಣಿಸಲು ಜೆಲೆನ್ಸ್ಕಿ, ಪುಟಿನ್‌ ಜತೆ ಟ್ರಂಪ್‌ ಚರ್ಚೆ

ವಾಷಿಂಗ್ಟನ್: ರಷ್ಯಾ-ಉಕ್ರೇನ್ ಯುದ್ಧ ತಣಿಸಲು ಭಾನುವಾರ ರಾತ್ರಿ ಉಕ್ರೇನ್‌ ಅಧ್ಯಕ್ಷ ಜೆಲೆನ್ಸ್ಕಿ ಜತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇರ ಮಾತುಕತೆ ನಡೆಸಿದ್ದಾರೆ. ಈ ನಡುವೆ, ಭಾನುವಾರ ಹಾಗೂ ಸೋಮವಾರ ಸತತ 2 ದಿನ ರಷ್ಯಾ ಅಧ್ಯಕ್ಷ ಪುಟಿನ್ ಜತೆ ಫೋನಲ್ಲಿ ಮಾತನಾಡಿದ್ದಾರೆ. ‘ರಷ್ಯಾ ಮತ್ತು ಉಕ್ರೇನ್‌ ದೇಶಗಳು ಶಾಂತಿ ಒಪ್ಪಂದಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಹತ್ತಿರವಾಗಿವೆ. ಉಕ್ರೇನ್‌-ರಷ್ಯಾ ಒಪ್ಪಂದ ಯುದ್ಧಕ್ಕೆ ಕೆಲ ವಾರಗಳಲ್ಲಿ ಅಂತ್ಯ ಬೀಳಲೂ ಬಹುದು’ ಎಂದು ಜೆಲೆನ್ಸ್ಕಿ ಭೇಟಿ ಬಳಿಕ ಹೇಳಿದ್ದಾರೆ.