ಶಬರಿಮಲೆ ಉಳಿದ ಚಿನ್ನ ಕೇಳಿದ್ದ ಬೆಂಗಳೂರಿನ ಆರೋಪಿ

| Published : Oct 08 2025, 01:01 AM IST

ಸಾರಾಂಶ

ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ತಾಮ್ರದ ಕವಚಗಳ ಚಿನ್ನದಲ್ಲಿ 4 ಕೆಜಿ ಕಡಿಮೆಯಾದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಮುಖ ಆರೋಪಿಯಾಗಿರುವ ಬೆಂಗಳೂರಿನ ಉನ್ನಿಕೃಷ್ಣನ್‌ ಪೊಟ್ಟಿ, ಮರುಲೇಪನದ ಬಳಿಕ ಉಳಿದ ಚಿನ್ನವನ್ನು ಹುಡುಗಿಯೊಬ್ಬಳ ಮದುವೆಗೆ ವಿನಿಯೋಗಿಸುವುದಾಗಿ ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ಪತ್ರ ಬರೆದಿದ್ದ ಎಂಬ ವಿಚಾರ ಬಹಿರಂಗವಾಗಿದೆ.

- ಬಡಹುಡುಗಿಯ ಮದುವೆಗೆ ಬೇಕೆಂದು ಕೇಳಿದ್ದ- 2919ರಲ್ಲೇ ಟಿಡಿಬಿಗೆ ಪತ್ರ ಬರೆದಿದ್ದ

- ಪ್ರಕರಣದಲ್ಲಿ ಸ್ಫೋಟಕ ವಿಷಯ ಬಹಿರಂಗ

-- ದ್ವಾರಪಾಲಕ ವಿಗ್ರಹ ಚಿನ್ನದಲ್ಲಿ 4 ಕೆಜಿ ಕಡಿತ ಪ್ರಕರಣ

ತಿರುವನಂತಪುರಂ: ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ತಾಮ್ರದ ಕವಚಗಳ ಚಿನ್ನದಲ್ಲಿ 4 ಕೆಜಿ ಕಡಿಮೆಯಾದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಮುಖ ಆರೋಪಿಯಾಗಿರುವ ಬೆಂಗಳೂರಿನ ಉನ್ನಿಕೃಷ್ಣನ್‌ ಪೊಟ್ಟಿ, ಮರುಲೇಪನದ ಬಳಿಕ ಉಳಿದ ಚಿನ್ನವನ್ನು ಹುಡುಗಿಯೊಬ್ಬಳ ಮದುವೆಗೆ ವಿನಿಯೋಗಿಸುವುದಾಗಿ ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ಪತ್ರ ಬರೆದಿದ್ದ ಎಂಬ ವಿಚಾರ ಬಹಿರಂಗವಾಗಿದೆ. 2019ರ ಡಿ.9ರಂದು ಪೊಟ್ಟಿ ಟಿಡಿಬಿಗೆ ಬರೆದ ಪತ್ರ ಕೋರ್ಟ್‌ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅದರಲ್ಲಿ, ‘ದೇಗುಲದ ಮುಖ್ಯದ್ವಾರ ಮತ್ತು ದ್ವಾರಪಾಲಕ ವಿಗ್ರಹಗಳ ಮರುಲೇಪನದ ಬಳಿಕ ನನ್ನಲ್ಲಿ ಸ್ವಲ್ಪ ಚಿನ್ನ ಉಳಿದಿದೆ. ಟಿಡಿಬಿಯ ಸಹಕಾರದೊಂದಿಗೆ, ಸಹಾಯದ ಅಗತ್ಯದಲ್ಲಿರುವ ಹುಡುಗಿಯೊಬ್ಬಳ ಮದುವೆಗೆ ಅದನ್ನು ಬಳಸಬೇಕೆಂದಿದ್ದೇನೆ. ದಯವಿಟ್ಟು ಈ ಬಗ್ಗೆ ತಮ್ಮ ಅಮೂಲ್ಯ ಅಭಿಪ್ರಾಯವನ್ನು ತಿಳಿಸಿ’ ಎಂದು ಬರೆಯಲಾಗಿದೆ. ಈ ಪತ್ರದ ಆಧಾರದ ಮೇಲೆ, 2019ರ ಡಿ.17ರಂದು ಟಿಡಿಬಿ ಕಾರ್ಯದರ್ಶಿ ಹೆಚ್ಚುವರಿ ಚಿನ್ನದ ಬಳಕೆ ಕುರಿತು ಸ್ಪಷ್ಟತೆ ಕೋರಿದ್ದರು ಎಂದು ತಿಳಿದುಬಂದಿದೆ. 2019ರಲ್ಲಿ ಪೊಟ್ಟಿ ಮರುಲೇಪನಕ್ಕಾಗಿ ಕವಚಗಳನ್ನು ಚೆನ್ನೈಗೆ ಕೊಂಡೊಯ್ದಿದ್ದ. ಆಗ 42.8 ಕೆಜಿಯಿದ್ದ ಚಿನ್ನ ಹಿಂದಿರುಗಿಸುವಾಗ 38.258 ಕೆಜಿಗೆ ಇಳಿದಿತ್ತು. ಈ ಬಗ್ಗೆ ಹೈಕೋರ್ಟ್‌ ಎಸ್‌ಐಟಿ ರಚಿಸಿ, ತನಿಖೆಗೆ ಆದೇಶಿಸಿದೆ.

--

ಚಿನ್ನಲೇಪನ ಅಕ್ರಮ: ದೇವಸ್ವಂ ಅಧಿಕಾರಿ ಸಸ್ಪೆಂಡ್‌

ತಿರುವನಂತಪುರಂ: ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಚಿನ್ನದ ಲೇಪನ ಕೆಲಸದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ತಿರುವಾಂಕೂರು ದೇವಸ್ವಂ ಮಂಡಳಿಯು ಉಪ ಆಯುಕ್ತ ಮುರಾರಿ ಬಾಬು ಅವರನ್ನು ಅಮಾನತುಗೊಳಿಸಿದೆ , ಇದು ವಿವಾದ ಭುಗಿಲೆದ್ದ ನಂತರ ಮೊದಲ ಅಧಿಕೃತ ಕಠಿಣ ಕ್ರಮವಾಗಿದೆ.

ವರದಿಗಳ ಪ್ರಕಾರ, ಮುರಾರಿ ಬಾಬು 2019 ರಲ್ಲಿ ಆಡಳಿತ ಅಧಿಕಾರಿಯಾಗಿದ್ದಾಗ, ದ್ವಾರಪಾಲಕ ಫಲಕಗಳು ಮೂಲತಃ ಚಿನ್ನದ್ದಾಗಿದ್ದರೂ, ಅವುಗಳನ್ನು ತಾಮ್ರಕ್ಕೆ ಬದಲಾಯಿಸಲು ಆದೇಶ ಹೊರಡಿಸಿದ್ದರು. ನಂತರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ, ಹೊಳಪು ನಷ್ಟವನ್ನು ಉಲ್ಲೇಖಿಸಿ, ಪುನಃ ಚಿನ್ನಲೇಪನ ಮಾಡಲು ಉನ್ನಿಕೃಷ್ಣನ್ ಪೊಟ್ಟಿ ಅವರಿಗೆ ಹಸ್ತಾಂತರಿಸುವಂತೆ ಮತ್ತೆ ನಿರ್ದೇಶನ ನೀಡಿದ್ದರು. ಎರಡೂ ನಿರ್ಧಾರಗಳು ಶಂಕಾಸ್ಪದ ಎಂದು ಟಿಡಿಬಿ ಹೇಳಿದೆ.

ಪ್ರತಿಭಟನೆ:

ಈ ನಡುವೆ, ಚಿನ್ನಲೇಪನ ಅಕ್ರಮದ ದೇವಸ್ವಂ ಕಚೇರಿ ಮುಂದೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವರ ಮೇಲೆ ಪೊಲೀಸರು ಬಲಪ್ರಯೋಗಿಸಿದರು. ಇದೇ ವೇಳೆ, ಅಸೆಂಬ್ಲಿಯಲ್ಲೂ ಅಕ್ರಮ ಖಂಡಿಸಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಪ್ರತಿಭಟಿಸಿದವು.