ಪರೋಟಾಗೆ ಮಾಡಿದ ಆನ್‌ಲೈನ್‌ ಪಾವತಿಯಿಂದ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ದಾಳಿಕೋರ ಪತ್ತೆ

| Published : Jan 21 2025, 01:32 AM IST / Updated: Jan 21 2025, 04:46 AM IST

ಸಾರಾಂಶ

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ದಾಳಿ ನಡೆಸಿದ ಬಾಂಗ್ಲಾದೇಶ ಮೂಲದ ಆರೋಪಿಯನ್ನು ಆತ ಮರುದಿನ ಬೆಳಗ್ಗೆ ಪರೋಟಾ ತಿಂದು ಮಾಡಿದ ಆನ್‌ಲೈನ್‌ ಪಾವತಿಯ ಆಧಾರದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು ಎಂಬ ಮಾಹಿತಿ ಲಭಿಸಿದೆ.

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ದಾಳಿ ನಡೆಸಿದ ಬಾಂಗ್ಲಾದೇಶ ಮೂಲದ ಆರೋಪಿಯನ್ನು ಆತ ಮರುದಿನ ಬೆಳಗ್ಗೆ ಪರೋಟಾ ತಿಂದು ಮಾಡಿದ ಆನ್‌ಲೈನ್‌ ಪಾವತಿಯ ಆಧಾರದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು ಎಂಬ ಮಾಹಿತಿ ಲಭಿಸಿದೆ.

ಕಳ್ಳತನದ ಉದ್ದೇಶದಿಂದ ಜ.16ರ ರಾತ್ರಿ 2:30ಕ್ಕೆ ಸೈಫ್‌ ಮನೆಗೆ ನುಗ್ಗಿದ್ದ ಆರೋಪಿ ಶೆಹಜಾದ್‌ ಫಕೀರ್‌, ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಬಳಿಕ ಬಸ್‌ ನಿಲ್ದಾಣದಲ್ಲಿ ಮಲಗಿ ನಿದ್ದೆ ಮಾಡಿದ್ದ. ನಂತರ ತನ್ನ ಗುರುತು ಪತ್ತೆಯಾಗದಿರಲು ಬಟ್ಟೆ ಬದಲಿಸಿದ ಅವನು, ಬಾಂದ್ರಾ ರೈಲು ನಿಲ್ದಾಣದಿಂದ ದಾದರ್‌ಗೆ ಹೋಗಿ, ಅಲ್ಲಿಂದ ವರ್ಲಿಗೆ ಹೋಗಿದ್ದ. ಅಲ್ಲಿಂದ ಥಾಣೆಗೆ ತೆರಳಿದ್ದ.

ಬಾಂದ್ರಾದ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಸೈಫ್‌ ಮನೆಯ ಸಿಸಿಟಿವಿಯಲ್ಲಿ ದಾಳಿಕೋರನ ಬಳಿ ಪತ್ತೆಯಾಗಿದ್ದ ಬ್ಯಾಗ್‌ ಕಂಡುಬಂದಿದೆ.

ಅತ್ತ ಕಾರ್ಮಿಕ ಗುತ್ತಿಗೆದಾರನೊಬ್ಬನ ಶೆಹಜಾದ್‌ನ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದು, ಅದರಲ್ಲಿ ಆತ ಆನ್‌ಲೈನ್‌ ಪಾವತಿಗಳನ್ನು ಮಾಡಿದ್ದು ಕಂಡುಬಂದಿದೆ. ಇದರ ಆಧಾರದಲ್ಲಿ ಆತನಿದ್ದ ಸ್ಥಳ ಪತ್ತೆ ಮಾಡಿ ಥಾಣೆಯಲ್ಲಿ ಬಂಧಿಸಲಾಯಿತು.