ಸಾರಾಂಶ
ಮಲಪ್ಪುರಂ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಹಾಗೂ ಬಾಬ್ರಿ ಮಸೀದಿ ನಿರ್ಮಾಣ ದೇಶದ ಜಾತ್ಯಾತೀತತೆಯನ್ನು ಬಲಪಡಿಸುತ್ತದೆ.
ಹೀಗಾಗಿ ಅವುಗಳ ವಿರುದ್ಧ ಪ್ರತಿಭಟನೆ ನಡೆಸುವ ಅಗತ್ಯವಿಲ್ಲ ಎಂದು ಕೇರಳದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸೈಯ್ಯದ್ ಸಾದಿಕ್ ಅಲಿ ಶಿಹಾಬ್ ತಂಗಲ್ ಹೇಳಿದ್ದಾರೆ.
ಆದರೆ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಭಾಗವಾಗಿರುವ ಐಯುಎಂಎಲ್ ನಾಯಕ ತಂಗಲ್ ಹೇಳಿಕೆಯನ್ನು
ಟೀಕಿಸಿರುವ ಆಡಳಿತಾರೂಢ ಸಿಪಿಐ ‘ಇದು ದ್ವೇಷ ಮತ್ತು ಸಮಾಜ ವಿಭಜನೆಯ ಹೇಳಿಕೆ’ ಎಂದಿದೆ. ಜ.24ರಂದು ಮಲಪ್ಪುರಂ ಬಳಿ ಮಂಜೇರಿ ಕಾರ್ಯಕ್ರಮದಲ್ಲಿ ಸೈಯ್ಯದ್ ನೀಡಿದ್ದ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ.
ವಿಡಿಯೋದಲ್ಲಿ ಅವರು ‘ರಾಮ ಮಂದಿರದ ವಿರುದ್ಧ ನಾವು ಪ್ರತಿಭಟಿಸುವ ಅಗತ್ಯವಿಲ್ಲ. ನ್ಯಾಯಾಲಯದ ಆದೇಶದ ಆಧಾರದ ಮೇಲೆ ಮಂದಿರವನ್ನು ನಿರ್ಮಿಸಲಾಯಿತು ಮತ್ತು ಬಾಬರಿ ಮಸೀದಿಯನ್ನು ನಿರ್ಮಿಸಲಾಗುವುದು.
ಇವೆರಡೂ ಈಗ ಭಾರತದ ಭಾಗವಾಗಿವೆ. ರಾಮಮಂದಿರ ಮತ್ತು ಪ್ರಸ್ತಾವಿತ ಬಾಬರಿ ಮಸೀದಿಯು ನಮ್ಮ ದೇಶದ ಜಾತ್ಯತೀತತೆಯನ್ನು ಬಲಪಡಿಸುವ ಎರಡು ಅತ್ಯುತ್ತಮ ಉದಾಹರಣೆಗಳಾಗಿವೆ’ ಎಂದಿದ್ದಾರೆ.