ಸಾರಾಂಶ
ಜೀವಬೆದರಿಕೆ ಎದುರಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸ ಗ್ಯಾಲಕ್ಸಿಯ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಇದರ ಭಾಗವಾಗಿ ಅವರ ಬಾಲ್ಕನಿಗೆ ಬುಲೆಟ್ ಪ್ರೂಫ್ ಗಾಜನ್ನು ಅಳವಡಿಸಲಾಗಿದ್ದು, ರಸ್ತೆಗೆ ಮುಖ ಮಾಡಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಮುಂಬೈ: ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವಬೆದರಿಕೆ ಎದುರಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸ ಗ್ಯಾಲಕ್ಸಿಯ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಇದರ ಭಾಗವಾಗಿ ಅವರ ಬಾಲ್ಕನಿಗೆ ಬುಲೆಟ್ ಪ್ರೂಫ್ ಗಾಜನ್ನು ಅಳವಡಿಸಲಾಗಿದ್ದು, ರಸ್ತೆಗೆ ಮುಖ ಮಾಡಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸಲ್ಮಾನ್ ತನ್ನ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳನ್ನು ಕಾಣುವ ವೇಳೆ ಅವರಿಗೆ ಭದ್ರತೆ ಒದಗಿಸಲು ಬುಲೆಟ್ ಪ್ರೂಫ್ ಗಾಜುಗಳು ಸಹಕಾರಿಯಾಗುತ್ತವೆ. ಅಂತೆಯೇ, ರಸ್ತೆ ಮೇಲೆ ಓಡಾಡುವವರ ಮೇಲೆ ಹೈಟೆಕ್ ಸಿಸಿಕ್ಯಾಮೆರಾಗಳು ಕಣ್ಣಿಡಲಿವೆ. ಜತೆಗೆ, ಅದರ ಸುತ್ತ ರೇಜರ್ ವೈರ್ ಬೇಲಿಯನ್ನು ಅಳಬಡಿಸಲಾಗಿದೆ. ಈ ವ್ಯವಸ್ಥೆಗಳನ್ನು ಖಾಸಗಿ ಗುತ್ತಿಗೆದಾರರು ಮಾಡಿದ್ದಾರೆ.
2024ರ ಏಪ್ರಿಲ್‌ನಲ್ಲಿ ಲಾರೆನ್ಸ್ ಗ್ಯಾಂಗ್‌ನ ಇಬ್ಬರು ಬೈಕ್‌ನಲ್ಲಿ ಬಂದು ಸಲ್ಮಾನ್ ನಿವಾಸದತ್ತ ಗುಂಡಿನ ದಾಳಿ ನಡೆಸಿದ್ದರು. ಬಳಿಕ ಜೂನ್‌ನಲ್ಲಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ನವಿ ಮುಂಬೈ ಪೊಲೀಸರು ತಿಳಿಸಿದ್ದರು.
ಬೆಂಗಳೂರು ಮೂಲದ ಸುಹಾಸ್ ಅಮೆರಿಕದ ಸಂಸದರಾಗಿ ಭಗವದ್ಗೀತೆ ಮೇಲೆ ಶಪಥ
ವಾಷಿಂಗ್ಟನ್: ಬೆಂಗಳೂರು ಮೂಲದ ಸುಹಾಸ್ ಸುಬ್ರಹ್ಮಣ್ಯಂ ಅವರು ಅಮೆರಿಕದ ಸಂಸದರಾಗಿ ಭಗವದ್ಗೀತೆಯ ಮೇಲೆ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ಅತ್ತ, ಇನ್ನೊಬ್ಬ ಸಂಸದರಾಗಿ ಪ್ರಮಾಣ ಸ್ವೀಕರಿಸಿದ ರಾಜಾ ಕೃಷ್ಣಮೂರ್ತಿ, ಈ ವೇಳೆ ಭಗವದ್ಗೀತೆಯ ಒಂದು ಭಾಗವನ್ನು ಓದಿದ್ದಾರೆ.ಈಸ್ಟ್ ಕೋಸ್ಟ್‌ನಿಂದ ಆಯ್ಕೆಯಾಗಿರುವ ಮೊದಲ ಭಾರತೀಯ ಮೂಲದವರಾಗಿರುವ ಸುಹಾಸ್, ಈ ವರ್ಷ ಗೀತೆಯ ಮೇಲೆ ಶಪಥ ಮಾಡಿರುವ ಮೊದಲಿಗರಾಗಿದ್ದಾರೆ.
ಸುಹಾಸ್‌ರ ಪ್ರಮಾಣ ಸ್ವೀಕಾರವನ್ನು ಅವರ ತಾಯಿ ನೇರವಾಗಿ ವೀಕ್ಷಿಸಿದ್ದು, ‘ವರ್ಜೀನಿಯಾದಿಂದ ಆಯ್ಕೆಯಾಗಿರುವ ಮೊದಲ ಭಾರತ ಮೂಲದ ಹಾಗೂ ದಕ್ಷಿಣ ಏಷ್ಯಾದ ನಾನು ಶಪಥ ಸ್ವೀಕರಿಸುವುದನ್ನು ನೋಡುವ ಅವಕಾಶ ನನ್ನ ಪೋಷಕರಿಗೆ ದೊರೆಯಿತು’ ಎಂದು ಸುಹಾಸ್ ಹರ್ಷಿಸಿದ್ದಾರೆ.
ನಟ ಅಜಿತ್ ಇದ್ದ ರೇಸಿಂಗ್ ಕಾರ್ ಕ್ರಾಶ್: ಪವಾಡಸದೃಶ ಪಾರು
ದುಬೈ: ತಮಿಳು ನಟ ಅಜಿತ್ (53) ರೇಸಿಂಗ್‌ಗೆ ಅಭ್ಯಾಸ ಮಾಡುತ್ತಿದ್ದ ವೇಳೆ ಅವರ ಕಾರ್ ಕ್ರಾಶ್ ಆಗಿದ್ದು, ಅವರು ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ದುಬೈನಲ್ಲಿ ನಡೆದಿದೆ.ಅಜಿತ್ ಅವರು ಸ್ವಂತ ಕಾರ್ ರೇಸಿಂಗ್ ತಂಡ ಹೊಂದಿದ್ದು, ದುಬೈನಲ್ಲಿ ನಡೆಯಲಿರುವ 1 ದಿನದ ರೇಸ್‌ಗೆ ತಂಡದ ಮೂವರೊಂದಿಗೆ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಅವರಿದ್ದ ಕಾರ್ ಗೋಡೆಗೆ ಗುದ್ದಿ ಅದರ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಯಿತು. ಬಳಿಕ ಅಜಿತ್ ಕಾರಿನ ಎಡ ಬಾಗಿಲಿನಿಂದ ಎಳ್ಳಷ್ಟೂ ಏಟಾಗದೆ ಸುರಕ್ಷಿತವಾಗಿ ಹೊರಬಂದಿದ್ದು, ಇದರ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೆನಡಾ ಪ್ರಧಾನಿ ಹುದ್ದೆ ರೇಸ್‌ನಲ್ಲಿ ಭಾರತ ಮೂಲದ ಅನಿತಾ
ನವದೆಹಲಿ: ಕೆನಡಾ ಪ್ರಧಾನಿ ಹುದ್ದೆ ಹಾಗೂ ಲಿಬರಲ್ ಪಕ್ಷದ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುತ್ತೇನೆ ಎಂದು ಜಸ್ಟಿನ್ ಟ್ರುಡೋ ಘೋಷಣೆ ಮಾಡುತ್ತಿದ್ದಂತೆಯೇ ಅವರ ಉತ್ತರಾಧಿಕಾರಿ ಯಾರಾಗಬಹುದು ಎಂಬ ಕುತೂಹಲ ಮನೆಮಾಡಿದೆ. ಈ ರೇಸ್‌ನಲ್ಲಿ ಭಾರತೀಯ ಮೂಲದ ಅನಿತಾ ಆನಂದ್ ಹೆಸರೂ ಕೇಳಿಬರುತ್ತಿದೆ.
ಪ್ರಸ್ತುತ ಕೆನಡಾದ ಸಾರಿಗೆ ಸಚಿವರಾಗಿರುವ ಅನಿತಾ, ಪಕ್ಷದ ಅಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈವರೆಗೆ ಇವರು ಸಾರ್ವಜನಿಕ ಸೇವೆ ಮತ್ತು ಸಂಗ್ರಹಣೆಯ ಮೇಲ್ವಿಚಾರಣೆ, ರಕ್ಷಣೆ ಹಾಗೂ ಟ್ರುಡೋ ಬೋರ್ಡ್ ಸೇರಿದಂತೆ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇವರ ಅವಧಿಯಲ್ಲಿ ಕೆನಡಾದಿಂದ ಭಾರತಕ್ಕೆ ತೆರಳುವವರ ಹೆಚ್ಚುವರಿ ತಪಾಸಣೆ ಸೇರಿದಂತೆ ಪ್ರಯಾಣದ ನಿಯಮಗಳನ್ನು ಬಿಗಿಗೊಳಿಸಿದ್ದರು.
ಉಳಿದಂತೆ ವಿತ್ತ ಸಚಿವರಾಗಿರುವ ಡೊಮಿನಿಕ್ ಲೆಬ್ಲಾಂಕ್, ವಿದೇಶಾಂಗ ಸಚಿವೆ ಮೆಲನಿ ಜೋಲಿ, ಬ್ಯಾಂಕ್ ಆಫ್ ಕೆನಡಾದ ಮಾಜಿ ಗವರ್ನರ್ ಮಾರ್ಕ್ ಕರ್ನಿ, ಮಾಜಿ ಉಪಪ್ರಧಾನಿ ಕ್ರಿಸ್ಟಿಯಾ ಫ್ರೀಲೆಂಡ್ ಕೂಡ ರೇಸ್‌ನಲ್ಲಿದ್ದಾರೆ.ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಸಂಬಂಧ ಭಾರತದ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದ, ಸತತ 9 ವರ್ಷಗಳ ಕಾಲ ಕೆನಡಾದ ಪ್ರಧಾನಿಯಾಗಿದ್ದ ಜಸ್ಟಿನ್ ಟ್ರುಡೋ ಸೋಮವಾರ ರಾಜೀನಾಮೆ ಘೋಷಿಸಿದ್ದರು.