ಸಾರಾಂಶ
ನವದೆಹಲಿ: ‘ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಮಾಡಲಾಗುತ್ತದೆ’ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿರುವ ನಡುವೆಯೇ, ರಾಹುಲ್ ಅತ್ಯಾಪ್ತ ಮತ್ತು ಸಾಗರೋತ್ತರ ಭಾರತೀಯ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆಯೊಂದು ಈಗ ಉರಿವ ಬೆಂಕಿಗೆ ತುಪ್ಪ ಸುರಿದಿದೆ.
‘ಅಮೆರಿಕ ರೀತಿಯಲ್ಲಿ, ವ್ಯಕ್ತಿಯೊಬ್ಬನ ಸಾವಿನ ನಂತರ ಆತನ ಶೇ.50ರಷ್ಟು ಆಸ್ತಿಯನ್ನು ಸರ್ಕಾರವೇ ವಶಪಡಿಸಿಕೊಳ್ಳುವ ಪಿತ್ರಾರ್ಜಿತ ಆಸ್ತಿ ಕಾಯ್ದೆ ಜಾರಿ ಕುರಿತು ಭಾರತದಲ್ಲೂ ಚರ್ಚೆ ನಡೆಯಬೇಕು’ ಎಂದು ಪಿತ್ರೋಡಾ ಸಲಹೆ ನೀಡಿದ್ದಾರೆ. ಸಂಪತ್ತಿನ ಹಂಚಿಕೆ ಕುರಿತ ರಾಹುಲ್ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯಾಗಿ ಹಲವು ಬಿಜೆಪಿ ನಾಯಕರು ಸರಣಿ ದಾಳಿ ನಡೆಸುತ್ತಿರುವ ಹೊತ್ತಿನಲ್ಲೇ ಪಿತ್ರೋಡಾ ನೀಡಿದ ಹೇಳಿಕೆ ಬಿಜೆಪಿಗೆ ಹೊಸ ಅಸ್ತ್ರ ನೀಡಿದಂತಾಗಿದೆ.
ಪಿತ್ರೋಡಾ ಹೇಳಿದ್ದೇನು?: ಬುಧವಾರ ಸುದ್ದಿಸಂಸ್ಥೆಯೊಂದರ ಜೊತೆಗೆ ಮಾತನಾಡಿದ ಸ್ಯಾಮ್ ಪಿತ್ರೋಡಾ, ‘ಅಮೆರಿಕದಲ್ಲಿ ಉತ್ತರಾಧಿಕಾರ ಕಾಯ್ದೆ ಇದೆ. ಇದರನ್ವಯ ವ್ಯಕ್ತಿಯೊಬ್ಬ 10 ಕೋಟಿ ಡಾಲರ್ ಆಸ್ತಿ ಹೊಂದಿದ್ದರೆ, ಆತನ ಸಾವಿನ ಬಳಿಕ ಆತನ ಆಸ್ತಿಯಲ್ಲಿ ಶೇ.45ರಷ್ಟು ಮಾತ್ರವೇ ಮಕ್ಕಳಿಗೆ ವರ್ಗಾವಣೆ ಆಗುತ್ತದೆ. ಉಳಿದ ಶೇ.55ರಷ್ಟು ಸರ್ಕಾರದ ವಶಕ್ಕೆ ಹೋಗುತ್ತದೆ.
ಇದು ಕುತೂಹಲಕಾರಿ ಕಾನೂನು. ಅದು ಹೇಳುವುದೇನೆಂದರೆ, ನೀವು ಒಂದಿಷ್ಟು ಹಣ ಸಂಪಾದಿಸಿದ್ದೀರಿ; ನಿಮ್ಮ ನಿಧನದ ಬಳಿಕ ಈ ಪೈಕಿ ಒಂದಷ್ಟು ಹಣವನ್ನು ಸಮಾಜಕ್ಕೆ ಕೊಡಬೇಕು, ಎಲ್ಲವನ್ನೂ ನಿಮಗೆ ಇಟ್ಟುಕೊಳ್ಳುವುದಲ್ಲ’ ಎನ್ನುತ್ತದೆ. ನನಗೂ ಅದು ಸಾಕಷ್ಟು ನ್ಯಾಯಸಮ್ಮತ ಎನ್ನಿಸುತ್ತದೆ’ ಎಂದರು.‘ಆದರೆ ಭಾರತದಲ್ಲಿ ಇಂಥ ಕಾಯ್ದೆ ಇಲ್ಲ. ಭಾರತದಲ್ಲಿ ವ್ಯಕ್ತಿಯೊಬ್ಬ100 ಕೋಟಿ ಸಂಪತ್ತು ಹೊಂದಿದ್ದಾನೆ ಎಂದಾದಲ್ಲಿ ಆತನ ಸಾವಿನ ಬಳಿಕ ಪೂರ್ತಿ ಸಂಪತ್ತು ಆತನ ಮಕ್ಕಳಿಗೆ ಹೋಗುತ್ತದೆ. ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ. ಈ ವಿಷಯದ ಬಗ್ಗೆ ಭಾರತದಲ್ಲೂ ಚರ್ಚೆ, ಸಂವಾದ ನಡೆಯುಬೇಕು’ ಎಂದು ಪಿತ್ರೋಡಾ ಹೇಳಿದರು.