ಸಲಿಂಗ ವಿವಾಹ ಅಮಾನ್ಯ ಪ್ರಶ್ನಿಸಿದ್ದ ಅರ್ಜಿ ವಜಾ

| Published : Jan 10 2025, 12:46 AM IST

ಸಾರಾಂಶ

ನವದೆಹಲಿ: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನಿರಾಕರಿಸಿದ್ದ ತನ್ನ ಮಹತ್ವದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಗಳನ್ನುಸುಪ್ರೀಂ ಕೋರ್ಟ್ ವಜಾ ಮಾಡಿದೆ.

ನವದೆಹಲಿ: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನಿರಾಕರಿಸಿದ್ದ ತನ್ನ ಮಹತ್ವದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಗಳನ್ನುಸುಪ್ರೀಂ ಕೋರ್ಟ್ ವಜಾ ಮಾಡಿದೆ.

ಈ ಹಿಂದೆ ನೀಡಿದ ತೀರ್ಪಿನಲ್ಲಿ, ಸಲಿಂಗ ಮದುವೆಗೆ ಕಾನೂನಾತ್ಮಕವಾಗಿ ಅನುಮತಿ ನೀಡಲು ಯಾವುದೇ ಸಾಂವಿಧಾನಿಕ ಆಧಾರವಿಲ್ಲ ಎಂದು ಉನ್ನತ ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು. ಇದನ್ನು ಪ್ರಶ್ನಿಸಿ ಸಲಿಂಗ ಕಾರ್ಯಕರ್ತರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಇದನ್ನು ವಜಾ ಮಾಡಿರುವ ಕೋರ್ಟ್‌, ‘ನನ್ನ ಹಿಂದಿನ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ. ಮೂಲ ತೀರ್ಪಿನಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳು ಕಾನೂನಿಗೆ ಅನುಗುಣವಾಗಿವೆ ಮತ್ತು ಹೆಚ್ಚಿನ ಹಸ್ತಕ್ಷೇಪ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಉಗ್ರ ನಿಜ್ಜರ್ ಹತ್ಯೆ: 4 ಭಾರತೀಯರಿಗೆ ಜಾಮೀನು

ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಬಂಧಿತ ನಾಲ್ವರು ಭಾರತೀಯ ಪ್ರಜೆಗಳಿಗೆ ಕೆನಡಾ ನ್ಯಾಯಾಲಯವು ಜಾಮೀನು ನೀಡಿದೆ. ಪೊಲೀಸರು ಸಾಕ್ಷ್ಯ ನೀಡಲು ವಿಫಲ ಆದ ಕಾರಣ ಜಾಮೀನು ಲಭಿಸಿದೆ.ಕಳೆದ ವರ್ಷ ಖಲಿಸ್ತಾನಿ ಪರ ಉಗ್ರ ಹರ್ದೀಪ್‌ ನಿಜ್ಜರ್‌ನನ್ನು ಕೆನಡಾದ ಸರ್‍ರೆಯಲ್ಲಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧಭಾರತೀಯ ಮೂಲದ ಕರಣ್‌ ಬ್ರಾರ್‌, ಅಮನ್‌ದೀಪ್‌ ಸಿಂಗ್‌, ಕಮಲ್‌ಪ್ರೀತ್‌ ಸಿಂಗ್‌ ಮತ್ತು ಕರಣ್‌ಪ್ರೀತ್‌ ಸಿಂಗ್‌ ಅವರನ್ನು ಬಂಧಿಸಲಾಗಿತ್ತು. ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್‌ ಟ್ರುಡೋ ನೇರ ಆರೋಪ ಮಾಡಿದ್ದರು. ಇದನ್ನು ಭಾರತ ನಿರಾಕರಿಸಿತ್ತು. ಆದರೂ ಕೆನಾಡ ಪ್ರಧಾನಿ ಅವರ ಬಹಿರಂಗ ಹೇಳಿಕೆಗಳ ಬಳಿಕ ಈ ಪ್ರಕರಣ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಆರೋಪಿಗಳ ವಿರುದ್ಧ ಪ್ರಾಥಮಿಕ ವಿಚಾರಣೆ ವೇಳೆ ಸಾಕ್ಷ್ಯಗಳನ್ನು ನೀಡದಿದ್ದುದು ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ನಾಲ್ವರು ಆರೋಪಿಗಳಿಗೆ ಜಾಮೀನು ನೀಡಿರುವ ಕೋರ್ಟ್‌, ಮುಂದಿನ ವಿಚಾರಣೆ ಬ್ರಿಟಿಷ್‌ ಕೊಲಂಬಿಯಾ ಸುಪ್ರೀಂ ಕೋರ್ಟ್‌ನಲ್ಲಿ ಫೆ.11ರಂದು ನಡೆಯಲಿದೆ ಎಂದು ತಿಳಿಸಿದೆ.

ಛತ್ತೀಸಗಢದಲ್ಲಿ ಎನ್‌ಕೌಂಟರ್‌: 3 ನಕ್ಸಲರ ಹತ್ಯೆ

ರಾಯ್ಪುರ/ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ನಕ್ಸಲರ ಎನ್‌ಕೌಂಟರ್‌ ನಡೆದಿದೆ. ಈ ಮೂಲಕ ಛತ್ತೀಸಗಢದಲ್ಲಿ ಈ ವರ್ಷ ಬಲಿಯಾದ ನಕ್ಸಲರ ಸಂಖ್ಯೆ 9ಕ್ಕೇರಿಕೆಯಾಗಿದೆ.ಬಿಜಾಪುರ ಜಿಲ್ಲೆಯಲ್ಲಿ ಜ.6ರಂದು ನಕ್ಸಲರು ಐಇಡಿ ಸ್ಪೋಟಿಸಿ 8 ಸಿಬ್ಬಂದಿ ಸೇರಿ 9 ಜನರ ಸಾವಿಗೆ ಕಾರಣವಾದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಗುರುವಾರ ಬೆಳಗ್ಗೆ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಈ ಎನ್‌ಕೌಂಟರ್‌ ನಡೆದಿದೆ. ಆಗ 3 ನಕ್ಸಲರ ಹತ್ಯೆ ಆಗಿದೆ ಹಾಗೂ ಕಾರ್ಯಾಚರಣೆ ಮುಂದುವರಿದಿದೆ.

ಈ ಬಗ್ಗೆ ಡಿಸಿಎಂ ವಿಜಯ್ ಶರ್ಮಾ ಮಾಹಿತಿ ನೀಡಿದ್ದು, ‘ಸುಕ್ಮಾದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ’ ಎಂದಿದ್ದಾರೆ.