ಸಾರಾಂಶ
ಪ.ಬಂಗಾಳದ ಸಂದೇಶ್‌ಖಾಲಿಯಲ್ಲಿ ಆಡಳಿತಾರೂಢ ಟಿಎಂಸಿ ನಾಯಕ ಶಾಜಹಾನ್ ಶೇಖ್ ಹಾಗೂ ಆತನ ಚೇಲಾಗಳು ಅಲ್ಲಿನ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅವರ ಭೂಮಿ ಕಬಳಿಸಿದ್ದರು ಎಂಬ ವಿಷಯದ ಬಗ್ಗೆ ಟೀವಿ ಸ್ಟಿಂಗ್ ಆಪರೇಶನ್ ಒಂದನ್ನು ಯೂಟ್ಯೂಬ್ ಚಾನೆಲ್ ಪ್ರಸಾರ ಮಾಡಿದೆ.
ಕೋಲ್ಕತಾ: ಪ.ಬಂಗಾಳದ ಸಂದೇಶ್‌ಖಾಲಿಯಲ್ಲಿ ಆಡಳಿತಾರೂಢ ಟಿಎಂಸಿ ನಾಯಕ ಶಾಜಹಾನ್ ಶೇಖ್ ಹಾಗೂ ಆತನ ಚೇಲಾಗಳು ಅಲ್ಲಿನ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅವರ ಭೂಮಿ ಕಬಳಿಸಿದ್ದರು ಎಂಬ ವಿಷಯದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿರುವಾಗಲೇ, ‘ಈ ಆರೋಪಗಳೆಲ್ಲ ಬಿಜೆಪಿ ಕೃಪಾಪೋಷಿತ’ ಎಂದು ಆರೋಪಿಸುವ ಟೀವಿ ಸ್ಟಿಂಗ್ ಆಪರೇಶನ್ ಒಂದನ್ನು ಯೂಟ್ಯೂಬ್ ಚಾನೆಲ್ ಒಂದು ಪ್ರಸಾರ ಮಾಡಿದೆ.
32 ನಿಮಿಷಗಳ ಸ್ಟಿಂಗ್ ಇದಾಗಿದೆ. ಗಂಗಾಧರ್ ಕೋಯಲ್ ಎಂಬ ಸಂದೇಶಖಾಲಿ ಬ್ಲಾಕ್-2ರ ಬಿಜೆಪಿ ಮಂಡಲ ಮುಖ್ಯಸ್ಥ ವಿಡಿಯೋದದಲ್ಲಿ ಕಾಣಿಸಿಕೊಂಡಿದ್ದಾನೆ. ‘ಸಂದೇಶ ಖಾಲಿಯಲ್ಲಿ ಮಹಿಳೆಯರ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ. ಆದರೆ ಹಾಗಂತ ಬಿಂಬಿಸಲಾಗಿದೆ. ಈ ಸಂಪೂರ್ಣ ಕೆಲಸವನ್ನು ಬಿಜೆಪಿಯ (ಬಂಗಾಳ ವಿಧಾನಸಭೆ ವಿಪಕ್ಷ ನಾಯಕ) ಸುವೆಂದು ಅಧಿಕಾರಿ ಮಾಡಿದ್ದಾರೆ’ ಎಂದು ಹೇಳಿಕೊಂಡಿದ್ದಾನೆ.
‘ಅವರ (ಸುವೇಂದು ಅವರ) ಪಿಎ ಸ್ಥಳಕ್ಕೆ ಭೇಟಿ ನೀಡಿದ್ದರು .ಹೊರಗಿನಿಂದ ಬಂದ ದಾದಾ (ಪಿಎ) ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಅವರು ಮಹಿಳೆಯರಿಗೆ (ಅತ್ಯಾಚಾರದ ದೂರು ನೀಡುವಂತೆ) ಮನವರಿಕೆ ಮಾಡಿದರು’ ಎಂದೆಲ್ಲ ಕೋಯಲ್ ಹೇಳಿದ್ದಾನೆ.
ಮಮತಾ ಆಕ್ರೋಶ- ಬಿಜೆಪಿ ನಕಾರ:
ಇದರ ಬೆನ್ನಲ್ಲೇ ಟಿಎಂಸಿ ನಾಯಕಿ ಹಾಗೂ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಮೇಲೆ ಸಿಡಿದೆದ್ದಿದ್ದು, ‘ಸಂದೇಶಖಾಲಿ ಘಟನೆಯನ್ನು ಟಿಎಂಸಿ ಹೆಸರು ಹಾಳು ಮಾಡಲು ಬಿಜೆಪಿ ಸೃಷ್ಟಿಸಿದ್ದ ಕುತಂತ್ರ ಹಾಗೂ ಪೂರ್ವಯೋಜಿತ ಕೃತ್ಯ ಎಂದು ಸಾಬೀತಾಗಿದೆ. ಮೊದಲಿಂದಲೂ ಇದನ್ನೇ ನಾನು ಹೇಳುತ್ತ ಬಂದಿದ್ದೆ’ ಎಂದಿದ್ದಾರೆ.
ಆದರೆ ಬಿಜೆಪಿ ನಾಯಕ ರಾಹುಲ್ ಸಿನ್ಹಾ ಇದನ್ನು ತಿರಸ್ಕರಿಸಿದ್ದು, ‘ಸ್ಟಿಂಗ್‌ನಲ್ಲಿ ಮಾತನಾಡುವ ವ್ಯಕ್ತಿ ಬಿಜೆಪಿಯವನಲ್ಲ. ಆತ ಟಿಎಂಸಿ ಕಾರ್ಯಕರ್ತ. ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಲು ವಿಡಿಯೋ ಸೃಷ್ಟಿಸಲಾಗಿದೆ’ ಎಂದು ಕಿಡಿಕಾರಿದ್ದಾರೆ.