ಸಾರಾಂಶ
ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣ ಐಐಟಿ ಧನಬಾದ್‌ನಲ್ಲಿ ಸೀಟು ಕಳೆದುಕೊಂಡಿದ್ದ ದಲಿತ ವಿದ್ಯಾರ್ಥಿಗೆ ಸುಪ್ರೀಂ ಕೋರ್ಟ್ ಮರು ಪ್ರವೇಶ ನೀಡುವಂತೆ ಆದೇಶಿಸಿದೆ. ಸಂವಿಧಾನದ 142ನೇ ವಿಧಿಯನ್ವಯ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ನವದೆಹಲಿ: ನಿಗದಿತ ಅವಧಿಯೊಳಗೆ ಪ್ರವೇಶ ಶುಲ್ಕ ಪಾವತಿಸಲು ಆಗದ ಕಾರಣ ಐಐಟಿ ಧನಬಾದ್‌ನಲ್ಲಿ ಸೀಟು ಕಳೆದುಕೊಂಡಿದ್ದ ದಲಿತ ಯುವಕನಿಗೆ ಮರಳಿ ಸೀಟು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಂವಿಧಾನದ 142 ವಿಧಿ ಅಡಿ ಸುಪ್ರೀಂ ಕೋರ್ಟಿಗಿರುವ ವಿಶೇಷ ಶಕ್ತಿ ಬಳಸಿ ಈ ಆದೇಶ ಹೊರಡಿಸಿದೆ.
ಅತುಲ್ ಕುಮಾರ್ ಎಂಬ ವಿದ್ಯಾರ್ಥಿ ಜಾರ್ಖಂಡ್‌ನಲ್ಲಿನ ಐಐಟಿ ಧನ್‌ಬಾದ್‌ನಲ್ಲಿ ಪ್ರವೇಶ ಪಡೆಯಲು ಎಲ್ಲಾ ಪರೀಕ್ಷೆ ಎದುರಿಸಿದ್ದ. ಆದರೆ ಕೊನೆಯ ದಿನದ ಒಳಗೆ ಶುಲ್ಕ ಪಾವತಿ ಮಾಡಲು ಆಗಿರಲಿಲ್ಲ. ಹೀಗಾಗಿ ಇವರ ಪ್ರವೇಶವನ್ನು ಐಐಟಿ ನಿರಾಕರಿಸಿತ್ತು.
ಇದನ್ನು ವಿರೋಧಿಸಿ ಅತುಲ್ ಕುಟುಂಬವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಪೀಠ, ಶುಲ್ಕ ಕಾರಣ ಇಂಥ ಪ್ರತಿಭಾವಂತ ವಿದ್ಯಾರ್ಥಿ ಹೊರಹೋಗಲು ನಾವು ಬಿಡಬಾರದು. ಅವಕಾಶದಿಂದ ವಂಚಿತನಾಗಲು ಅನುವು ಮಾಡಿಕೊಡಬಾರದು. ಹೀಗಾಗಿ ಸಂವಿಧಾನದ 142ರ ವಿಶೇಷ ಅಧಿಕಾರದ ಅಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಐಐಟಿ ಧನಬಾದ್‌ಗೆ ಆದೇಶ ಹೊರಡಿಸಲಾಗುವುದು ಎಂದು ಹೇಳಿತು.