ವಾರದಲ್ಲಿ ಬಹಿರಂಗ ಕ್ಷಮೆ: ರಾಮದೇವ್‌, ಬಾಲಕೃಷ್ಣಗೆ ಸುಪ್ರೀಂ ಆದೇಶ

| Published : Apr 17 2024, 01:15 AM IST

ವಾರದಲ್ಲಿ ಬಹಿರಂಗ ಕ್ಷಮೆ: ರಾಮದೇವ್‌, ಬಾಲಕೃಷ್ಣಗೆ ಸುಪ್ರೀಂ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಅಲೋಪತಿ ಚಿಕಿತ್ಸಾ ಪದ್ಧತಿಯನ್ನು ನಿಕೃಷ್ಟವಾಗಿ ಕಾಣುವ ಹಾಗೂ ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸಾರ್ವಜನಿಕ ಕ್ಷಮೆ ಯಾಚಿಸಲು ಯೋಗ ಗುರು ಬಾಬಾ ರಾಮದೇವ್‌ ಮತ್ತು ಅವರ ಆಪ್ತರಾದ ಪತಂಜಲಿ ಆಯುರ್ವೇದ್ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಂದು ವಾರ ಕಾಲಾವಕಾಶ ನೀಡಿದೆ

ಪಿಟಿಐ ನವದೆಹಲಿ

ತಮ್ಮ ಆಯುರ್ವೇದ ಉತ್ಪನ್ನಗಳನ್ನು ವೈಭವೀಕರಿಸಿ ಅಲೋಪತಿ ಚಿಕಿತ್ಸಾ ಪದ್ಧತಿಯನ್ನು ನಿಕೃಷ್ಟವಾಗಿ ಕಾಣುವ ಹಾಗೂ ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸಾರ್ವಜನಿಕ ಕ್ಷಮೆ ಯಾಚಿಸಲು ಯೋಗ ಗುರು ಬಾಬಾ ರಾಮದೇವ್‌ ಮತ್ತು ಅವರ ಆಪ್ತರಾದ ಪತಂಜಲಿ ಆಯುರ್ವೇದ್ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಂದು ವಾರ ಕಾಲಾವಕಾಶ ನೀಡಿದೆ. ಹಾಗಂತ ಈ ಪ್ರಕರಣದಿಂದ ‘ಇಕ್ಕಳ’ದಿಂದ ನೀವು ಇನ್ನೂ ಹೊರಬಂದಂತಲ್ಲ ಎಂದು ಎಚ್ಚರಿಸಿದೆ.

ರಾಮ್‌ದೇವ್ ಮತ್ತು ಬಾಲಕೃಷ್ಣ ಇಬ್ಬರೂ ವಿಚಾರಣೆಯ ವೇಳೆ ಹಾಜರಾಗಿದ್ದರು ಮತ್ತು ವೈಯಕ್ತಿಕವಾಗಿ ಸುಪ್ರೀಂ ಕೋರ್ಟ್‌ಗೆ ಕ್ಷಮೆಯಾಚಿಸಿದರು.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಅವರ ಕ್ಷಮೆಯಾಚನೆಯನ್ನು ಗಮನಿಸಿತು. ಆದರೆ ಈ ಹಂತದಲ್ಲಿ ‘ನಿಮ್ಮನ್ನು ಪ್ರಕರಣದ ‘ಇಕ್ಕಳದಿಂದ’ ಹೊರಬಿಡಲು ನಾವು ಇನ್ನೂ ನಿರ್ಧರಿಸಿಲ್ಲ. (ಪ್ರಕರಣದಿಂದ ಸಂಪೂರ್ಣ ವಿಮುಕ್ತಿ ನೀಡಿಲ್ಲ) ಎಂದು ಸ್ಪಷ್ಟಪಡಿಸಿತು ಹಾಗೂ ಏ.23ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತು.

ಇದೇ ವೇಳೆ ರಾಮದೇವ್‌ ಅವರ ಕಾರ್ಯವನ್ನು (ಆಯುರ್ವೇದಕ್ಕೆ ಸಂಬಂಧಿಸಿದಂತೆ) ಶ್ಲಾಘಿಸಿದ ಪೀಠ, ‘ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ ಆದರೆ ನೀವು ಅಲೋಪತಿಯನ್ನು ನಿಕೃಷ್ಟವಾಗಿ ಕಾಣಬಾರದು’ ಎಂದಿತು.

ಆಗ ಉತ್ತರಿಸಿದ ರಾಮದೇವ್, ನ್ಯಾಯಾಲಯಕ್ಕೆ ಯಾವುದೇ ರೀತಿಯಲ್ಲಿ ಅಗೌರವ ತೋರಿಸುವ ಉದ್ದೇಶವಿಲ್ಲ ಎಂದು ಹೇಳಿದರು.ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪೀಠ, ‘ನೀವು (ಪತಂಜಲಿ) ಅಷ್ಟು ಮುಗ್ಧರಲ್ಲ, ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ಹಿಂದಿನ ಆದೇಶಗಳಲ್ಲಿ ಏನು ಹೇಳಿದೆ ಎಂದು ಎಂಬುದು ನಿಮಗೆ ತಿಳಿದಿಲ್ಲ’ ಎಂದು ಆಚಾರ್ಯ ಬಾಲಕೃಷ್ಣ ಅವರಿಗೆ ಚಾಟಿ ಬೀಸಿತು.

ಈ ವೇಖೆ, ‘ನಾನು (ನಮ್ಮ ಕಕ್ಷಿದಾರರು) ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸಿದ್ಧನಿದ್ದೇನೆ’ ಎಂದು ರಾಮದೇವ್ ಮತ್ತು ಬಾಲಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಪೀಠಕ್ಕೆ ತಿಳಿಸಿದರು.ಆಗ ಪೀಠವು, ‘ನೀವು ಪೀಠದೊಂದಿಗೆ ಸಂವಾದಕ್ಕೆ ಮುಂದಾಗಬೇಕು. ನೀವು ನ್ಯಾಯಾಲಯದೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂದು ಭಾವಿಸಬೇಕು’ ಎಂದು ನ್ಯಾಯಾಲಯದಲ್ಲಿ ಹಾಜರಿದ್ದ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಹೇಳಿದ ಪೀಠ, 1 ವಾರದಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಸೂಚಿಸಿ ಏ.23ಕ್ಕೆ ಮುಂದೂಡಿತು.

ಏನಿದು ಪ್ರಕರಣ?:

ಕೋವಿಡ್‌ ತಾರಕಕ್ಕೇರಿದ ವೇಳೆ ತನ್ನ ಪತಂಜಲಿ ಆಯುರ್ವೇದ ಉತ್ಪನ್ನಗಳಿಂದ ಕೊರೋನಾ ಮಾಯವಾಗುತ್ತದೆ ಎಂದು ಹೇಳಿದ್ದ ರಾಮದೇವ್‌ ಕೆಲವು ಔಷಧ ಬಿಡುಗಡೆ ಮಾಡಿದ್ದರು. ಈ ವೇಳೆ ಅಲೋಪತಿ ಚಿಕಿತ್ಸಾ ಪದ್ಧತಿಯು ರೋಗ ರುಜಿನಗಳಿಗೆ ರಾಮಬಾಣ ಅಲ್ಲ ಎಂದು ಛೇಡಿಸಿದ್ದರು. ಅಲ್ಲದೆ, ತಮ್ಮ ಆಯುರ್ವೇದ ಉತ್ಪನ್ನಗಳನ್ನು ಹೊಗಳಿ ಅಲೋಪತಿಯನ್ನು ನಿಕೃಷ್ಟವಾಗಿ ಕಾಣುವಂಥ ಪತಂಜಲಿ ಆಯುರ್ವೇದ ಜಾಹೀರಾತುಗಳನ್ನು ಪ್ರಕಟಿಸಿದ್ದರು. ಇದರ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಈ ನಡುವೆ, ರಾಮದೇವ್‌ ಹಾಗೂ ಬಾಲಕೃಷ್ಣ ಸುಪ್ರೀಂ ಕೋರ್ಟ್‌ ಮುಂದೆ ‘ಬೇಷರತ್ ಕ್ಷಮೆಯಾಚನೆ’ ಅಫಿಡವಿಟ್‌ ಸಲ್ಲಿಸಿದ್ದರು. ಆದರೆ ಆ ಬಳಿಕವೂ ಅಲೋಪತಿಯನ್ನು ಅವಹೇಳನ ಮಾಡುವ ಪತಂಜಲಿ ಜಾಹೀರಾತುಗಳು ಮುಂದುವರಿದ ಆರೋಪ ಕೇಳಿಬಂದಿದ್ದವು. ಹೀಗಾಗಿ ನಿರ್ದಿಷ್ಟ ಭರವಸೆಯನ್ನು ಪಾಲಿಸದಿರುವುದು ಮತ್ತು ನಂತರ ಮಾಧ್ಯಮಗಳ ಮುಂದಿನ ಬಾಬಾ ಹೇಳಿಕೆಗಳು ಸುಪ್ರೀಂ ಕೋರ್ಟ್ ಅನ್ನು ಕೆರಳಿಸಿದ್ದವು. ಹೀಗಾಗಿ ಅವರಿಗೆ ನಿಂದನಾ ನೋಟಿಸ್ ನೀಡಿತ್ತು.