ಸಾರಾಂಶ
ನವದೆಹಲಿ : ಅಂಗವಿಕಲರನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ವಿವಾದಿತ ‘ಇಂಡಿಯಾಸ್ ಗಾಟ್ ಲೇಟೆಂಟ್’ ಕಾರ್ಯಕ್ರಮದ ಆಯೋಜಕ ಹಾಗೂ ಯೂಟ್ಯೂಬರ್ ಸಮಯ್ ರೈನಾ ಸೇರಿದಂತೆ ಐವರು ಸಾಮಾಜಿಕ ಜಾಲತಾಣ ಪ್ರಭಾವಿಗಳಿಗೆ ಪಾಡ್‌ಕಾಸ್ಟ್ ಅಥವಾ ಶೋ ಮೂಲಕ ಬಹಿರಂಗವಾಗಿ ಕ್ಷಮೆ ಕೋರುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ಅಂಗವಿಕಲರು ಮತ್ತು ಎಸ್‌ಎಂಎ ಕಾಯಿಲೆಯಿಂದ ಬಳಲುತ್ತಿರುವವರನ್ನು ಈ ಐವರು ಗೇಲಿ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್‌ಮಲ್ಯ ಬಾಗ್ಚಿ ಅವರ ಪೀಠ, ‘ಇತರ ಸಮುದಾಯಗಳ ಭಾವನೆಗಳಿಗೆ ನೋವುಂಟುಮಾಡುವ ವಾಣಿಜ್ಯಾತ್ಮಕ ಭಾಷಣಕ್ಕೆ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅನ್ವಯಿಸುವುದಿಲ್ಲ.
ಇವರು ತಮ್ಮ ಪಾಡ್‌ಕಾಸ್ಟ್ ಅಥವಾ ಶೋ ಮೂಲಕ ಅಂಗವಿಕಲರ ಕ್ಷಮೆಯಾಚಿಸಬೇಕು’ ಎಂದು ಸೂಚಿಸಿತು. ಇದೇ ವೇಳೆ, ಅಂಗವಿಕಲರು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಅಪಹಾಸ್ಯ ಮಾಡುವ ಭಾಷಣಗಳನ್ನು ತಡೆಯಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.