ಸಾರಾಂಶ
ನವದೆಹಲಿ: ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾದ 2 ತಿಂಗಳ ಒಳಗಾಗಿ ಅವುಗಳನ್ನು ಇತ್ಯರ್ಥ ಮಾಡಿ ಎಂದು ಸುಪ್ರೀಂಕೋರ್ಟ್ ಎಲ್ಲಾ ಹೈಕೋರ್ಟ್‌ಗಳಿಗೆ ಶುಕ್ರವಾರ ಸೂಚಿಸಿದೆ.
‘ಬೇಲ್‌ನಂತಹ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವರ್ಷಗಳ ಕಾಲ ಕಾಯ್ದಿರಿಸುವುದು ಸರಿಯಲ್ಲ. ಇದು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ವಿರುದ್ಧವಾಗಿದೆ ಮತ್ತು 14 ಮತ್ತು 21ನೇ ವಿಧಿಯಡಿ ಕೊಡಲಾಗುವ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ.
ಹಾಗಾಗಿ ಎಲ್ಲಾ ಹೈಕೋರ್ಟ್‌ಗಳು ತಮ್ಮ ವ್ಯಾಪ್ತಿಗೆ ಒಳಪಡುವ ನಿರೀಕ್ಷಣಾ ಮತ್ತು ಸಾಮಾನ್ಯ ಜಾಮೀನುಗಳಿಗೆ ಸಂಬಂಧಿಸಿದಂತೆ 2 ತಿಂಗಳ ಒಳಗೆ ತೀರ್ಪು ನೀಡಬೇಕು’ ಎಂದು ನ್ಯಾ। ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠ ಹೇಳಿದೆ. ಜತೆಗೆ ಅರ್ಜಿದಾರರಿಂದಲೇ ಜಾಮೀನು ಪ್ರಕ್ರಿಯೆಯಲ್ಲಿ ವಿಳಂಬವಾದರೆ ಇದು ಅನ್ವಯಿಸುವುದಿಲ್ಲ ಎಂದೂ ಹೇಳಿದೆ. ವಂಚನೆ ಮತ್ತು ನಕಲಿ ದಾಖಲೆ ಪ್ರಕರಣದ ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧದ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಹೀಗೆ ಹೇಳಿದೆ.