ಮೋದಿ ಸರ್ಕಾರ ಜಾರಿಗೆ ತಂದಿದ್ದ ‘ಅನಾಮಧೇಯ ಚುನಾವಣಾ ಬಾಂಡ್‌’ಗಳ ಯೋಜನೆ ರದ್ದು ಸರಿ: ಸುಪ್ರೀಂ ಕೋರ್ಟ್‌

| Published : Oct 06 2024, 01:16 AM IST / Updated: Oct 06 2024, 08:57 AM IST

ಸಾರಾಂಶ

‘ಅನಾಮಧೇಯ ಚುನಾವಣಾ ಬಾಂಡ್‌’ಗಳ ಯೋಜನೆಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸಲಾಗಿದೆ.  

 ನವದೆಹಲಿ : ಮೋದಿ ಸರ್ಕಾರ ಜಾರಿಗೆ ತಂದಿದ್ದ ‘ಅನಾಮಧೇಯ ಚುನಾವಣಾ ಬಾಂಡ್‌’ಗಳ ಯೋಜನೆಯನ್ನು ರದ್ದುಗೊಳಿಸಿದ ಫೆ.15ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್ ಮತ್ತು ನ್ಯಾ। ಸಂಜೀವ್ ಖನ್ನಾ, ನ್ಯಾ। ಬಿ.ಆರ್. ಗವಾಯಿ, ನ್ಯಾ। ಜೆ.ಬಿ. ಪರ್ದಿವಾಲಾ ಮತ್ತು ನ್ಯಾ। ಮನೋಜ್ ಮಿಶ್ರಾ ಅವರ ಪೀಠವು, ತೀರ್ಪಿನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹೇಳಿದ್ದು, ಮರುಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ಪಟ್ಟಿ ಮಾಡುವಂತೆ ಸಲ್ಲಿಸಿದ್ದ ಕೋರಿಕೆಯನ್ನೂ ತಿರಸ್ಕರಿಸಿದೆ. ಸೆ.25ರಂದೇ ಈ ಆದೇಶ ಆಗಿದ್ದು, ಆದೇಶವನ್ನು ಶನಿವಾರ ಅಪ್‌ಲೋಡ್ ಮಾಡಲಾಗಿದೆ.

2018ರಲ್ಲಿ ಜಾರಿಗೆ ತರಲಾಗಿದ್ದ ಚುನಾವಣಾ ಬಾಂಡ್ ಯೋಜನೆಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಹಕ್ಕು ಉಲ್ಲಂಘಿಸುತ್ತದೆ ಎಂದಿದ್ದ ನ್ಯಾ। ಚಂದ್ರಚೂಡ್ ನೇತೃತ್ವದ ಪಂಚಸದಸ್ಯ ಸಂವಿಧಾನ ಪೀಠ, ಫೆ.15ರಂದು ಅದನ್ನು ರದ್ದುಗೊಳಿಸಿತ್ತು.

ಚುನಾವಣಾ ಬಾಂಡ್‌ ಅನ್ನು ದೇಣಿಗೆದಾರರು ಖರೀದಿಸಿ ತಮಗೆ ಇಷ್ಟವಾದ ಪಕ್ಷಗಳಿಗೆ ದೇಣಿಗೆ ನೀಡಬಹುದಿತ್ತು. ಆದರೆ ನಿಯಮದ ಪ್ರಕಾರ ದೇಣಿಗೆದಾರರ ಹೆಸರನ್ನು ಬಹಿರಂಗ ಮಾಡುವಂತಿರಲಿಲ್ಲ. ಹೀಗಾಗಿ ಇದು ‘ಕಪ್ಪು ಹಣವನ್ನು ರಹಸ್ಯವಾಗಿ ಬಿಳಿ ಮಾಡಿಕೊಳ್ಳುವ ಯೋಜನೆ’ ಎಂದು ಕೆಲವು ಪ್ರತಿಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಈ ವಾದವನ್ನು ಕೋರ್ಟ್‌ ಮನ್ನಿಸಿತ್ತು.