ಸಾರಾಂಶ
ನವದೆಹಲಿ: ಜೈಲು ಪಾಲಾಗಿರುವ ಉದ್ಯಮಿ ನರೇಶ್ ಗೋಯಲ್ ಒಡೆತನದ ಜೆಟ್ ಏರ್‌ವೇಸ್ ಕಂಪನಿಯನ್ನು ಬಂದ್ ಮಾಡಿ, ಅದರ ಆಸ್ತಿಗಳನ್ನು ಮಾರಾಟ ಮಾಡಲು ಸುಪ್ರೀಂಕೋರ್ಟ್ ಆದೇಶಿಸಿದೆ. ಹೀಗೆ ಆಸ್ತಿ ಮಾರಾಟದ ಮೂಲಕ ಸಂಗ್ರಹವಾಗುವ ಹಣವನ್ನು ಕಂಪನಿಯ ಮಾಜಿ ಸಿಬ್ಬಂದಿ, ಬ್ಯಾಂಕ್‌ಗಳ ಸಾಲ ಮರುಪಾವತಿಗೆ ಬಳಸಲು ಸೂಚಿಸಿದೆ.
ಸಂವಿಧಾನದ 142ನೇ ವಿಧಿ ಅನ್ವಯ ತನಗೆ ಇರುವ ವಿಶೇಷ ಅಧಿಕಾರ ಬಳಸಿ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.
ಇದೇ ವೇಳೆ ಜೆಟ್ ಏರ್‌ವೇಸ್ ಕಂಪನಿಯನ್ನು ಕಾರ್ಲೋಕ್ ಕ್ಯಾಪಿಟಲ್ ಮತ್ತು ಮುರಾರಿ ಲಾಲ್ ಜಲನ್ ಒಡೆತನದ ಒಕ್ಕೂಟಕ್ಕೆ ಮಾರಾಟ ಮಾಡಿ ಅದರ ಪುನರುಜ್ಜೀವನಕ್ಕೆ ಆದೇಶಿಸಿದ್ದ ರಾಷ್ಟ್ರೀಯ ಕಂಪನಿಗಳ ಮೇಲ್ಮನವಿ ನ್ಯಾಯಾಧಿಕರಣದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ವಜಾ ಮಾಡಿದೆ.
ಪ್ರಕರಣ ಹಿನ್ನೆಲೆ:
1993ರಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಜೆಟ್ ಏರ್‌ವೇಸ್ 2000ರ ದಶಕದ ಮಧ್ಯಭಾಗದಲ್ಲಿ ದೇಶೀಯ ವಿಮಾನಯಾನದಲ್ಲಿ ಶೇ.20ಕ್ಕೂ ಹೆಚ್ಚು ಪಾಲು ಹೊಂದುವ ಮೂಲಕ ಮುಂಚೂಣಿ ಕಂಪನಿಯಾಗಿ ಸುದ್ದಿಯಲ್ಲಿತ್ತು. ಆದರೆ ನಂತರದ ವರ್ಷಗಳಲ್ಲಿ ಅಗ್ಗದ ದರ ಸೇವೆ ನೀಡುವ ಕಂಪನಿಗಳ ಪ್ರವೇಶ, ಇಂಧನ ದರ ಏರಿಕೆ ಮೊದಲಾದ ಕಾರಣಗಳಿಂದ 7500 ಕೋಟಿ ರು.ಗೂ ಹೆಚ್ಚಿನ ಸಾಲಕ್ಕೆ ಸಿಲುಕಿ 2019ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಸಾಲ ನೀಡಿದ್ದ ಎಸ್‌ಬಿಐ ಮತ್ತಿತರೆ ಬ್ಯಾಂಕ್‌ಗಳು, ಜೆಟ್ ಏರ್‌ವೇಸ್ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಕೋರಿದ್ದವು. ಆದರಂತೆ ದಿವಾಳಿ ಪ್ರಕ್ರಿಯೆ ಕೂಡಾ ಆರಂಭವಾಗಿತ್ತು.ಈ ನಡುವೆ ದುಬೈ ಮೂಲದ ಭಾರತೀಯ ಉದ್ಯಮಿ ಮುರಾಜಿ ಲಾಲ್ ಜಲನ್ ಮತ್ತು ಜೆಟ್ ಏರ್‌ವೇಸ್‌ನಲ್ಲಿ ಷೇರು ಹೊಂದಿದ್ದ ಜರ್ಮನ್ ಮೂಲದ ಉದ್ಯಮಿ ಫ್ಲೋರಿಯಾನ್, ಕಾರ್ಲೋಕ್ ಕ್ಯಾಪಿಟಲ್ ಎಂಬ ಒಕ್ಕೂಟ ಸ್ಥಾಪಿಸಿ ಅದರ ಮೂಲಕ ಜೆಟ್ ಏರ್‌ವೇಸ್‌ಗೆ ಮರುಜೀವ ನೀಡುವ ಪ್ರಸ್ತಾಪ ಮುಂದಿಟ್ಟಿದ್ದರು.
2021ರಲ್ಲಿ ಇದನ್ನು ರಾಷ್ಟ್ರೀಯ ಕಂಪನಿಗಳ ನ್ಯಾಯಾಧೀಕರಣ ಕೂಡಾ ಒಪ್ಪಿತ್ತು.ಅದರನ್ವಯ ಕಾರ್ಲೋಕ್ ಕ್ಯಾಪಿಟಲ್, ಜೆಟ್ ಏರ್‌ವೇಸ್‌ನಲ್ಲಿ ಹೊಸದಾಗಿ ಬಂಡವಾಳ ಹೂಡಬೇಕಿತ್ತು ಮತ್ತು ಬ್ಯಾಂಕ್‌ಗಳಿಗೆ 4783 ಕೋಟಿ ರು. ಸಾಲ ಮರುಪಾವತಿ ಮಾಡಬೇಕಿತ್ತು. ಆದರೆ ನಂತರದ ದಿನಗಳಲ್ಲಿ ಕಾರ್ಲೋಕ್ ಕ್ಯಾಪಿಟಲ್ ಅಗತ್ಯ ಬಂಡವಾಳ ಹೂಡಲು ವಿಫಲವಾಗುವುದರ ಜೊತೆಗೆ ಕಂಪನಿ ಪುನರುಜ್ಜೀವನದ ನಿಟ್ಟಿನಲ್ಲಿ ಪಾಲಿಸಬೇಕಿದ್ದ ಷರತ್ತುಗಳನ್ನೂ ಉಲ್ಲಂಘಿಸಿತ್ತು.ಹೀಗಾಗಿ ಜೆಟ್ ಏರ್‌ವೇಸ್ ಕಂಪನಿ ಮುಚ್ಚಿ, ಅದರ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಸಾಲ ಭರಿಸಲು ಅವಕಾಶ ನೀಡಬೇಕೆಂದು ಬ್ಯಾಂಕ್‌ಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು.
ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕಂಪನಿ ಮುಚ್ಚಿ, ಅದರ ಆಸ್ತಿ ಮಾರಾಟ ಮಾಡುವು ಪ್ರಕ್ರಿಯೆಯಿಂದಲೇ ಸಾಲ ನೀಡಿದವರು, ಸಿಬ್ಬಂದಿ ಮತ್ತು ಇತರರಿಗೆ ನ್ಯಾಯ ದೊರಕಿಸಬಹುದು ಎಂದು ಗುರುವಾರ ತೀರ್ಪು ನೀಡಿದೆ.
ಏನೇನು ಆಸ್ತಿ ಮಾರಾಟ?:
ಜೆಟ್ ಏರ್‌ವೇಸ್ ಬ್ರ್ಯಾಂಡ್‌ನೇಮ್, 11 ವಿಮಾನಗಳು, ಮುಂಬೈನಲ್ಲಿರುವ ಕಟ್ಟಡ, ವಿಮಾನ ನಿಲ್ದಾಣಗಳಲ್ಲಿ ಇರುವ ಇತರೆ ಪರಿಕರಗಳು ಮಾರಾಟಕ್ಕೆ ಲಭ್ಯವಿರಲಿವೆ.