ಸಾರಾಂಶ
ತಮಿಳುನಾಡು ಕೇಸಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು
ಕಾಲಹರಣ ಮಾಡುವಂತಿಲ್ಲ ।1- 3 ತಿಂಗಳಲ್ಲಿ ಅಂಕಿತ ಕಡ್ಡಾಯ ವೃಥಾ ಕಾಲಹರಣ ಅಕ್ರಮ, ಸಂವಿಧಾನ ವಿರೋಧಿ ನಡೆ: ಸುಪ್ರೀಂ
ನವದೆಹಲಿ : ಮಸೂದೆಗಳನ್ನು ಅನಿರ್ದಿಷ್ಟಾವಧಿ ಬಾಕಿ ಇರಿಸಿಕೊಳ್ಳುವ ರಾಜ್ಯಪಾಲರ ನಡೆಗೆ ಬ್ರೇಕ್ ಹಾಕುವಂಥ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಕಟಿಸಿದ್ದು, ‘ವಿಧೇಯಕಗಳ ಹಣೆಬರಹವನ್ನು ಸರ್ಕಾರ ಕಳಿಸಿದ 1ರಿಂದ 3 ತಿಂಗಳಲ್ಲಿ ನಿರ್ಧರಿಸಬೇಕು. ಅರ್ಥಾತ್ ಮಸೂದೆಗೆ ಸಮ್ಮತಿ ಇದ್ದರೆ 1 ತಿಂಗಳಲ್ಲಿ ಅಂಕಿತ ಹಾಕಬೇಕು. ಅಸಮ್ಮತಿ ಇದ್ದರೆ 3 ತಿಂಗಳಲ್ಲಿ ವಿಧಾನಸಭೆಗೆ ವಾಪಸ್ ಕಳಿಸಬೇಕು ವೃಥಾ ಕಾಲಹರಣ ಮಾಡಕೂಡದು’ ಎಂದು ತಾಕೀತು ಮಾಡಿದೆ. ಸುಪ್ರೀಂ ಕೋರ್ಟ್ ಈ ರೀತಿ ಕಾಲಮಿತಿ ನಿಗದಿ ಮಾಡಿದ್ದು ಇದೇ ಮೊದಲು.
ಇದರನ್ವಯ ತಮಿಳುನಾಡು ರಾಜ್ಯಪಾಲ ಆರ್. ಎನ್.ರವಿ ವಿರುದ್ಧದ ಹೋರಾಟದಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ಮಹತ್ವದ ಗೆಲುವು ಸಿಕ್ಕಿದೆ. ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವೆ ಇತ್ತೀಚೆಗೆ ಹೆಚ್ಚುತ್ತಿರುವ ಸಂಘರ್ಷದ ನಡುವೆ ಸುಪ್ರೀಂ ಕೋರ್ಟ್ ನೀಡಿದ ಈ ತೀರ್ಪು ತೀವ್ರ ಮಹತ್ವ ಪಡೆದುಕೊಂಡಿದೆ.
‘ನಮ್ಮ ಸರ್ಕಾರ ಕಳುಹಿಸಿಕೊಟ್ಟ 10 ವಿಧೇಯಕಗಳನ್ನು ಅಂಕಿತಕ್ಕಾಗಿ ಇಟ್ಟುಕೊಂಡು ರಾಜ್ಯಪಾಲ ಎನ್. ರವಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲ ಮತ್ತು ಆರ್. ಮಹದೇವನ್ ಅವರ ನೇತೃತ್ವದ ಪೀಠ, ‘ಎನ್.ರವಿ ಬಾಕಿ ಉಳಿಸಿಕೊಂಡಿರುವ ತಮಿಳುನಾಡು ಸರ್ಕಾರದ 10 ವಿಧೇಯಕಗಳು, ರಾಜ್ಯಪಾಲರ ಅಂಕಿತಕ್ಕೆ 2ನೇ ಬಾರಿ ಮರು ಸಲ್ಲಿಕೆ ಆಗಿವೆ. ಹೀಗಾಗಿ ಅದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದೇ ಭಾವಿಸಬಹುದು’ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ‘ಮಸೂದೆಗೆ ಅಂಕಿತ ಹಾಕದೇ ತಡ ಮಾಡುವುದು ಇದು ಸಂವಿಧಾನ ವಿರೋಧಿ, ಅಕ್ರಮ ಮತ್ತು ನಿರಂಕುಶ ನಡೆ ಎಂದು’ ಪೀಠ ಕಿಡಿಕಾರಿದೆ.
ಮೊದಲ ಬಾರಿ ಕಾಲಮಿತಿ:
ರಾಜ್ಯಪಾಲರ ಬಳಿ ಅಂಕಿತಕ್ಕಾಗಿ ಕಳುಹಿಸಿಕೊಡುವ ವಿಧೇಯಕಗಳ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಇದೇ ಮೊದಲ ಬಾರಿ ಸುಪ್ರೀಂ ಕೋರ್ಟ್, ಕಾಲ ಮಿತಿ ನಿಗದಿಪಡಿಸಿದೆ.
‘ಒಂದು ವೇಳೆ ಯಾವುದೇ ವಿಧೇಯಕವನ್ನು ಅಂಗೀಕರಿಸಲು ಅಥವಾ ಸಚಿವ ಸಂಪುಟದ ಸಲಹೆ ಮತ್ತು ನೆರವು ಪಡೆದು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಲು 1 ತಿಂಗಳ ಕಾಲ ತಮ್ಮ ಬಳಿ ಇಟ್ಟುಕೊಳ್ಳಬಹುದಾಗಿದೆ. ಇನ್ನು ಸಚಿವ ಸಂಪುಟದ ನೆರವು ಅಥವಾ ಸಲಹೆ ಪಡೆಯದೆ ಯಾವುದೇ ವಿಧೇಯಕಕ್ಕೆ ಅಂಗೀಕಾರ ನೀಡದೆ ಬಾಕಿ ಉಳಿಸಿಕೊಂಡಿದ್ದರೆ (ಮಸೂದೆ ಬಗ್ಗೆ ತೃಪ್ತಿ ಇಲ್ಲದಿದ್ದರೆ) 3 ತಿಂಗಳೊಳಗೆ ಆ ವಿಧೇಯಕವನ್ನು ಶಾಸನಸಭೆಗೆ ವಾಪಸ್ ಕಳುಹಿಸಿಕೊಡಬೇಕು’ ಎಂದು ಪೀಠ ಸೂಚಿಸಿದೆ.
‘ರಾಜ್ಯಪಾಲರು ಕಳುಹಿಸಿಕೊಟ್ಟ ವಿಧೇಯಕವನ್ನು ಶಾಸನಸಭೆಯು ಮರು ಅಂಗೀಕಾರ ನೀಡಿ ವಾಪಸ್ ಕಳುಹಿಸಿಕೊಟ್ಟರೆ, 1 ತಿಂಗಳೊಳಗೆ ರಾಜ್ಯಪಾಲರು ಅದಕ್ಕೆ ಅಂಕಿತ ಹಾಕಬೇಕು. ಅವನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಕೊಡುವಂತಿಲ್ಲ. ಒಂದು ವೇಳೆ ಈ ಕಾಲಮಿತಿಯೊಳಗೆ ರಾಜ್ಯಪಾಲರು ವಿಧೇಯಕದ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಅದನ್ನು ನಿಷ್ಕ್ರಿಯತೆ ಎಂದೇ ಪರಿಗಣಿಸಲ್ಪಟ್ಟು, ಆಗ ನ್ಯಾಯಾಲಯವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬಹುದಾಗಿದೆ’ ಎಂದು ಪೀಠ ತಿಳಿಸಿದೆ.
‘ಸಂವಿಧಾನದ 200ನೇ ವಿಧಿಯಲ್ಲಿ ರಾಜ್ಯಪಾಲರು ಎಷ್ಟು ಅವಧಿಯೊಳಗೆ ವಿಧೇಯಕಗಳಿಗೆ ಅಂಗೀಕಾರ ನೀಡಬೇಕೆಂದು ಕಾಲಮಿತಿ ವಿಧಿಸಿಲ್ಲ. ಹಾಗಂತ ರಾಜ್ಯಪಾಲರು ತಮ್ಮ ಬಳಿ ಕಳುಹಿಸಿಕೊಟ್ಟ ವಿಧೇಯಕಗಳನ್ನು ಸುಮ್ಮನೆ ಮನಸ್ಸಿಗೆ ಬಂದಷ್ಟು ದಿನ ಇಟ್ಟುಕೊಳ್ಳುವಂತಿಲ್ಲ. ಈ ಮೂಲಕ ರಾಜ್ಯಾಡಳಿತಕ್ಕೆ ಅಡ್ಡಿ ಮಾಡುವಂತಿಲ್ಲ.ಸಂವಿಧಾನದ 142ನೇ ವಿಧಿ ಪ್ರಕಾರ ರಾಜ್ಯಪಾಲರಿಗೆ 2ನೇ ಬಾರಿ ಯಾವುದೇ ವಿಧೇಯಕವನ್ನು ಮರು ಕಳುಹಿಸಿಕೊಟ್ಟರೆ ಅದಕ್ಕೆ ಒಪ್ಪಿಗೆ ನೀಡುವುದು ಅನಿವಾರ್ಯ’ ಎಂದಿದೆ.
ರಾಜ್ಯಪಾಲರು ರಾಜ್ಯದ ಶಾಸಕಾಂಗಕ್ಕೆ ಅಡ್ಡಿಮಾಡುವ, ಉಸಿರುಗಟ್ಟಿಸುವ ಕೆಲಸ ಆಗದಂತೆ ಎಚ್ಚರಿಕೆ ವಹಿಸಬೇಕಿದೆ. ಈ ಮೂಲಕ ಜನರ ಇಚ್ಛೆಯನ್ನು ಭಂಗಪಡಿಸುವ ಅಥವಾ ಮುರಿಯುವ ಕೆಲಸ ಮಾಡಬಾರದು ಎಂದು ಪೀಠ ಸಲಹೆ ನೀಡಿದೆ.
ವಿಟೋ ಅಧಿಕಾರ ಇಲ್ಲ:
ಇದೇ ವೇಳೆ ಸಂವಿಧಾನದ 200ನೇ ವಿಧಿ ಪ್ರಕಾರ ರಾಜ್ಯಪಾಲರಿಗೆ ಯಾವುದೇ ವಿಶೇಷಾಧಿಕಾರ ಇರುವುದಿಲ್ಲ. ಅವರು ರಾಜ್ಯ ಸಚಿವ ಸಂಪುಟದ ಸಲಹೆ ಅಥವಾ ನೆರವಿನಂತೆ ಕೆಲಸ ಮಾಡಬೇಕಾಗುತ್ತದೆ. ಸಂವಿಧಾನವು ರಾಜ್ಯಪಾಲರಿಗೆ ವಿಧೇಯಕಗಳಿಗೆ ಒಪ್ಪಿಗೆ ನೀಡುವ, ನೀಡದಿರುವ ಅಥವಾ ರಾಷ್ಟ್ರಪತಿಗಳ ಬಳಿ ಕಳುಹಿಸಿಕೊಡುವ ಅಧಿಕಾರ ನೀಡುತ್ತದೆ. ಹಾಗಂತ ರಾಜ್ಯಪಾಲರು ತಮ್ಮ ಬಳಿ ಕಳುಹಿಸಿಕೊಟ್ಟ ವಿಧೇಯಕವನ್ನು ಇಟ್ಟುಕೊಂಡು ಕೂರುವ ಸಂಪೂರ್ಣ ವೀಟೋ (ಆಬ್ಸಲ್ಯೂಟ್ ವೀಟೋ) ಅಥವಾ ಆಂಶಿಕ ವೀಟೋ (ಪಾಕೆಟ್ ವಿಟೋ) ಹೊಂದಿಲ್ಲ ಎಂದು ಪೀಠ ಹೇಳಿದೆ.
ನ್ಯಾಯಾಂಗದ ವ್ಯಾಪ್ತಿಗೆ ಬರ್ತಾರೆ:
‘ರಾಜ್ಯಪಾಲರ ಕ್ರಮವು ನ್ಯಾಯಾಂಗದ ವಿಮರ್ಶೆಯಿಂದ ಮುಕ್ತವಾಗಿಲ್ಲ. ರಾಜ್ಯಪಾಲರು ರಾಜಕೀಯವನ್ನು ಬದಿಗಿಟ್ಟು ಸರ್ಕಾರದ ಪಾಲಿಗೆ ಸ್ನೇಹಿತ, ಮಾರ್ಗದರ್ಶಿ ಮತ್ತು ವಿಚಾರವಾದಿಯಂತೆ ಕೆಲಸ ಮಾಡಬೇಕು. ಸಂಘರ್ಷದ ಸಮಯದಲ್ಲಿ ರಾಜ್ಯಪಾಲರು ಪರಿವರ್ತಕನಾಗಿರಬೇಕೇ ಹೊರತು ಪ್ರತಿಬಂಧಕನಾಗಿರಬಾರದು’ ಎಂದು ಪೀಠ ಇದೇ ವೇಳೆ ಅಭಿಪ್ರಾಯಪಟ್ಟಿದೆ.
ಸ್ಟಾಲಿನ್ ಹರ್ಷ:
ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬಣ್ಣಿಸಿದ್ದಾರೆ. ಜತೆಗೆ, ಇದು ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸಿಕ್ಕಿದ ಗೆಲುವು. ಈ ಆದೇಶದಿಂದ ರಾಜ್ಯಪಾಲರ ಬಳಿ ಬಾಕಿ ಉಳಿದಿರು ವ ಎಲ್ಲ 10 ವಿಧೇಯಗಳಿಗೆ ಒಪ್ಪಿಗೆ ಸಿಕ್ಕಂತಾಗಿದೆ ಎಂದಿದ್ದಾರೆ.
ಏನಿದು ಸಂಘರ್ಷ?
ರಾಜ್ಯ ವಿಧಾನಸಭೆ ಅಂಗೀಕರಿಸಿದ 10 ಮಸೂದೆಗಳಿಗೆ ರಾಜ್ಯಪಾಲ ಎನ್.ರವಿ ಅಂಗೀಕಾರ ನೀಡದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಮಿಳುನಾಡಿನ ಡಿಎಂಕೆ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂಕೋರ್ಟ್ ಹೇಳಿದ್ದೇನು?
ಮಸೂದೆಗೆ ಅಂಕಿತ ಹಾಕಲು ಸಂವಿಧಾನ ಯಾವುದೇ ಕಾಲಮಿತಿ ಹಾಕಿಲ್ಲ. ಆದರೆ ಸುಮ್ಮನೆ ಮನಸ್ಸಿಗೆ ಬಂದಷ್ಟು ದಿನ ತಮ್ಮಲ್ಲಿ ಇಟ್ಟುಕೊಳ್ಳುವಂತಿಲ್ಲ.
ವಿಧೇಯಕ ಅಂಗೀಕಾರ/ ಸಂಪುಟದ ಸಲಹೆ ಪಡೆದು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಲು 1 ತಿಂಗಳ ಕಾಲ ತಮ್ಮ ಬಳಿ ಇಟ್ಟುಕೊಳ್ಳಬಹುದು
ಸಂಪುಟದ ನೆರವು ಪಡೆಯದೆ/ ವಿಧೇಯಕಕ್ಕೆ ಅಂಗೀಕಾರ ನೀಡದೆ ಬಾಕಿ ಉಳಿಸಿಕೊಂಡಿದ್ದರೆ 3 ತಿಂಗಳಲ್ಲಿ ವಿಧೇಯಕ ಶಾಸನಸಭೆಗೆ ಮರಳಿಸಬೇಕು
ರಾಜ್ಯಪಾಲರು ಮರಳಿಸಿದ ವಿಧೇಯಕವನ್ನು ಶಾಸನಸಭೆಯು ಮರು ಅಂಗೀಕಾರ ಮಾಡಿದರೆ 1 ತಿಂಗಳೊಳಗೆ ರಾಜ್ಯಪಾಲರು ಅಂಕಿತ ಹಾಕಬೇಕು
2ನೇ ಬಾರಿ ಶಾಸನಸಭೆಯ ಅಂಗೀಕಾರಕ್ಕೆ ಕಳುಹಿಸಿಕೊಟ್ಟ ವಿಧೇಯಕವನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಕೊಡುವಂತಿಲ್ಲ
ಸಂವಿಧಾನದ 142ನೇ ವಿಧಿ ಪ್ರಕಾರ ಗವರ್ನರ್‌ಗೆ 2ನೇ ಬಾರಿ ಯಾವುದೇ ವಿಧೇಯಕ ಮರು ಕಳುಹಿಸಿದರೆ ಅದಕ್ಕೆ ಅಂಕಿತ ಹಾಕುವುದು ಅನಿವಾರ್ಯ
ಕಾಲಮಿತಿಯಲ್ಲಿ ಗವರ್ನರ್ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಅದನ್ನು ನಿಷ್ಕ್ರಿಯತೆ ಎಂದು ಪರಿಗಣಿಸಿ ಕೋರ್ಟ್ ಮಧ್ಯಪ್ರವೇಶ ಮಾಡಬಹುದು
ಐತಿಹಾಸಿಕ ತೀರ್ಪು
ರಾಜ್ಯಪಾಲರ ಅಧಿಕಾರ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕ. ಇದು ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸಿಕ್ಕಿದ ಗೆಲುವು. ಈ ಆದೇಶದಿಂದ ರಾಜ್ಯಪಾಲರ ಬಳಿ ಬಾಕಿ ಉಳಿದಿರು ವ ಎಲ್ಲ 10 ವಿಧೇಯಗಳಿಗೆ ಒಪ್ಪಿಗೆ ಸಿಕ್ಕಂತಾಗಿದೆ.
ಎಂ.ಕೆ.ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ