ಮುಸ್ಲಿಮರಿಗೆ 4% ಗುತ್ತಿಗೆ ಮೀಸಲು ಮಸೂದೆ ಪಾಸ್‌ : ವಿರೋಧ ಮಧ್ಯೆಯೇ ಅಸ್ತು - ಗೌರ್ನರ್‌ ಒಪ್ಪಿದರೆ ಜಾರಿ

| N/A | Published : Mar 22 2025, 07:18 AM IST

Vidhan soudha
ಮುಸ್ಲಿಮರಿಗೆ 4% ಗುತ್ತಿಗೆ ಮೀಸಲು ಮಸೂದೆ ಪಾಸ್‌ : ವಿರೋಧ ಮಧ್ಯೆಯೇ ಅಸ್ತು - ಗೌರ್ನರ್‌ ಒಪ್ಪಿದರೆ ಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಶಾಸಕರ ವಿರೋಧದ ನಡುವೆಯೇ ಅಲ್ಪಸಂಖ್ಯಾತ (ಮುಸ್ಲಿಂ)ರಿಗೆ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಮಂಡಲದಲ್ಲಿ ಅನುಮೋದನೆ ನೀಡಲಾಯಿತು.

ವಿಧಾನಮಂಡಲ :  ಬಿಜೆಪಿ ಶಾಸಕರ ವಿರೋಧದ ನಡುವೆಯೇ ಅಲ್ಪಸಂಖ್ಯಾತ (ಮುಸ್ಲಿಂ)ರಿಗೆ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಮಂಡಲದಲ್ಲಿ ಅನುಮೋದನೆ ನೀಡಲಾಯಿತು. 

ವಿಧಾನಸಭೆ ಮತ್ತು ವಿಧಾನಪರಿಷತ್‌ಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ವಿಧೇಯಕವನ್ನು ಶುಕ್ರವಾರ ಸದನದಲ್ಲಿ ಪರ್ಯಾಲೋಚಿಸಿದರು. ಅದಕ್ಕೆ ಸದನ ಧ್ವನಿಮತದ ಮೂಲಕ ಒಪ್ಪಿಗೆ ಸೂಚಿಸಿತು.

ವಿಧೇಯಕದಲ್ಲಿನ ತಿದ್ದುಪಡಿ ಕುರಿತು ವಿವರಣೆ ನೀಡಿದ ಎಚ್‌.ಕೆ. ಪಾಟೀಲ್‌, ಈವರೆಗೆ 1 ಕೋಟಿ ರು.ವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿಗೆ ಶೇ.17.15, ಪರಿಶಿಷ್ಟ ಪಂಗಡಗಳಿಗೆ ಶೇ. 6.95, ಪ್ರವರ್ಗ -1ಕ್ಕೆ ಶೇ.4, 2ಎ ಗೆ ಶೇ.15 ಮೀಸಲಾತಿ ಕಲ್ಪಿಸಲಾಗಿತ್ತು. ಇದೀಗ ಕೆಟಿಟಿಪಿ ಕಾಯ್ದೆ 1999ರ ಕಲಂ 6ಲ್ಲಿ ಮೀಸಲಾತಿ ಒದಗಿಸಿದ್ದ ಕಾಮಗಾರಿಗಳ ಮಿತಿಯನ್ನು 1 ಕೋಟಿ ರು. ಬದಲಾಗಿ 2 ಕೋಟಿ ರು.ಗೆ ಎಂದು ಪ್ರಸ್ತಾಪಿಸಲಾಗಿದೆ. ಮೀಸಲಾತಿಗೆ ಅರ್ಹ ಸಮುದಾಯಗಳ ಪಟ್ಟಿಯಲ್ಲಿ 2ಬಿ ಪ್ರವರ್ಗ (ಅಲ್ಪಸಂಖ್ಯಾತ, ಮುಸ್ಲಿಂ)ದವರನ್ನೂ ಸೇರಿಸಿ ಅವರಿಗೆ ಶೇ. 4ರಷ್ಟು ಮೀಸಲಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ, 2ಬಿ ಪ್ರಮಾಣಪತ್ರ ಪಡೆಯಲು ಆದಾಯ ಮಿತಿ ವಿಧಿಸುವಂತಿಲ್ಲ ಎಂದೂ ಹೇಳಲಾಗಿದೆ ಎಂದು ವಿವರಿಸಿದರು.

ಸರ್ಕಾರದ ವಿವಿಧ ಇಲಾಖೆ, ನಿಗಮ ಹಾಗೂ ಸಂಸ್ಥೆಗಳಲ್ಲಿ ಖರೀದಿಸುವ ಸರಕು ಸೇವೆಗಳಲ್ಲಿ 1 ಕೋಟಿ ರು.ವರೆಗಿನ ಖರೀದಿಗಳಲ್ಲಿ ಮೀಸಲಾತಿ ಕಲ್ಪಿಸುವ ಕುರಿತಂತೆಯೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ-2025ರಲ್ಲಿ ತಿಳಿಸಲಾಗಿದೆ. ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ, ಮುನಿಸಿಪಲ್‌ ಕೌನ್ಸಿಲ್‌, ಪಟ್ಟಣ ಪಂಚಾಯಿತಿ, ನಗರಾಭಿವೃದ್ಧಿ ಪ್ರಾಧಿಕಾರಿಗಳಿಗೆ 2 ಲಕ್ಷ ರು. ಹಾಗೂ ಸರಕು ಸಾಮಗ್ರಿಗೆ 1 ಲಕ್ಷ ರು.ವರೆಗಿನ ವಿನಾಯಿತಿಯನ್ನು ಬೆಲೆ ಏರಿಕೆ ಪರಿಗಣಿಸಿ 5 ಲಕ್ಷ ರು.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ವಿಧೇಯಕದಲ್ಲಿನ ಮೀಸಲಾತಿ ವರ್ಗೀಕರಣ: ಪರಿಶಿಷ್ಟ ಜಾತಿಗೆ ಶೇ.17.15, ಪರಿಶಿಷ್ಟ ಪಂಗಡಗಳಿಗೆ ಶೇ. 6.95, ಪ್ರವರ್ಗ -1ಕ್ಕೆ ಶೇ. 4, ಪ್ರವರ್ಗ 2ಎಗೆ ಶೇ.15, ಪ್ರವರ್ಗ 2ಬಿ (ಅಲ್ಪಸಂಖ್ಯಾತರು) ಶೇ. 4ರಷ್ಟು ಮೀಸಲಾತಿ ಒದಗಿಸಲಾಗಿದೆ. 

ಬಿಜೆಪಿ ವಿರೋಧ, ಸ್ಪೀಕರ್‌ ಪೀಠಕ್ಕೆ ನುಗ್ಗಿದ ಬೆಲ್ಲದ್‌ ವಿಧಾನಸಭೆಯಲ್ಲಿ ಕೆಟಿಪಿಪಿ (ತಿದ್ದುಪಡಿ) ವಿಧೇಯಕ ಮಂಡನೆಗೆ ಸ್ಪೀಕರ್‌ ಯು.ಟಿ. ಖಾದರ್‌ ಅನುಮತಿಸುತ್ತಿದ್ದಂತೆ ಬಿಜೆಪಿ ಶಾಸಕರು ಗದ್ದಲ ಆರಂಭಿಸಿದರು. ಮೊದಲೇ ಸದನದ ಬಾವಿಯಲ್ಲಿದ್ದು ಪ್ರತಿಭಟಿಸುತ್ತಿದ್ದ ಬಿಜೆಪಿ ಶಾಸಕರು, ಕೆಟಿಪಿಪಿ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ವಿರೋಧಿಸಿದ್ದಲ್ಲದೆ, ಕಾಂಗ್ರೆಸ್‌ ಸರ್ಕಾರ ಪಾಕಿಸ್ತಾನ ಬಿಲ್‌ ಮಂಡಿಸುತ್ತಿದೆ ಎಂದು ಘೋಷಣೆ ಕೂಗಿದರು. ಈ ವೇಳೆ ವಿಪಕ್ಷ ನಾಯಕ ಆರ್‌. ಅಶೋಕ್‌, ತಮ್ಮ ಶಾಸಕರಿಗೆ ಸ್ಪೀಕರ್‌ ಪೀಠಕ್ಕೆ ನುಗ್ಗುವಂತೆ ಸೂಚಿಸಿದರು.

ಅದರಿಂದ ಪ್ರೇರೇಪಿತರಾದ ಶಾಸಕ ಅರವಿಂದ್‌ ಬೆಲ್ಲದ್‌ ಸ್ಪೀಕರ್‌ ಪೀಠದ ಬಳಿ ಬಂದು ಘೋಷಣೆ ಕೂಗಲಾರಂಭಿಸಿದರು. ಆಗ ಅಲ್ಲಿದ್ದ ಮಾರ್ಷಲ್‌ಗಳು ಅರವಿಂದ್‌ ಬೆಲ್ಲದ್‌ ಅವರನ್ನು, ಅನಾಮತಾಗಿ ಎತ್ತಿ ಕೆಳಗಿಳಿಸಿದರು. ಈ ವೇಳೆ ಬೆಲ್ಲದ್‌ ಕೆಳ ಬಿದ್ದರಾದರೂ, ನಂತರ ಸದನದ ಬಾವಿ ಬಳಿಗೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಅದೇ ರೀತಿ ವಿಧಾನಪರಿಷತ್‌ನಲ್ಲೂ ವಿಧೇಯಕಕ್ಕೆ ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.