ಸಾರಾಂಶ
ನವದೆಹಲಿ‘ಬಿಜೆಪಿ ಮತ್ತು ಬಿಆರ್‌ಎಸ್ ನಡುವೆ ಏರ್ಪಟ್ಟ ಡೀಲ್‌ನಿಂದಾಗಿ ತೆಲಂಗಾಣದ ಬಿಆರ್‌ಎಸ್ ಶಾಸಕಿ ಕೆ.ಕವಿತಾ ಅವರಿಗೆ ದೆಹಲಿ ಮದ್ಯ ಹಗರಣದಲ್ಲಿ ಜಾಮೀನು ಲಭಿಸಿರಬಹುದು’ ಎಂದಿದ್ದ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ.
‘ಇದು ಒಬ್ಬ ಮುಖ್ಯಮಂತ್ರಿ ಆಡುವ ಮಾತಾ? ಅವರ ಮಾತಿನಿಂದ ಜನರಲ್ಲೂ ಅನುಮಾನ ಮೂಡುತ್ತದೆ. ಏಕೆ ರಾಜಕೀಯ ದ್ವೇಷದಲ್ಲಿ ಕೋರ್ಟನ್ನು ಎಳೆದು ತರುತ್ತೀರಿ? ನಾವು ರಾಜಕೀಯ ಪಕ್ಷಗಳನ್ನು ಕೇಳಿಕೊಂಡು ಆದೇಶ ನೀಡಬೇಕಾ? ನಮ್ಮ ಆದೇಶಗಳನ್ನು ಟೀಕಿಸುವ ರಾಜಕಾರಣಿಗಳು ಅಥವಾ ಯಾರ ಬಗ್ಗೆಯೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಸಾಕ್ಷಿಪ್ರಜ್ಞೆ ಹಾಗೂ ಪ್ರಮಾಣವಚನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇವೆ’ ಎಂದು ನ್ಯಾ.ಬಿ.ಆರ್.ಗವಾಯಿ ಅವರ ತ್ರಿಸದಸ್ಯ ಪೀಠ ರೇವಂತ್ ರೆಡ್ಡಿಗೆ ಸಂಬಂಧಿಸಿದ ಬೇರೊಂದು ಪ್ರಕರಣದ ವಿಚಾರಣೆ ವೇಳೆ ಗುರುವಾರ ತೀವ್ರ ಚಾಟಿ ಬೀಸಿತು.
ರೆಡ್ಡಿ ಹೇಳಿದ್ದೇನು?: ‘15 ತಿಂಗಳ ನಂತರ ಮನೀಶ್ ಸಿಸೋಡಿಯಾಗೆ ಜಾಮೀನು ಲಭಿಸಿದೆ. ಕೇಜ್ರಿವಾಲ್‌ಗೆ ಇನ್ನೂ ಸಿಕ್ಕಿಲ್ಲ. ಆದರೆ ಕವಿತಾಗೆ ಕೇವಲ 5 ತಿಂಗಳಲ್ಲಿ ಜಾಮೀನು ಸಿಕ್ಕಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಬಿಆರ್‌ಎಸ್ ಕೆಲಸ ಮಾಡಿತ್ತು. ಬಹುಶಃ ಬಿಜೆಪಿ-ಬಿಆರ್‌ಎಸ್ ನಡುವಿನ ಡೀಲ್‌ನಿಂದಾಗಿ ಜಾಮೀನು ಲಭಿಸಿರಬಹುದು’ ಎಂದು ರೇವಂತ್ ಮಂಗಳವಾರ ಹೇಳಿದ್ದರು.