ಭೋಜಶಾಲಾ ಮಂದಿರ,ಮಸೀದಿ ಸಮೀಕ್ಷೆ ತಡೆಗೆ ಸುಪ್ರೀಂ ನಕಾರ

| Published : Apr 02 2024, 01:00 AM IST / Updated: Apr 02 2024, 06:38 AM IST

ಸಾರಾಂಶ

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ತಮ್ಮದು ಎಂದು ಹೇಳಿಕೊಳ್ಳುವ ಮಧ್ಯಕಾಲೀನ ಯುಗದ ರಚನೆಯಾದ ಭೋಜಶಾಲಾ ಮಸೀದಿ/ಮಂದಿರ ಸಂಕೀರ್ಣದ ‘ವೈಜ್ಞಾನಿಕ ಸಮೀಕ್ಷೆ’ಯನ್ನು ತಡೆಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

 ನವದೆಹಲಿ :  ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ತಮ್ಮದು ಎಂದು ಹೇಳಿಕೊಳ್ಳುವ ಮಧ್ಯಕಾಲೀನ ಯುಗದ ರಚನೆಯಾದ ಭೋಜಶಾಲಾ ಮಸೀದಿ/ಮಂದಿರ ಸಂಕೀರ್ಣದ ‘ವೈಜ್ಞಾನಿಕ ಸಮೀಕ್ಷೆ’ಯನ್ನು ತಡೆಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. 

ಆದರೆ ಎಎಸ್‌ಐ ಸಮೀಕ್ಷಾ ಫಲಿತಾಂಶ ಆಧರಿಸಿ ತನ್ನ ಅನುಮತಿಯಿಲ್ಲದೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಾಕೀತು ಮಾಡಿದೆ. ವೈಜ್ಞಾನಿಕ ಸಮೀಕ್ಷೆಗೆ ಮಾ.11ರಂದು ಮಧ್ಯಪ್ರದೇಶ ಹೈಕೋರ್ಟ್‌ ನೀಡಿದ್ದ ಅನುಮತಿ ಪ್ರಶ್ನಿಸಿ ಮೌಲಾನಾ ಕಮಾಲುದ್ದೀನ್ ವೆಲ್ಫೇರ್ ಸೊಸೈಟಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು ಕೇಂದ್ರ, ಮಧ್ಯಪ್ರದೇಶ ಸರ್ಕಾರ, ಎಎಸ್ಐ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿತು ಹಾಗೂ ಉತ್ತರ ನೀಡಲು 4 ವಾರ ಅವಕಾಶ ನೀಡಿತು.

ಇದೇ ವೇಳೆ, ಸಮೀಕ್ಷೆ ಫಲಿತಾಂಶ ಆಧರಿಸಿ ತನ್ನ ಅನುಮತಿ ಇಲ್ಲದೆ ಯಾವುದೇ ಕ್ರಮ ಕೈಗೊಳ್ಳಬಾರದು. ಮಸೀದಿ/ಮಂದಿರ ಸಂಕೀರ್ಣಕ್ಕೆ ಧಕ್ಕೆ ಆಗಬಲ್ಲ ಯಾವುದೇ ಉತ್ಖನನ ಮಾಡಬಾರದು ಎಂದು ಅದು ಸೂಚಿಸಿತು.

ಹಿಂದೂಗಳು 11ನೇ ಶತಮಾನದ ಈ ಸಂಕೀರ್ಣವನ್ನು ವಾಗ್ದೇವಿ (ಸರಸ್ವತಿ) ಮಂದಿರ ಎಂದು ನಂಬುತ್ತಾರೆ. ಆದರೆ ಮುಸ್ಲಿಂ ಸಮುದಾಯವು ಇದನ್ನು ಕಮಲ್ ಮೌಲಾ ಮಸೀದಿ ಎನ್ನುತ್ತಾರೆ. ಈ ನಡುವೆ ಕೋರ್ಟ್‌ ಅನುಮತಿ ಮೇರೆಗೆ 2003ರಿಂದ ಮಂಗಳವಾರ ಹಿಂದೂಗಳು ಇಲ್ಲಿ ಸರಸ್ವತಿ ಪೂಜೆ ಮಾಡುತ್ತಾರೆ. ಶುಕ್ರವಾರ ಮುಸ್ಲಿಮರು ನಮಾಜ್‌ ಮಾಡುತ್ತಾರೆ.