ಸಾರಾಂಶ
ನವದೆಹಲಿ: ಮನೆಯಲ್ಲಿ ಕಂತೆಕಂತೆ ಹಣ ಪತ್ತೆಯಾದ ಆರೋಪದ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದಿದ್ದ ಆಂತರಿಕ ತನಿಖಾ ವರದಿ ಅಮಾನ್ಯಗೊಳಿಸುವಂತೆ ಕೋರಿ ನ್ಯಾ। ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಜತೆಗೆ, ‘ನಿಮ್ಮ ನಡತೆ ಮೇಲೆ ನಂಬಿಕೆ ಬರುತ್ತಿಲ್ಲ’ ಎಂದು ಹೇಳಿದೆ.
ತಮ್ಮ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಂಸತ್ತನ್ನು ಒತ್ತಾಯಿಸಿದ್ದ ನ್ಯಾ। ಸಂಜೀವ್ ಖನ್ನಾ ಅವರ ಶಿಫಾರಸನ್ನು ಮತ್ತು ತಮ್ಮನ್ನು ಅಪರಾಧಿ ಎಂದಿದ್ದ ತನಿಖಾ ವರದಿಯನ್ನು ರದ್ದುಗೊಳಿಸುವಂತೆ ನ್ಯಾ।ವರ್ಮಾ ಕೋರಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾ। ದೀಪಂಕರ್ ದತ್ತಾ ಮತ್ತು ಎ.ಜಿ. ಮಾಶಿ ಅವರ ಪೀಠ, ‘ಅಗ್ನಿಶಾಮಕ ದಳದವರ ಕಾರ್ಯಾಚರಣೆಯ ದೃಶ್ಯಾವಳಿಗಳನ್ನು ನಾವು ಬಹಿರಂಗಪಡಿಸುವ ಅಗತ್ಯವಿರಲಿಲ್ಲ. ಆದರೆ ಆಗ ನೀವದನ್ನು ಪ್ರಶ್ನಿಸಿರಲಿಲ್ಲ ಮತ್ತು ರಿಟ್ ಅರ್ಜಿಯನ್ನೂ ಸಲ್ಲಿಸಿರಲಿಲ್ಲ. ಆದರೆ ನೀವು ಅಪರಾಧಿಯೆಂದು ವರದಿ ಬಂದ ಬಳಿಕವೇ ಸರ್ವೋಚ್ಚ ನ್ಯಾಯಾಲಯದ ಮೊರೆಹೋಗಲು ನಿರ್ಧರಿಸಿದಿರಿ. ಹೀಗಾಗಿ ನಿಮ್ಮ ಈ ನಡೆಗಳು ನಂಬಿಕೆಗೆ ಅರ್ಹವಾಗಿಲ್ಲ’ ಎಂದು ಹೇಳಿದೆ ಹಾಗೂ ಅವರ ಮನವಿಯನ್ನು ತಿರಸ್ಕರಿಸಿದೆ.