ಅಂಗವಿಕಲರಿಗೆ ಕೆವೈಸಿ ನಿಯಮ ಬದಲಿಸಿ : ಸರ್ಕಾರಕ್ಕೆ ಸುಪ್ರೀಂ

| N/A | Published : May 01 2025, 12:50 AM IST / Updated: May 01 2025, 04:49 AM IST

The Supreme Court of India (File Photo/ANI)
ಅಂಗವಿಕಲರಿಗೆ ಕೆವೈಸಿ ನಿಯಮ ಬದಲಿಸಿ : ಸರ್ಕಾರಕ್ಕೆ ಸುಪ್ರೀಂ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗವಿಕಲರು ಮತ್ತು ಆ್ಯಸಿಡ್‌ ದಾಳಿಗೊಳಗಾದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೆವೈಸಿ   ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌  ಸೂಚನೆ  

ನವದೆಹಲಿ: ಅಂಗವಿಕಲರು ಮತ್ತು ಆ್ಯಸಿಡ್‌ ದಾಳಿಗೊಳಗಾದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ ಡಿಟಿಟಲ್‌ ಸೌಲಭ್ಯ ಕೂಡಾ ಮೂಲಭೂತ ಹಕ್ಕು ಎಂದು ಐತಿಹಾಸಿಕ ಆದೇಶ ನೀಡಿದೆ.

ಅಂಧರು ಮತ್ತು ಆ್ಯಸಿಡ್‌ ದಾಳಿಗೊಳಗಾದವರು ಕೆವೈಸಿ ಪೂರ್ಣಗೊಳಿಸಲು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಸೂಚನೆ ನೀಡಲಾಗಿದೆ. ಸಂವಿಧಾನದ 21ನೇ ವಿಧಿ ಪ್ರಕಾರ ನೀಡಲಾದ ಬದುಕಿನ ಹಕ್ಕಿನಲ್ಲಿ ಡಿಜಿಟಲ್‌ ಸೌಲಭ್ಯ ಪಡೆಯುವುದು ಕೂಡ ಪ್ರಮುಖ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಎಲ್ಲರನ್ನೂ ಒಳಗೊಳ್ಳುವ ಕೆವೈಸಿ ನಿಯಮಗಳನ್ನು ರೂಪಿಸಲು 20 ನಿರ್ದೇಶನಗಳನ್ನೂ ಈ ವೇಳೆ ಹೊರಡಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾ.ಜೆ.ಬಿ.ಪರ್ದಿವಾಲ ಮತ್ತು ಆರ್‌.ಮಹದೇವನ್‌ ಅವರಿದ್ದ ಪೀಠ, ಅಂಗವಿಕಲರು ಅದರಲ್ಲೂ ಮುಖ್ಯವಾಗಿ ಅಂಧರು ಮತ್ತು ವಿರೂಪಗೊಂಡ ಮುಖ ಹೊಂದಿರುವವರು ಕೆವೈಸಿ ಪ್ರಕ್ರಿಯೆ ವೇಳೆ ಮುಖದ ಸರಿಹೊಂದಾಣಿಕೆ ಅಥವಾ ಕಣ್ಣು ಮಿಟುಕಿಸುವ ವೇಳೆ ಅನುಭವಿಸುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಇಂಥದ್ದೊಂದು ನಿರ್ದೇಶನ ನೀಡಿದೆ.

ಯಾವುದೇ ಬ್ಯಾಂಕ್‌ ಖಾತೆ ತೆರೆಯಲು ಮತ್ತು ಸರ್ಕಾರಿ ಯೋಜನೆಗಳ ಲಾಭಪಡೆಯಲು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ. ಆದರೆ, ಆನ್‌ಲೈನ್‌ ಕೈವಿಸಿಯಿಂದ ಅಂಧರು ಮತ್ತು ಆ್ಯಸಿಡ್‌ ದಾಳಿಗೊಳಗಾದವರು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಲಿ ಇರುವ ಕೆವೈಸಿ ನಿಯಮವಾಳಿಯಿಂದ ಇಂಥವರು ಡಿಜಿಟಲ್ ವ್ಯವಸ್ಥೆಯಿಂದಲೇ ದೂರವುಳಿಯುವ ಸಾಧ್ಯತೆ ಇದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಹೀಗಾಗಿ ಕೈವಿಸಿ ವಿನ್ಯಾಸವನ್ನು ಎಲ್ಲರಿಗೂ ಸರಿಹೊಂದುವಂತೆ ಬದಲಾಯಿಸುವ ಅಗತ್ಯವನ್ನು ನ್ಯಾಯಾಲಯ ಮನಗಂಡಿದೆ.