ಚುನಾವಣಾ ಬಾಂಡ್‌ಗಳ ನಂಬರ್‌ ಸಲ್ಲಿಸಿ: ಎಸ್‌ಬಿಐಗೆ ಸುಪ್ರೀಂ ಆದೇಶ

| Published : Mar 16 2024, 01:47 AM IST / Updated: Mar 16 2024, 07:48 AM IST

ಚುನಾವಣಾ ಬಾಂಡ್‌ಗಳ ನಂಬರ್‌ ಸಲ್ಲಿಸಿ: ಎಸ್‌ಬಿಐಗೆ ಸುಪ್ರೀಂ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಬಾಂಡ್‌ಗಳ ಆಲ್ಫಾ ನ್ಯೂಮರಿಕ್‌ ಸಂಖ್ಯೆಗಳನ್ನು ಸಲ್ಲಿಸುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ಗೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದ್ದು, ಏಕೆ ಈ ವಿವರವನ್ನು ಸಲ್ಲಿಸಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ನಿರ್ದೇಶನ ನೀಡಿದೆ.

ಪಿಟಿಐ ನವದೆಹಲಿ

ಚುನಾವಣಾ ಬಾಂಡ್‌ಗಳ ಆಲ್ಫಾ ನ್ಯೂಮರಿಕ್‌ ಸಂಖ್ಯೆಗಳನ್ನು ಸಲ್ಲಿಸುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ಗೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದ್ದು, ಏಕೆ ಈ ವಿವರವನ್ನು ಸಲ್ಲಿಸಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ನಿರ್ದೇಶನ ನೀಡಿದೆ.

ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡಿರುವ ಚುನಾವಣಾ ಬಾಂಡ್‌ಗಳ ವಿಶಿಷ್ಟ ಆಲ್ಫಾ ನ್ಯೂಮರಿಕ್‌ ಸಂಖ್ಯೆಗಳನ್ನು ಸಲ್ಲಿಸುವುದು ಎಸ್‌ಬಿಐನ ಕರ್ತವ್ಯ. 

ನಮ್ಮ ತೀರ್ಪಿನಲ್ಲಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರು, ಅದರ ಮೊತ್ತ ಹಾಗೂ ಖರೀದಿಯ ದಿನಾಂಕ ಸೇರಿದಂತೆ ಎಲ್ಲಾ ಮಾಹಿತಿಗಳನ್ನೂ ಸಲ್ಲಿಸಬೇಕು ಎಂದು ಎಸ್‌ಬಿಐಗೆ ಸೂಚಿಸಿದ್ದೆವು. 

ಆದರೆ ಎಸ್‌ಬಿಐ ಚುನಾವಣಾ ಬಾಂಡ್‌ಗಳ ನಂಬರ್‌ಗಳನ್ನು ಸಲ್ಲಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಪೀಠ ತರಾಟೆ ತೆಗೆದುಕೊಂಡಿದೆ.

ಈ ಕುರಿತು ಎಸ್‌ಬಿಐಗೆ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಮಾ.18ಕ್ಕೆ ನಿಗದಿಪಡಿಸಿತು.

ಆಲ್ಫಾ ನ್ಯೂಮರಿಕ್‌ ಸಂಖ್ಯೆ ಏಕೆ ಬೇಕು: ಚುನಾವಣಾ ಆಯೋಗವು ತನಗೆ ಎಸ್‌ಬಿಐ ನೀಡಿದ ಮಾಹಿತಿಯನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಿದೆ. ಅದರಲ್ಲಿ ಯಾರು ಎಷ್ಟು ಬಾಂಡ್‌ಗಳನ್ನು ಖರೀದಿಸಿದ್ದಾರೆ ಹಾಗೂ ಯಾವ ರಾಜಕೀಯ ಪಕ್ಷ ಎಷ್ಟು ಬಾಂಡ್‌ಗಳನ್ನು ನಗದೀಕರಿಸಿಕೊಂಡಿದೆ ಎಂಬುದು ಪ್ರತ್ಯೇಕವಾಗಿ ತಿಳಿಯುತ್ತದೆ. 

ಆದರೆ ಯಾವ ವ್ಯಕ್ತಿ ಅಥವಾ ಸಂಸ್ಥೆ ಖರೀದಿಸಿದ ಬಾಂಡ್‌ಗಳನ್ನು (ದೇಣಿಗೆ ನೀಡಿದ ಮೊತ್ತ) ಯಾವ ರಾಜಕೀಯ ಪಕ್ಷ ನಗದೀಕರಿಸಿಕೊಂಡಿದೆ ಎಂಬುದು ತಿಳಿಯುವುದಿಲ್ಲ. 

ಸುಪ್ರೀಂಕೋರ್ಟ್‌ ಈಗ ಕೇಳಿರುವ ವಿಶಿಷ್ಟ ಆಲ್ಫಾ ನ್ಯೂಮರಿಕ್‌ ಸಂಖ್ಯೆಗಳನ್ನು ಎಸ್‌ಬಿಐ ಸಲ್ಲಿಸಿದರೆ ಈ ಮಾಹಿತಿ ತಿಳಿಯಲಿದೆ. ಹೀಗಾಗಿ ಸುಪ್ರೀಂಕೋರ್ಟ್‌ನ ಆದೇಶ ಮಹತ್ವ ಪಡೆದಿದೆ.

ನಮಗೊಂದು ಕಾಪಿ ಕೊಡಿ: ಇದೇ ವೇಳೆ ಚುನಾವಣಾ ಆಯೋಗವು ಎಸ್‌ಬಿಐನಿಂದ ತಾನು ಸ್ವೀಕರಿಸಿದ ದತ್ತಾಂಶಗಳನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದೇನೆ. 

ದತ್ತಾಂಶಗಳನ್ನು ವೆಬ್‌ಸೈಟಿಗೆ ಅಪ್‌ಲೋಡ್‌ ಮಾಡಬೇಕೆಂಬ ಸುಪ್ರೀಂಕೋರ್ಟ್‌ನ ಆದೇಶವನ್ನು ಪೂರ್ತಿಯಾಗಿ ಪಾಲಿಸಲು ಆ ದತ್ತಾಂಶಗಳನ್ನು ತನಗೆ ಮರಳಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತು.

ಅದನ್ನು ಪರಿಗಣಿಸಿದ ಸುಪ್ರೀಂಕೋರ್ಟ್‌, ಚುನಾವಣಾ ಆಯೋಗ ನೀಡಿದ ಎಲ್ಲಾ ದತ್ತಾಂಶಗಳನ್ನು ನ್ಯಾಯಾಲಯದ ರಿಜಿಸ್ಟ್ರಾರ್‌ ಡಿಜಿಟಲೀಕರಣಗೊಳಿಸಿ ಹಾಗೂ ಸ್ಕ್ಯಾನ್‌ ಮಾಡಿಕೊಂಡು ಮೂಲ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಮರಳಿಸಬೇಕು. ಈ ಕಾರ್ಯವನ್ನು ಶನಿವಾರ ಸಂಜೆ 5 ಗಂಟೆಯೊಳಗೆ ಮುಗಿಸಬೇಕು ಎಂದು ಸೂಚಿಸಿತು.