ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು, ನಿಜವಾದ ಕೃಷಿ ವೆಚ್ಚವನ್ನು ಲೆಕ್ಕ ಹಾಕಿ, ಅದಕ್ಕೆ ಅನುಗುಣವಾಗಿ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿಪಿ) ನಿಗದಿಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸೋಮವಾರ ಒಪ್ಪಿಕೊಂಡಿದೆ. 

ನವದೆಹಲಿ: ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು, ನಿಜವಾದ ಕೃಷಿ ವೆಚ್ಚವನ್ನು ಲೆಕ್ಕ ಹಾಕಿ, ಅದಕ್ಕೆ ಅನುಗುಣವಾಗಿ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿಪಿ) ನಿಗದಿಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸೋಮವಾರ ಒಪ್ಪಿಕೊಂಡಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ಹಾಗೂ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗಕ್ಕೆ ಆದೇಶಿಸಿದೆ.

ಉತ್ಪಾದನಾ ವೆಚ್ಚಕ್ಕೂ ಕಡಿಮೆ ಬೆಲೆಗೆ ಮಾರಾಟ

ರೈತರು ತಮ್ಮ ಬೆಳೆಗಳನ್ನು ಉತ್ಪಾದನಾ ವೆಚ್ಚಕ್ಕೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಇದರಿಂದಾಗಿ ರೈತರಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾಗಿದೆ. ಕೇವಲ ಮಹಾರಾಷ್ಟ್ರದಲ್ಲಿ ಕಳೆದ 5 ವರ್ಷಗಳಲ್ಲಿ 17,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂಎಸ್‌ಪಿಯನ್ನು ನಿಗದಿಪಡಿಸುವಾಗ ಕೃಷಿ ವೆಚ್ಚ ಮತ್ತು ಶೇ.50 ಲಾಭವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಎಲ್ಲಾ ರಾಜ್ಯಗಳ ರೈತರಿಗೂ ಒಂದೇ ರೀತಿಯ ನೀತಿ ಜಾರಿಗೊಳಿಸುವುದು ಕಷ್ಟ

ಇದಕ್ಕೆ ಪ್ರತಿಕ್ರಿಯಿಸಿ ಮುಖ್ಯ ನ್ಯಾ. ಸೂರ್ಯಕಾಂತ್‌ ಹಾಗೂ ನ್ಯಾ. ಜೊಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠ, ಎಲ್ಲಾ ರಾಜ್ಯಗಳ ರೈತರಿಗೂ ಒಂದೇ ರೀತಿಯ ನೀತಿ ಜಾರಿಗೊಳಿಸುವುದು ಕಷ್ಟ. ಏಕೆಂದರೆ ದೊಡ್ಡ ಪ್ರಮಾಣದ ಭೂಮಿ ಹೊಂದಿರುವ ರೈತರೂ ಇದ್ದಾರೆ’ ಎಂದು ಹೇಳಿದೆ.

ಆದರೂ ಅರ್ಜಿಯ ವಿಚಾರಣೆಗೆ ಒಪ್ಪಿಕೊಂಡಿದ್ದು, ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದೆ.