ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖೆಗೆ ಉತ್ತರಪ್ರದೇಶ ಸರ್ಕಾರ ರಚಿಸಿರುವ ಎಸ್‌ಐಟಿಗೆ, ಇದುವರೆಗಿನ ಪ್ರಕರಣದ ತನಿಖಾ ವಸ್ತುಸ್ಥಿತಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ನವದೆಹಲಿ: ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖೆಗೆ ಉತ್ತರಪ್ರದೇಶ ಸರ್ಕಾರ ರಚಿಸಿರುವ ಎಸ್‌ಐಟಿಗೆ, ಇದುವರೆಗಿನ ಪ್ರಕರಣದ ತನಿಖಾ ವಸ್ತುಸ್ಥಿತಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ. 

ದೇಣಿಗೆ ಕಳ್ಳತನದ ಬಗ್ಗೆ ತ್ವರಿತ ಮತ್ತು ಕಾಲಮಿತಿ ತನಿಖೆಯಾಗಬೇಕು, ಸಿಬಿಐಗೆ ವಹಿಸಬೇಕು ಎಂದು ಕೋರಿ ಸುಪ್ರೀಂಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ಸಿಜೆಐ ಸೂರ್ಯಕಾಂತ್ ಅವರ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ವೇಳೆ ಈ ತೀರ್ಪು ನೀಡಿದೆ. ಈ ಸಂಬಂಧ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ಗೆ ನೋಟಿಸ್‌ ಜಾರಿಮಾಡಿದೆ. ಸೋಮವಾರ ರಾಮಮಂದಿರ ಲೂಟಿಗೆ ಸಂಬಂಧಿಸಿದಂತೆ ಮೂರು ಅರ್ಜಿಗಳ ವಿಚಾರಣೆ ಸುಪ್ರೀಂ ನಡೆಸಿತ್ತು.

ಅಯೋಧ್ಯೆ ಟ್ರಸ್ಟ್‌ಗೆ ಸಿಇಒ ನೇಮಕಕ್ಕೆ ಅರ್ಜಿ ಅಹ್ವಾನ: ಜು.18 ಕೊನೆ ದಿನ 

ಅಯೋಧ್ಯೆ: ರಾಮ ಮಂದಿರ ದೇಣಿಗೆ ಲೂಟಿ ವಿವಾದ ನಡುವೆಯೇ ಅಯೋಧ್ಯೆ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ (ಸಿಇಒ) ನೇಮಕಕ್ಕೆ ಟ್ರಸ್ಟ್‌ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಜು.18ರ ಸಂಜೆ 4 ಗಂಟೆಯ ತನಕ ಕಾಲಾವಕಾಶ ನೀಡಲಾಗಿದೆ. 

ಈ ಬಗ್ಗೆ ಟ್ರಸ್ಟ್‌ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಟ್ರಸ್ಟ್‌ನ ಮಾನದಂಡಗಳ ಪ್ರಕಾರ, ಅರ್ಜಿ ಸಲ್ಲಿಸುವವರು ಆಡಳಿತ ಅಥವಾ ಹಣಕಾಸು ವಿಷಯದಲ್ಲಿ ಪದವಿ ಪಡೆದಿರಬೇಕು. 50-70ರ ವಯೋಮಾನದವರು ಅರ್ಜಿ ಸಲ್ಲಿಸಬಹುದು. ಹಣಕಾಸು, ಆಡಳಿತ, ಸಾರ್ವಜನಿಕ ಸಂಪರ್ಕ ಸೇರಿದಂತೆ ವಿವಿಧ ವಿಷಯಗಳಲ್ಲಿ 20 ವರ್ಷಗಳ ಅನುಭವ ಹೊಂದಿರಬೇಕು. ದೇಗುಲ ಆಡಳಿತದಲ್ಲಿ ಅನುಭವ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇನ್ನು ಅರ್ಜಿ ಸಲ್ಲಿಸುವವರು ಹಿಂದೂ ಧರ್ಮಕ್ಕೆ ಸೇರಿದವರಾಗಿರಬೇಕು. ಹಿಂದಿ, ಇಂಗ್ಲೀಷ್‌ ಬಲ್ಲವರಾಗಿರಬೇಕು ಎಂದು ತಿಳಿಸಲಾಗಿದೆ.ಆಯ್ಕೆಗೊಂಡ ಸಿಇಒ ಅವಧಿ ಮೂರು ವರ್ಷಗಳ ಅವಧಿಗೆ ಇರಲಿದೆ. ಆ ಬಳಿಕ ಅವರ ಕಾರ್ಯಕ್ಷಮತೆ ಆಧಾರದಲ್ಲಿ ವಿಸ್ತರಣೆಗೊಳ್ಳಬಹುದು. ಅಯೋಧ್ಯೆಯಲ್ಲಿಯೇ ವಾಸಿಸಬೇಕು ಎಂದು ಟ್ರಸ್ಟ್‌ ತಿಳಿಸಿದೆ.

ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಿ ಸಂದರ್ಶನ ಮೂಲಕ ಮುಂದಿನ ತಿಂಗಳೊಳಗೆ ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇನ್ನು ತಿಂಗಳ ಆರಂಭದಲ್ಲಿಯೇ ಟ್ರಸ್ಟ್ ಅರ್ಜಿಗಳನ್ನು ಪರಿಶೀಲಿಸಿ ಅರ್ಹರ ಆಯ್ಕೆಗೆ ಸಮಿತಿ ರಚಿಸಿತ್ತು.

ರಾಯ್‌, ಗೋಪಾಲ್‌, ಮಿಶ್ರಾ ವಿರುದ್ಧ ಎಫ್‌ಐಆರ್‌ ಕೋರಿ ವಕೀಲರು ಕೋರ್ಟ್‌ಗೆ

ಅಯೋಧ್ಯೆ: ರಾಮಮಂದಿರ ದೇಣಿಗೆ ಕದ್ದ ಆರೋಪಿಗಳ ವಕಾಲತ್ತಿನಿಂದ ಹಿಂದೆ ಸರಿದಿದ್ದ ವಕೀಲರು ಇದೀಗ ಟ್ರಸ್ಟ್‌ನ ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌, ಮಾಜಿ ಸದಸ್ಯರಾದ ಕನ್ನಡಿಗ ಗೋಪಾಲ್‌ ನಾಗರಕಟ್ಟೆ ಮತ್ತು ಅನಿಲ್‌ ಮಿಶ್ರಾ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.ಜು.2ರಂದು ಮೂವರ ವಿರುದ್ಧ ಫೈಜಾಬಾದ್‌ ಬಾರ್ ಅಸೋಸಿಯೇಷನ್‌ ವಕೀಲರು ದೂರು ನೀಡಿ ಎಫ್‌ಐಆರ್‌ ದಾಖಲಿಸುವಂತೆ 2 ವಾರಗಳ ಗಡುವು ನೀಡಿದ್ದರು. 

ಆದರೆ ಪೊಲೀಸರು ಇದುವರೆಗೆ ದಾಖಲಿಸಿಲ್ಲ. ಹೀಗಾಗಿ ವಕೀಲರು ಕೋರ್ಟ್‌ ಮೊರೆ ಹೋಗುವುದಕ್ಕೆ ನಿರ್ಧರಿಸಿದ್ದಾರೆ.ಈ ಸಂಬಂಧ ಬಾರ್‌ ಅಸೋಸಿಯೇಷನ್‌ ಸದಸ್ಯ ಅಫ್ತಾಬ್ ಖಾನ್‌ ಪ್ರತಿಕ್ರಿಯಿಸಿದ್ದು, ‘ಎಫ್‌ಐಆರ್‌ ದಾಖಲಿಸಲು ನಾವು 2 ವಾರಗಳ ಸಮಯವಕಾಶ ನೀಡಿದ್ದೆವು. ಆದರೆ ಎಫ್‌ಐಆರ್‌ ದಾಖಲಿಸಿಲ್ಲ. ಎಸ್‌ಎಸ್‌ಪಿ ಭೇಟಿಯಾಗಿಯೂ ಮನವಿ ಮಾಡಿದ್ದೆವು. ಆದರೂ ದಾಖಲಾಗಿಲ್ಲ. ಹಾಗಾಗಿ ನಾವು ಚಂಪತ್‌, ಮಿಶ್ರಾ, ರಾವ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದಿದ್ದಾರೆ.