ಅದಾನಿಗೆ ಸೆಬಿ ಕ್ಲೀನ್‌ಚಿಟ್‌

| Published : Sep 19 2025, 01:00 AM IST

ಸಾರಾಂಶ

ಷೇರು ಮಾರುಕಟ್ಟೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಅದಾನಿ ಕಂಪನಿ ವಿರುದ್ಧ ವರದಿ ಪ್ರಕಟಿಸಿದ್ದ ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯ ವಾದವನ್ನುಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ತಿರಸ್ಕರಿಸಿದೆ. ‘ಅದಾನಿ ಕಂಪನಿ ಮತ್ತು ಅದರ ಮುಖ್ಯಸ್ಥ ಗೌತಮ್ ಅದಾನಿ ಅವರು ಯಾವುದೇ ಅಕ್ರಮ ನಡೆಸಿಲ್ಲ’ ಎಂದು ಗುರುವಾರ ಕ್ಲೀನ್‌ಚಿಟ್‌ ನೀಡಿದೆ.

ಹಿಂಡನ್‌ಬರ್ಗ್‌ ಆರೋಪ ನಿರಾಧಾರ: ಸೆಬಿ

ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಅದಾನಿ ಕಂಪನಿ ವಿರುದ್ಧ ವರದಿ ಪ್ರಕಟಿಸಿದ್ದ ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯ ವಾದವನ್ನುಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ತಿರಸ್ಕರಿಸಿದೆ. ‘ಅದಾನಿ ಕಂಪನಿ ಮತ್ತು ಅದರ ಮುಖ್ಯಸ್ಥ ಗೌತಮ್ ಅದಾನಿ ಅವರು ಯಾವುದೇ ಅಕ್ರಮ ನಡೆಸಿಲ್ಲ’ ಎಂದು ಗುರುವಾರ ಕ್ಲೀನ್‌ಚಿಟ್‌ ನೀಡಿದೆ.

ತನ್ನ ತನಿಖಾ ವರದಿಯಲ್ಲಿ, ‘3 ಕಂಪನಿಗಳ ಮುಖಾಂತರ ಅದಾನಿ ಕಂಪನಿಯು ಅಕ್ರಮ ನಡೆಸಿದೆ ಎಂಬುದು ಕಂಡುಬಂದಿಲ್ಲ. ಜೊತೆಗೆ ಹಿಂಡನ್‌ಬರ್ಗ್‌ ವರದಿಗೆ ಪೂರಕವಾಗಿ ಯಾವುದೇ ಸಾಕ್ಷಿಗಳು ಸಿಗಲಿಲ್ಲ. ಹೀಗಾಗಿ ಅದಾನಿ ಕಂಪನಿಯ ವಿರುದ್ಧ ಎಲ್ಲಾ ಪ್ರಕರಣಗಳನ್ನು ಕೈ ಬಿಡಲಾಗಿದೆ’ ಎಂದು ಹೇಳಿದೆ.

ಏನಿದು ಹಗರಣ?:

‘ಅಡಿಕಾರ್ಪ್ ಎಂಟರ್‌ಪ್ರೈಸಸ್, ಮೈಲ್‌ಸ್ಟೋನ್ ಟ್ರೇಡ್‌ಲಿಂಕ್ಸ್ ಮತ್ತು ರೆಹ್ವಾರ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗಳನ್ನು ಅದಾನಿ ಗುಂಪಿನ ಸಂಸ್ಥೆಗಳ ನಡುವೆ ಹಣ ಸಾಗಿಸಲು ಮಾರ್ಗ ಮಾಡಿಕೊಳ್ಳಲಾಗಿತ್ತು. ವಹಿವಾಟು ನಿಯಮಗಳಿಂದ ತಪ್ಪಿಸಿಕೊಳ್ಳಲು ಅದಾನಿ ಸಮೂಹ ಹೀಗೆ ಮಾಡಿತ್ತು. ಇದರಿಂದ ಸಮೂಹಕ್ಕೆ ಭಾರಿ ಲಾಭವಾಗಿತ್ತು’ ಎಂದು 2023ರಲ್ಲಿ ಹಿಂಡನ್‌ಬರ್ಗ್‌ ಸಂಸ್ಥೆ ಆರೋಪಿಸಿತ್ತು. ಇದರ ಬೆನ್ನಲ್ಲೇ ಕಂಪನಿಯ ಮೌಲ್ಯವು ಭಾರಿ ಕುಸಿತ ಕಂಡಿತ್ತು.

==

ಮನಿಗೇಮ್‌ ನಿಷೇಧ ಅ.1ರಿಂದ ಜಾರಿ: ಆಡುವವರಿಗೆ ಶಿಕ್ಷೆ ಇಲ್ಲ

ನವದೆಹಲಿ: ನೈಜ ಹಣ ಬಳಸಿ ಆಡುವ ಎಲ್ಲಾ ಆನ್‌ಲೈನ್‌ ಆಟ (ಮನಿ ಗೇಮ್‌) ರದ್ದುಗೊಳಿಸುವ ‘ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ’ ಅ.1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.‘ಈ ಕಾಯ್ದೆಯಡಿ ಎಲ್ಲಾ ನಿಯಮಗಳು ಅಂತಿಮಗೊಂಡಿದ್ದು, ಅ.1ರಿಂದ ಜಾರಿಗೆ ತರಲಾಗುವುದು. ಇದರಡಿ ಹಣವನ್ನು ಒಳಗೊಂಡ ಆಟ ಆಡುವವರಿಗೆ ಶಿಕ್ಷೆ ಇರುವುದಿಲ್ಲ. ಬದಲಿಗೆ ಸೇವಾ ಪೂರೈಕೆದಾರರು, ಜಾಹೀರಾತುದಾರರು, ಪ್ರವರ್ತಕರು ಮತ್ತು ಅಂತಹ ಆಟಗಳಿಗೆ ಆರ್ಥಿಕವಾಗಿ ಬೆಂಬಲಿಸುವವರು ಶಿಕ್ಷೆಗೆ ಅರ್ಹರಾಗುತ್ತಾರೆ’ ಎಂದೂ ವೈಷ್ಣವ್‌ ತಿಳಿಸಿದರು.ಕಳೆದ ತಿಂಗಳು ಈ ಮಸೂದೆಯು ಉಭಯ ಸದನಗಳಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದಿತ್ತು.

==

ಜಿಎಸ್ಟಿ ಇಳಿಕೆ ಎಫೆಕ್ಟ್: ಮಾರುತಿ ಕಾರು ಬೆಲೆ 1.30 ಲಕ್ಷ ರು.ವರೆಗೆ ಕಡಿತ

ಆಲ್ಟೋ ಕೆ-10 ಬೆಲೆ ₹1.07 ಲಕ್ಷ ಇಳಿಕೆ । ಸೆ.22ರಿಂದ ಜಾರಿ

ನವದೆಹಲಿ: ಜಿಎಸ್ಟಿ ಇಳಿಕೆ ಘೋಷಣೆ ಬೆನ್ನಲ್ಲೇ ದೇಶದ ಬಹುದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ಸೆ.22ರಿಂದ ತನ್ನ ವಿವಿಧ ಕಾರುಗಳ ಬೆಲೆಯಲ್ಲಿ 1.29 ಲಕ್ಷ ರು.ಗಳವರೆಗೆ ಕಡಿತ ಮಾಡುವುದಾಗಿ ಗುರುವಾರ ಘೋಷಿಸಿದೆ.ಜಿಎಸ್‌ಟಿ ಇಳಿಕೆಯ ಲಾಭವನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ರೀತಿ ಮಾಡಿರುವುದಾಗಿ ಅದು ತಿಳಿಸಿದೆ.

ಎಸ್ ಪ್ರೆಸ್ಸೊ ಬೆಲೆ 1,29,600 ರು.ಗಳವರೆಗೆ, ಮಧ್ಯಮ ವರ್ಗದ ಅತಿ ಜನಪ್ರಿಯ ‘ಆಲ್ಟೊ ಕೆ-10’ ಬೆಲೆ 1,07,600 ರು.ಗಳವರೆಗೆ, ಸೆಲೆರಿಯೊ 94,100 ರು.ಗಳವರೆಗೆ, ವ್ಯಾಗನ್-ಆರ್ 79,600 ರು.ಗ ಳವರೆಗೆ ಮತ್ತು ಇಗ್ನಿಸ್ ಬೆಲೆ 71,300 ರು.ಗಳವರೆಗೆ ಕಡಿಮೆಯಾಗಲಿವೆ ಎಂದು ಕಂಪನಿ ತಿಳಿಸಿದೆ.

==

ನಾನು ಎಲ್ಲಾ ಧರ್ಮಗಳನ್ನು ಗೌರವಿಸ್ತೇನೆ: ಸಿಜೆಐ ಸ್ಪಷ್ಟನೆ

ವಿಷ್ಣು ಕುರಿತ ವಿವಾದಕ್ಕೆ ಸ್ಪಷ್ಟೀಕರಣ

ಮುರಿದ ವಿಗ್ರಹ ಸರಿ ಮಾಡಲು ವಿಷ್ಣುವನ್ನೇ ಕೇಳಿ ಎಂದಿದ್ದ ಗವಾಯಿ

ನವದೆಹಲಿ: ತಲೆ ಮುರಿದ ವಿಷ್ಣುವಿನ ವಿಗ್ರಹವನ್ನು ಸರಿಪಡಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆ ವೇಳೆ ‘ಆ ಬಗ್ಗೆ ಹೋಗಿ ವಿಷ್ಣುವನ್ನೇ ಕೇಳು’ ಎಂದಿದ್ದ ಮುಖ್ಯ ನ್ಯಾ। ಬಿ.ಆರ್‌. ಗವಾಯಿ ಅವರು ಇದೀಗ, ‘ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಅನ್ಯ ರೀತಿ ವ್ಯಾಖ್ಯಾನಿಸಲಾಗಿದೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.ಮಧ್ಯಪ್ರದೇಶದ ಯುನೆಸ್ಕೋ ತಾಣ ಖಜುರಾಹೋದಲ್ಲಿ 7 ಅಡಿ ಎತ್ತರದ ವಿಷ್ಣು ಮೂರ್ತಿಯ ತಲೆ ತುಂಡಾಗಿದ್ದು, ಅದನ್ನು ಸರಿಪಡಿಸುವಂತೆ ರಾಕೇಶ್‌ ದಲಾಲ್‌ ಎಂಬುವವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದ ಗವಾಯಿ, ‘ನೀವು ವಿಷ್ಣುವಿನ ಪರಮ ಭಕ್ತರೇ ಆಗಿದ್ದರೆ, ಹೋಗಿ ಏನಾದರೂ ಮಾಡುವಂತೆ ಅವರಲ್ಲೇ ಕೇಳಿಕೊಳ್ಳಿ’ ಎಂದಿದ್ದರು. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದನ್ನು ಗಮನಿಸಿದ ಅವರು ಹೀಗೆ ಹೇಳಿದ್ದಾರೆ.