ಸಾರಾಂಶ
ಸುಕ್ಮಾ: ಛತ್ತೀಸಗಢದಲ್ಲಿ ಮತ್ತೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಸುಕ್ಮಾ ಜಿಲ್ಲೆಯಲ್ಲಿ 10 ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಎನ್‌ಕೌಂಟರ್‌ಗೆ ಬಲಿಯಾದ ಮಾವೋವಾದಿಗಳ ಸಂಖ್ಯೆ 207ಕ್ಕೇರಿಕೆಯಾಗಿದೆ.ಶುಕ್ರವಾರ ಮುಂಜಾನೆ ಭದ್ರತಾ ಸಿಬ್ಬಂದಿಗಳ ತಂಡವು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಇಲ್ಲಿ ಭೆಜ್ಜಿ ಠಾಣಾ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಚಕಮಕಿ ನಡೆದಿದೆ.
ಆಗ 10 ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಇದರ ಜೊತೆಗೆ ಐಎನ್‌ಎಸ್‌ಎಎಸ್ ರೈಫಲ್, ಎಕೆ-47 ರೈಫಲ್ ಮತ್ತು ಸೆಲ್ಫ್ ಲೋಡಿಂಗ್ ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ರಿಸರ್ವ್ ಗಾರ್ಡ್ ( ಡಿಆರ್‌ಜಿ) , ಕೇಂದ್ರೀಯ ಮೀಸಲು ಪಡೆ ( ಸಿಆರ್‌ಪಿಎಫ್) ಪೊಲೀಸರು ಕಾರ್ಯಾಚರಣೆಯನ್ನು ಮುಂದುವರೆಸಿವೆ.
ಕೊರಜಗುಡ, ದಾಂತೇಸ್ಪುರಂ, ನಗರಂ, ಭಾಂಡರಪದರ್ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ನಕ್ಸಲರ ಕೊಂಟಾ ಮತ್ತು ಕಿಸ್ತಾಮ್ ಸಮುದಾಯ ಮಾವೋವಾದಿಗಳ ಅಡಗಿರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆಯನ್ನು ಕೈಗೊಂಡಿದ್ದರು.
ಸಿಎಂ ಶ್ಲಾಘನೆ: ನಕ್ಸಲೀಯ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಶ್ಲಾಘಿಸಿದ್ದಾರೆ. ‘ಸುಕ್ಮಾದಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 10 ನಕ್ಸಲರನ್ನು ಹತ್ಯೆ ಮಾಡಿದೆ. ರಾಜ್ಯ ಸರ್ಕಾರ ನಕ್ಸಲರ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಅನುಸರಿಸುತ್ತದೆ. ಬಸ್ತಾರ್‌ನಲ್ಲಿ ಅಭಿವೃದ್ಧಿ ಮತ್ತು ಶಾಂತಿ ಸರ್ಕಾರದ ಮೂಲ ಆದ್ಯತೆಯಾಗಿದೆ. ರಾಜ್ಯದಲ್ಲಿ ನಕ್ಸಲ್ ನಿರ್ಮೂಲನೆ ಮಾಡುವುದು ನಿಶ್ಚಿತ’ ಎಂದಿದ್ದಾರೆ.
200ರ ಗಡಿ ದಾಟಿದ ನಕ್ಸಲರ ಸಂಹಾರ:
ಈ ವರ್ಷ ಛತ್ತೀಸಗಢದಲ್ಲಿ ಭದ್ರತಾ ಪಡೆಗಳು ಮಾವೋವಾದಿಗಳ ವಿರುದ್ಧ ಭರ್ಜರಿ ಕಾರ್ಯಾಚರಣೆಗಳನ್ನು ನಡೆಸಿದ್ದರು. ಪರಿಣಾಮ ರಾಜ್ಯದಲ್ಲಿ ಈ ವರ್ಷ 207 ನಕ್ಸಲರು ಭದ್ರತಾ ಸಿಬ್ಬಂದಿಗಳ ಗುಂಡಿಗೆ ಬಲಿಯಾಗಿದ್ದಾರೆ.