ಸಾರಾಂಶ
ನವದೆಹಲಿ: ಭಾರತ ಹಿರಿಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಎರಡು ಬದಲಾವಣೆಗಳನ್ನು ಮಾಡಲು ಬಿಸಿಸಿಐ ನಿರ್ಧರಿಸಿದ್ದು, ಆಯ್ಕೆಗಾರ ಹುದ್ದೆಗೆ ಶುಕ್ರವಾರ ಅರ್ಜಿ ಆಹ್ವಾನಿಸಿದೆ.
ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್‌ರ ಗುತ್ತಿಗೆಯನ್ನು 2027ರ ಟಿ20 ವಿಶ್ವಕಪ್ ವರೆಗೂ ವಿಸ್ತರಿಸಿದ ಮರು ದಿನವೇ, ಸಮಿತಿಯ ಸದಸ್ಯರನ್ನು ಬದಲಿಸುವುದಾಗಿ ತಿಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಮಿತಿಯಲ್ಲಿ ಎಸ್.ಶರತ್, ಕಿರಿಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕಗೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಅಜಯ್ ರಾತ್ರಾ ಇತ್ತೀಚೆಗೆ ಆಯ್ಕೆಯಾಗಿರುವ ಕಾರಣ ಅವರನ್ನು ಮುಂದುವರಿಸುವ ಸಾಧ್ಯತೆ ಇದೆ. ಹೀಗಾಗಿ, ಶಿವಸುಂದರ್ ದಾಸ್ ಹಾಗೂ ಸುಬ್ರತೊ ಬ್ಯಾನರ್ಜಿ ಪೈಕಿ ಒಬ್ಬರು ಹುದ್ದೆ ಕಳೆದುಕೊಳ್ಳಲಿದ್ದಾರೆ.
7 ಟೆಸ್ಟ್ ಅಥವಾ 30 ಪ್ರ.ದರ್ಜೆ ಪಂದ್ಯ ಇಲ್ಲವೇ 10 ಏಕದಿನ ಹಾಗೂ 20 ಪ್ರ.ದರ್ಜೆ ಪಂದ್ಯ ಆಡಿರುವ, ನಿವೃತ್ತಿ ಪಡೆದು 5 ವರ್ಷ ಪೂರೈಸಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಸೆ.10 ಕೊನೆ ದಿನ.