ಸಾರಾಂಶ
ಸೆನ್ಸೆಕ್ಸ್ ಹಾಗೂ ನಿಫ್ಟಿ ಶುಕ್ರವಾರ ಸಾರ್ವಕಾಲಿಕ ಗರಿಷ್ಠಕ್ಕೆ ಏರಿಕೆ ಕಂಡಿವೆ. 999 ಅಂಕಗಳ ಏರಿಕೆಯೊಂದಿದೆ ಸೆನ್ಸೆಕ್ಸ್ 72720 ಅಂಕಗಳಿಗೆ ಹಾಗೂ 281 ಅಂಕಗಳ ಏರಿಕೆಯೊಂದಿಗೆ ನಿಫ್ಟಿ 21928 ಅಂಕಗಳಿಗೆ ಏರಿದೆ.
ಮುಂಬೈ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಶುಕ್ರವಾರ ಸಾರ್ವಕಾಲಿಕ ಗರಿಷ್ಠಕ್ಕೆ ಏರಿಕೆ ಕಂಡಿವೆ. 999 ಅಂಕಗಳ ಏರಿಕೆಯೊಂದಿದೆ ಸೆನ್ಸೆಕ್ಸ್ 72720 ಅಂಕಗಳಿಗೆ ಹಾಗೂ 281 ಅಂಕಗಳ ಏರಿಕೆಯೊಂದಿಗೆ ನಿಫ್ಟಿ 21928 ಅಂಕಗಳಿಗೆ ಏರಿಕೆ ದಾಖಲಿಸಿವೆ.
ಇದರಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನ 6.88 ಲಕ್ಷ ಕೋಟಿ ರು. ಹೆಚ್ಚಿದ್ದು, ಮಾರುಕಟ್ಟೆ ಸಂಪತ್ತು 3,73,29,676.27ಕ್ಕೆ ಏರಿದೆ.ಐಟಿ ಕಂಪನಿ ಷೇರುಗಳ ಜಿಗಿತ ಹಾಗೂ ವಿದೇಶಿ ಪೇಟೆಗಳ ಏರಿಕೆಯು ಇದಕ್ಕೆ ಕಾರಣವಾಗಿದೆ.
ಇನ್ಫೋಸಿಸ್ ಕಂಪನಿಯ ಷೇರುಗಳು ಅತಿಹೆಚ್ಚು ಶೇ.8ರಷ್ಟು ಏರಿಕೆ ಕಂಡಿದ್ದು, ಟಾಟಾ ಕನ್ಸಲ್ಟನ್ಸಿ ಸರ್ವೀಸ್ ಶೇ.4ರಷ್ಟು ಏರಿಕೆ ಕಂಡಿದೆ. ವಿದೇಶಿ ಮಾರುಕಟ್ಟೆಯಲ್ಲಿನ ಏರಿಕೆ ಮತ್ತು ಹೂಡಿಕೆ ಹೆಚ್ಚಳದಿಂದಾಗಿ ಷೇರು ಮಾರುಕಟ್ಟೆ ಏರಿಕೆ ಕಂಡಿದೆ. ಮಹೀಂದ್ರಾ, ವಿಪ್ರೋ, ಎಚ್‌ಸಿಎಲ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳು ಏರಿಕೆ ಕಂಡಿವೆ. ಇನ್ಫೋಸಿಸ್‌ನ ಮಹತ್ವದ ಏರಿಕೆ ಹಾಗೂ ಟಿಸಿಎಸ್ ಷೇರುಗಳ ಗಳಿಕೆಯಿಂದ ಷೇರು ಮಾರುಕಟ್ಟೆ ಸಾರ್ವಕಾಲಿಕ ಗರಿಷ್ಠವನ್ನು ತಲುಪಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸ್‌ನ ಮುಖ್ಯ ಹೂಡಿಕೆದಾರ ವಿ.ಕೆ. ವಿಜಯ್‌ಕುಮಾರ್ ಹೇಳಿದ್ದಾರೆ.ಗುರುವಾರ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 71721 ಮತ್ತು ನಿಫ್ಟಿ 21647 ಅಂಕಗಳಲ್ಲಿ ವಹಿವಾಟು ಮುಗಿಸಿದ್ದವು.