ಭಾರತಕ್ಕೆ 26/11 ಮುಂಬೈ ಭಯೋತ್ಪಾದಕ ದಾಳಿಯ ರೂವಾರಿಗಳಲ್ಲಿ ಒಬ್ಬ ರಾಣಾ ಗಡೀಪಾರು ಮಾಡಲು ಅಮೆರಿಕ ಕೋರ್ಟ್‌ ಒಪ್ಪಿಗೆ

| Published : Aug 18 2024, 01:46 AM IST / Updated: Aug 18 2024, 05:08 AM IST

ಭಾರತಕ್ಕೆ 26/11 ಮುಂಬೈ ಭಯೋತ್ಪಾದಕ ದಾಳಿಯ ರೂವಾರಿಗಳಲ್ಲಿ ಒಬ್ಬ ರಾಣಾ ಗಡೀಪಾರು ಮಾಡಲು ಅಮೆರಿಕ ಕೋರ್ಟ್‌ ಒಪ್ಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

26/11 ಮುಂಬೈ ಭಯೋತ್ಪಾದಕ ದಾಳಿಯ ರೂವಾರಿಗಳಲ್ಲಿ ಒಬ್ಬನಾದ ಪಾಕಿಸ್ತಾನ ಮೂಲದ ಕೆನಡಾದ ಉಗ್ರ ತಹಾವ್ವುರ್‌ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಅಮೆರಿಕದ ಮೇಲ್ಮನವಿ ನ್ಯಾಯಾಲಯ ಒಪ್ಪಿಗೆ ನೀಡಿದೆ.

 ವಾಷಿಂಗ್ಟನ್‌ :  26/11 ಮುಂಬೈ ಭಯೋತ್ಪಾದಕ ದಾಳಿಯ ರೂವಾರಿಗಳಲ್ಲಿ ಒಬ್ಬನಾದ ಪಾಕಿಸ್ತಾನ ಮೂಲದ ಕೆನಡಾದ ಉಗ್ರ ತಹಾವ್ವುರ್‌ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಅಮೆರಿಕದ ಮೇಲ್ಮನವಿ ನ್ಯಾಯಾಲಯ ಒಪ್ಪಿಗೆ ನೀಡಿದೆ. ಹೀಗಾಗಿ ಭಾರತದ ತನಿಖಾ ಸಂಸ್ಥೆಗಳಿಗೆ ದೊಡ್ಡ ಜಯ ಲಭಿಸಿದಂತಾಗಿದೆ. ಆದರೂ, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಣಾಗೆ ಅವಕಾಶ ಇರುವುದರಿಂದ ಆತ ಸದ್ಯಕ್ಕೆ ಭಾರತದ ತನಿಖಾ ಏಜೆನ್ಸಿಗಳ ಕೈಗೆ ಸಿಗುವುದು ಅನುಮಾನವಾಗಿದೆ.

166 ಜನರನ್ನು ಬಲಿ ಪಡೆದ 2008ರ ಮುಂಬೈ ದಾಳಿಯಲ್ಲಿ ಕೆಲ ಅಮೆರಿಕನ್ನರು ಸಂತ್ರಸ್ತರಾಗಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ತನಿಖಾ ಏಜೆನ್ಸಿಗಳು ಈಗಾಗಲೇ ಈತನನ್ನು ಬಂಧಿಸಿ, ಏಳು ವರ್ಷಗಳ ಜೈಲುಶಿಕ್ಷೆ ವಿಧಿಸಿವೆ. ಆ ಶಿಕ್ಷೆ ಮುಗಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ರಾಣಾನನ್ನು ತನಗೆ ನೀಡಬೇಕೆಂದು ಅಮೆರಿಕವನ್ನು ಕೋರಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳನ್ನು ನೀಡಿ ರಾಣಾ ತನ್ನನ್ನು ಗಡೀಪಾರು ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕದಲ್ಲಿ ಕೋರ್ಟ್‌ಗೆ ಹೋಗಿದ್ದ.

ವಿಚಾರಣಾ ನ್ಯಾಯಾಲಯವು ಆತನ ಗಡೀಪಾರಿಗೆ ಒಪ್ಪಿ ತೀರ್ಪು ನೀಡಿತ್ತು. ಅದನ್ನು ಆತ ಮೇಲ್ಮನವಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಮೇಲ್ಮನವಿ ನ್ಯಾಯಾಲಯ ಕೂಡ ಇದೀಗ, ‘ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಭಾರತ-ಅಮೆರಿಕ ನಡುವಿನ ಒಪ್ಪಂದದಲ್ಲಿ ಅವಕಾಶವಿದೆ. ಭಾರತದ ತನಿಖಾ ಸಂಸ್ಥೆಗಳ ಬಳಿ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ರಾಣಾನ ಪಾತ್ರವಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಗಳಿವೆ’ ಎಂದು ತೀರ್ಪು ನೀಡಿದೆ.