ಹರ್ಯಾಣ ಸರ್ಕಾರ ವಜಾಗೆ ಕಾಂಗ್ರೆಸ್‌ ಪಟ್ಟು

| Published : May 09 2024, 01:00 AM IST / Updated: May 09 2024, 05:13 AM IST

ಸಾರಾಂಶ

3 ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದ ಕಾರಣ ಹರ್ಯಾಣ ಬಿಜೆಪಿ ಸರ್ಕಾರಕ್ಕೆ ಪತನದ ಭೀತಿ ಆವರಿಸಿದ್ದು, ಸತತ 2ನೇ ದಿನವಾದ ಬುಧವಾರ ಕೂಡ ಅನಿಶ್ಚಿತ ಪರಿಸ್ಥಿತಿ ಮುಂದುವರಿದಿದೆ.

ಚಂಡೀಗಢ: 3 ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದ ಕಾರಣ ಹರ್ಯಾಣ ಬಿಜೆಪಿ ಸರ್ಕಾರಕ್ಕೆ ಪತನದ ಭೀತಿ ಆವರಿಸಿದ್ದು, ಸತತ 2ನೇ ದಿನವಾದ ಬುಧವಾರ ಕೂಡ ಅನಿಶ್ಚಿತ ಪರಿಸ್ಥಿತಿ ಮುಂದುವರಿದಿದೆ. ಬಿಜೆಪಿ ತನ್ನ ಸರ್ಕಾರ ಸುಭದ್ರವಾಗಿದೆ. ಕೆಲವು ವಿಪಕ್ಷ ನಾಯಕರು ನಮ್ಮ ಸಂಪರ್ಕಸಲ್ಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದರೆ, ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಕಾಂಗ್ರೆಸ್‌ ಒತ್ತಾಯಿಸಿದೆ.

ಮುಖ್ಯಮಂತ್ರಿ ನಯಬ್‌ ಸಿಂಗ್‌ ಸೈನಿ ಮಾತನಾಡಿ, ‘ನಮ್ಮ ಸರ್ಕಾರ ಸುರಕ್ಷಿತವಾಗಿದೆ. ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದೆ’ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಮನೋಹರಲಾಲ್‌ ಖಟ್ಟರ್‌ ಮಾತನಾಡಿ, ಕೆಲವು ಕಾಂಗ್ರೆಸ್‌ ಹಾಗೂ ವಿಪಕ್ಷ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲಿ ಯಾರು ಎಂಬುದು ಬಯಲಾಗಲಿದೆ ಎಂದು ಬಾಂಬ್‌ ಸಿಡಿಸಿದ್ದಾರೆ.

ಈ ನಡುವೆ, ವಿಪಕ್ಷ ಜೆಜೆಪಿ ಮುಖಂಡ ದುಷ್ಯಂತ್‌ ಚೌಟಾಲಾ ಮಾತನಾಡಿ, ‘ಕಾಂಗ್ರೆಸ್‌ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿದರೆ ನಮ್ಮ ಪಕ್ಷ ನಿರ್ಣಐ ಬೆಂಬಲಿಸಲಿದೆ. ಎಲ್ಲವೂ ಕಾಂಗ್ರೆಸ್‌ ಮೇಲೆ ಅವಲಂಬಿತವಾಗಿದೆ’ ಎಂದಿದ್ದಾರೆ.

ಈ ನಡುವೆ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಉದಯ ಭಾನ್‌ ಮಾತನಾಡಿ, ‘ಸರ್ಕಾರ ಅಲ್ಪಮತಕ್ಕೆ ಇಳಿದಿದೆ. ಹೀಗಾಗಿ ಕೂಡಲೇ ಸರ್ಕಾರ ವಜಾ ಮಾಡಿ ವಿಧಾನಸಭೆ ವಿಸರ್ಜಿಸಬೇಕು ಹಾಗೂ ಹೊಸದಾಗಿ ಚುನಾವಣೆಗಳನ್ನು ಘೋಷಿಸಬೇಕು ಎಂದು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಪತ್ರ ಬರೆಯುತ್ತೇವೆ’ ಎಂದು ಹೇಳಿದ್ದಾರೆ.