ಎನ್‌ಡಿಎ ಸರ್ಕಾರವಿರುವ ರಾಜ್ಯಗಳಲ್ಲಿ 2029ರೊಳಗೆ ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. 2029ರ ಚುನಾವಣೆಗೂ ಮುನ್ನ ಕೋಮುಭಾವನೆ ಕೆರಳಿಸಲು ಯುಸಿಸಿಯನ್ನು ಬಿಜೆಪಿ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.

- ಬಿಜೆಪಿಯಿಂದ ವೋಟ್‌ ಬ್ಯಾಂಕ್‌ ರಾಜಕೀಯ: ಪ್ರತಿಪಕ್ಷ

- ಮಾತುಕತೆ ನಡೆಸಿಲ್ಲ: ಶಾ ಹೇಳಿಕೆಗೆ ಮಿತ್ರರ ಬೇಸರನವದೆಹಲಿ: ಎನ್‌ಡಿಎ ಸರ್ಕಾರವಿರುವ ರಾಜ್ಯಗಳಲ್ಲಿ 2029ರೊಳಗೆ ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. 2029ರ ಚುನಾವಣೆಗೂ ಮುನ್ನ ಕೋಮುಭಾವನೆ ಕೆರಳಿಸಲು ಯುಸಿಸಿಯನ್ನು ಬಿಜೆಪಿ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.

ಈ ನಡುವೆ, ಎನ್‌ಡಿಎ ಮಿತ್ರಪಕ್ಷವಾದ ಜೆಡಿಯುನಿಂದಲೂ ಯುಸಿಸಿ ಜಾರಿಗೆ ಸಂಬಂಧಿಸಿ ಅಪಸ್ವರ ಕೇಳಿಬಂದಿದ್ದು, ಈ ಕುರಿತು ಶೀಘ್ರದಲ್ಲೇ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ತಿಳಿಸಿದೆ.

ವಿಪಕ್ಷ ಕಿಡಿ:

ಯುಸಿಸಿಗೆ ಡಿಎಂಕೆ, ಸಿಪಿಎಂ, ಎಐಎಂಐಎಂ ಪಕ್ಷಗ‍ಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಸಂವಿಧಾನ ವಿರೋಧಿ ಎಂದು ಆರೋಪಿಸಿವೆ. ಏಕರೂಪತೆಯು ಸಮಾನತೆಗೆ ದಾರಿ ಮಾಡಿಕೊಡುತ್ತದೆ ಎಂಬ ಗ್ಯಾರಂಟಿ ಇಲ್ಲ. ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಹಿಂದೂ ಮತಗಳನ್ನು ಕ್ರೋಢೀಕರಿಸುವುದೇ ಬಿಜೆಪಿ ಉದ್ದೇಶ. ನಿರುದ್ಯೋಗ, ಬೆಲೆ ಏರಿಕೆಯಂಥ ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಸಿಪಿಎಂ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದೆ.

ಇನ್ನು ಡಿಎಂಕೆ ನಾಯಕ ಟಿ.ಕೆ.ಎಸ್‌.ಎಳಂಗೋವನ್‌ ಯುಸಿಸಿ ಜಾರಿ ಅಸಾಂವಿಧಾನಿಕ ಎಂದಿದ್ದಾರೆ. ಈ ಕಾನೂನು ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದ್ದರೆ, ಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ, ಶಾ ಅವರು ಮುಸ್ಲಿಮರನ್ನು ಗುರಿ ಮಾಡಲೆಂದೇ ಯುಸಿಸಿ ಜಾರಿಗೆ ಉದ್ದೇಶಿಸಿದ್ದಾರೆ. ಬಹುತ್ವವೇ ನಮ್ಮ ದೇಶದ ಆತ್ಮ. ಯುಸಿಸಿಯು ಹಿಂದೂಯೇತರರ ಮೇಲೆ, ಹಿಂದೂಗಳ ಕಾನೂನು ಹೇರುತ್ತದೆ ಎಂದು ದೂರಿದ್ದಾರೆ.

ಜೆಡಿಯು ವಿರೋಧ?:

ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಯು ಕಾರ್ಯಕಾರಿ ಅಧ್ಯಕ್ಷ ಶ್ಯಾಮ್‌ ರಜಕ್‌ ಮಾತ್ರ ಸಂಸತ್ತಿನಲ್ಲಿ ಯುಸಿಸಿ ಬಿಲ್‌ ಬೆಂಬಲಿಸಿದರೂ ಬಿಹಾರದಲ್ಲಿ ಅದರ ಜಾರಿಗೆ ನಮ್ಮ ವಿರೋಧವಿದೆ. ಯುಸಿಸಿ ಬಗ್ಗೆ ಚರ್ಚೆಗೆ ಶೀಘ್ರದಲ್ಲೇ ಶಾರನ್ನು ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಜೆಡಿಯು ರೀತಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಟಿಡಿಪಿ ಕೂಡ ಯುಸಿಸಿ ಜಾರಿಗೆ ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಲಾಗಿದ್ದರೂ ಪಕ್ಷದ ಅಧ್ಯಕ್ಷ ಪಿ.ಶ್ರೀನಿವಾಸ ರಾವ್‌ ಮಾತ್ರ ಮೈತ್ರಿಕೂಟದ ಭಾಗವಾಗಿ ನಾವು ಶಾರ ಹೇಳಿಕೆಗೆ ಬದ್ಧರಿದ್ದೇವೆ. ಯುಸಿಸಿಯು ದೇಶವನ್ನು ಒಗ್ಗೂಡಿಸಲಿದೆ ಮತ್ತು ಇನ್ನಷ್ಟು ಬಲಪಡಿಸಲಿದೆ ಎಂಬುದು ನಮ್ಮ ಭಾವನೆ ಎಂದಿದ್ದಾರೆ.